ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಸ್ನೇಹಿ ನಗರಕ್ಕೆ ದೂರದೃಷ್ಟಿ ಅಗತ್ಯ...

ಪ್ರಮುಖ ಬಡಾವಣೆಗಳಲ್ಲಿ ಸಮುದಾಯ ಪಾರ್ಕಿಂಗ್‌ l ಕಾರ್ ಪೂಲಿಂಗ್ ವ್ಯವಸ್ಥೆ ಜಾರಿ l 250 ಕಡೆ ಪಾದಚಾರಿ ಕ್ರಾಸಿಂಗ್‌ ವ್ಯವಸ್ಥೆ
Last Updated 4 ಜೂನ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಸಮರ್ಪಕ ರಸ್ತೆ ಸಂಪರ್ಕ ಜಾಲ, ಸಂಯೋಜಿತ ಯೋಜನೆ– ದೂರದೃಷ್ಟಿ, ಆಡಳಿತ– ಅನುಷ್ಠಾನ ಮಧ್ಯೆ ಸಮನ್ವಯದಿಂದ ಮಾತ್ರ ನಗರದಲ್ಲಿನ ‘ಟ್ರಾಫಿಕ್‌ ಜಾಮ್‌’ ಎಂಬ ನಿತ್ಯ ನರಕಯಾತನೆಯಿಂದ ಮುಕ್ತರಾಗಲು, ಬೆಂಗಳೂರನ್ನು ಸಂಚಾರಸ್ನೇಹಿ ನಗರವಾಗಿಸಲು ಸಾಧ್ಯ...’

– ಇದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಪಿ. ಹರಿಶೇಖರನ್‌ ಅವರ ಸ್ಪಷ್ಟ ಮಾತು– ಕಾಳಜಿ.

‘ಪ್ರಜಾವಾಣಿ’ ಕಚೇರಿಯಲ್ಲಿ ಮಂಗಳವಾರ ನಡೆದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಎದುರಾದ ನೂರಾರು ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಅವರು, ನಗರದ ಸಂಚಾರ ದಟ್ಟಣೆಯ ವಿಶ್ವರೂಪವನ್ನೇ ಬಿಚ್ಚಿಟ್ಟರು. ಅಧಿಕಾರ ಮಿತಿಯೊಳಗೆ ಸಮಸ್ಯೆಗಳಿಗೆ ಪರಿಹಾರದ ಉತ್ತರಗಳನ್ನು ನೀಡುತ್ತಲೇ, ಭವಿಷ್ಯದಲ್ಲಿ ಸಂಚಾರ ಪರಿಸ್ಥಿತಿ ಇನ್ನಷ್ಟು ಬಿಗಾಡಾಯಿಸಬಹುದಾದ ಆತಂಕವನ್ನೂ ತೆರೆದಿಟ್ಟರು.

ಸಿಲ್ಕ್ ಬೋರ್ಡ್‌ ಜಂಕ್ಷನ್‌, ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ ಎರಡು ದಶಕಗಳಿಂದ ಜನರಿಗೆ ನಿತ್ಯ ಕಿರಿಕಿರಿಯಾಗಿ ಕಾಡುತ್ತಿರುವ ವಾಹನ ದಟ್ಟಣೆಗೆ ತಿಂಗಳೊಳಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ ಹರಿಶೇಖರನ್‌, ವಾಹನ ಸರಾಗ ಸಂಚಾರಕ್ಕೆ ಪೂರಕವಾದ ಸಮರ್ಪಕ ಯೋಜನೆ (ಪ್ಲ್ಯಾನ್‌) ಇಡೀ ನಗರದಲ್ಲಿ ಇಲ್ಲ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಅಗತ್ಯವೆಂಬ ಕಲ್ಪನೆಯೇ ನಮಗಿಲ್ಲ’ ಎಂದು ವಿಷಾದಿಸಿದರು.

ಎರಡು ಗಂಟೆ ನಡೆದ ‘ಫೋನ್‌ ಇನ್‌’ಗೆ ಒಂದರ ಹಿಂದೆ ಒಂದರಂತೆ ನಿರಂತರ ಪ್ರಶ್ನೆಗಳ ಕರೆಗಳು ತೂರಿ ಬಂದವು. ‍ಅವೆಲ್ಲವುಗಳಿಗೆ ಸಾವಕಾಶದಿಂದ ಉತ್ತರಿಸಿದ ಅವರು, ತಮ್ಮ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನಗಳಿಗೆ ಕಡಿವಾಣ ಹಾಕುವ ಮಾತು ಕೊಟ್ಟರು. ಮಡಿವಾಳ ಫ್ಲೈ ಓವರ್‌ನಲ್ಲಿ ರಾತ್ರಿ ವೇಳೆ ಸಾಲು ಸಾಲಾಗಿ ಖಾಸಗಿ ಬಸ್‌ಗಳ ನಿಲುಗಡೆಯಿಂದ ಎದುರಾಗುವ ಟ್ರಾಫಿಕ್‌ ಸಮಸ್ಯೆ ಸೇರಿದಂತೆ ಕೆಲವು ತೊಂದರೆಗಳನ್ನು ತಕ್ಷಣ ಪರಿಹಾರ ಒದಗಿಸುವಂತೆ ಕುಳಿತಲ್ಲಿಂದಲೇ ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳಿಗೆ ಕರೆ ಮಾಡಿ ತಾಕೀತು ಮಾಡಿದರು.

ನಿಲ್ದಾಣವೇ ಇಲ್ಲದಿರುವುದರಿಂದ ಎಲ್ಲೆಂದರದಲ್ಲಿ ನಿಲುಗಡೆಯಾಗುವ ಬಿಎಂಟಿಸಿ ಬಸ್‌ಗಳು, ಇಷ್ಟ ಬಂದಲ್ಲಿ ನಿಲ್ಲುವ ಖಾಸಗಿ ಬಸ್‌ಗಳು, ಸಂಚಾರ ನಿಯಂತ್ರಿಸುವ ಬದಲು ಮೊಬೈಲ್‌ ವೀಕ್ಷಿಸುತ್ತಲೇ ಸಮಯ ಕಳೆಯುವ ಟ್ರಾಫಿಕ್‌ ಪೊಲೀಸರು, ಬಡಾವಣೆಗಳಲ್ಲಿ ಮನೆಗಳ ಮುಂಭಾಗದಲ್ಲಿ, ಎಲ್ಲೆಂದರಲ್ಲಿ ಪಾರ್ಕಿಂಗ್‌ ಮಾಡಿ, ಬಳಿಕ ದಬ್ಬಾಳಿಕೆ ತೋರಿಸುವ ವಾಹನಗಳ ಮಾಲೀಕರು, ಫುಟ್‌ಪಾತ್‌ಗಳನ್ನೇ ರಸ್ತೆ ಮಾಡಿಕೊಂಡು ಓಡಾಡುವ ವಾಹನಗಳು... ಹೀಗೆ ಹಲವು ವಿಷಯಗಳ ಬಗ್ಗೆ ಸಾರ್ವಜನಿಕರು ಗಮನ ಸೆಳೆದರು.

ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಮಯಾವಕಾಶ ಕೇಳಿದ ಹರಿಶೇಖರನ್‌, ‘ಒಳ್ಳೆಯ ರಸ್ತೆಗಳು, ಇನ್ನಷ್ಟು ಮೇಲು ರಸ್ತೆ, ಅಂಡರ್‌ಪಾಸ್‌ಗಳ ನಿರ್ಮಾಣ ಅಗತ್ಯ. ನಗರ ಬಸ್‌ ಸಾರಿಗೆ ವ್ಯವಸ್ಥೆಯ ಸುಧಾರಣೆ ಹಾಗೂ ವಿಸ್ತರಣೆಯೂ ಆಗಬೇಕಿದೆ. ಬಿಬಿಎಂಪಿ ಸದಸ್ಯರೂ ಈ ನಿಟ್ಟಿನಲ್ಲಿ ಕೈ ಜೋಡಿಸಬೇಕು. ಸಂಚಾರ ದಟ್ಟಣೆಗೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಬಿಎಂಪಿ ಪ್ರತ್ಯೇಕ ಅಭಿವೃದ್ಧಿ ನಿಧಿ ಮೀಸಲಿಡಬೇಕು. ಸಾರ್ವಜನಿಕರೂ ಸಹಕಾರ ನೀಡಿದರೆ ಮಾತ್ರ ವ್ಯವಸ್ಥಿತ ಜನಸ್ನೇಹಿ ಸಂಚಾರ ವ್ಯವಸ್ಥೆ ಅನುಷ್ಠಾನ ಸಾಧ್ಯ’ ಎಂದರು.

ಸುಗಮ ಸಂಚಾರಕ್ಕೆ ಅಹವಾಲು

* ಸುಂಕದಕಟ್ಟೆಯ ಅಭಿಲಾಷ್; ಸುಂಕದಟ್ಟೆಯಿಂದ ನೈಸ್ ರಸ್ತೆಯವರೆಗೆ ಸಂಚಾರ ಕಾನ್‌ಸ್ಟೆಬಲ್ ಇರುವುದಿಲ್ಲ. ಚಾಲಕರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು, ದಟ್ಟಣೆ ಉಂಟಾಗುತ್ತಿದೆ.

ಹರಿಶೇಖರನ್; ಇನ್‌ಸ್ಪೆಕ್ಟರ್ ಜೊತೆ ಮಾತನಾಡಿ ಸಮೀಕ್ಷೆ ಮಾಡಿಸಿ ಸಿಬ್ಬಂದಿ ನಿಯೋಜಿಸಲಾಗುವುದು

* ಎಲ್‌ಐಸಿ ಪ್ರತಿನಿಧಿರಾಘವೇಂದ್ರ; ಅನಿಲ್ ಕುಂಬ್ಳೆ ಬಳಿಯ ಓರಿಯಂಟಲ್ ಕಟ್ಟಡದಲ್ಲಿ ಎಲ್‌ಐಸಿ ಕಚೇರಿ ಇದೆ. ಆದರೆ, ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕಟ್ಟಡದ ಸಮೀಪದಲ್ಲೇ ಎರಡು ಲಾರಿ ನಿಲ್ಲುವಷ್ಟು ಫುಟ್‌ಪಾತ್ ಇದ್ದು, ಅಲ್ಲಿಯೇ ವಾಹನ ನಿಲ್ಲಿಸಲು ಅವಕಾಶ ನೀಡಿ

ಹರಿಶೇಖರನ್: ಪೊಲೀಸರಿಂದ ಪಾರ್ಕಿಂಗ್ ಕೊಡಲು ಆಗುತ್ತಿಲ್ಲ. ರಸ್ತೆ, ಫುಟ್‌ಪಾತ್ ಜಾಗವೇ ಇಲ್ಲ ಎಂದರೆ ಏನು ಮಾಡಬೇಕು. ಬೆಂಗಳೂರಿನಲ್ಲಿರುವ ಶೇ 80ರಷ್ಟು ಅಂಗಡಿಗಳಿಗೆ ಪಾರ್ಕಿಂಗ್ ಜಾಗವೇ ಇಲ್ಲ. ವ್ಯಾಪಾರಿಗಳು ಹಾಗೂ ಅಲ್ಲಿಗೆ ಬರುವ ಗ್ರಾಹಕರು, ಸಾರ್ವಜನಿಕರ ಜಾಗ ಬಳಕೆ ಮಾಡುತ್ತಿದ್ದಾರೆ. ಅಮೆರಿಕ, ಲಂಡನ್‌ನಲ್ಲಿ ಜನ ನಡೆದುಕೊಂಡು ಹೋಗುತ್ತಾರೆ. ಇಲ್ಲಿ ಒಂದು ಕಾಫಿಗೆ ಹೋಗಬೇಕಾದರೆ ವಾಹನದಲ್ಲಿ ಹೋಗುತ್ತಿದ್ದಾರೆ. ಸರ್ ಎಂ. ವಿಶ್ವೇಶ್ವರಯ್ಯ ಅವರು ಕಟ್ಟಿದ ಕ್ಲಬ್ ಪಕ್ಕದಲ್ಲಿರುವ ಜಾಗವನ್ನು ರಿಯಲ್ ಎಸ್ಟೇಟ್ ಮಾಡಿದರೆ ಹೇಗೆ?

*ಕಬ್ಬನ್‌ಪೇಟೆಯ ಪ್ರಶಾಂತ್: ಇಂದಿರಾನಗರದಲ್ಲಿ ದ್ವಿಚಕ್ರ ವಾಹನಗಳ ಸವಾರರು ಹಾಗೂ ಆಟೊದವರು ತಪ್ಪು ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ.

ಹರಿಶೇಖರನ್: ಜನರು ಈಗ ಮನೆಯಲ್ಲೇ ಕುಳಿತು ಆಹಾರ ಆರ್ಡರ್ ಮಾಡುತ್ತಿದ್ದಾರೆ. ಆಹಾರವನ್ನು ಮನೆಗೆ ತಲುಪಿಸುವ ಸ್ವಿಗ್ಗಿ, ಝೊಮ್ಯಾಟೊನಂಥ ಕಂಪನಿಯ 1.5 ಲಕ್ಷ ಮಂದಿ ಬೆಂಗಳೂರಿನಲ್ಲಿದ್ದಾರೆ. ಅವರೇ ಹೆಚ್ಚು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಅವರನ್ನು ಕರೆಸಿ ಸಭೆ ಮಾಡಿ ಎಚ್ಚರಿಕೆ ನೀಡಲಾಗುವುದು.

* ಕತ್ರಿಗುಪ್ಪೆಯ ಬಸವರಾಜು:ಶಾಲೆ, ಕಚೇರಿ ವೇಳೆ ಬದಲಾಯಿಸಿದರೆ ಸಂಚಾರ ದಟ್ಟಣೆ ಕಡಿಮೆ ಆಗಬಹುದು

ಹರಿಶೇಖರನ್: ಅದು ಸಾಧ್ಯವಿಲ್ಲ. ಇಂದು ಶೇ 60ರಷ್ಟು ಮಾತ್ರ ರಸ್ತೆ ಇದೆ. ನಮ್ಮಲ್ಲಿ ಶೇ 200ರಷ್ಟು ವಾಹನಗಳಿವೆ. ಇಂಥ ಸಂದರ್ಭದಲ್ಲಿ ದಟ್ಟಣೆ ಹೇಗೆ ನಿಯಂತ್ರಿಸಲು ಸಾಧ್ಯ. ಆ ಬಗ್ಗೆ ವೈಜ್ಞಾನಿಕವಾದ ಯೋಜನೆ ಸಿದ್ಧಪಡಿಸಬೇಕಿದೆ.

*ಸುದರ್ಶನ್: ಫುಟ್‌ಪಾತ್‌ನಲ್ಲಿ ಚಾಲನೆ, ತ್ರಿಬಲ್ ರೈಡಿಂಗ್, ದೋಷಪೂರಿತ ಸೈಲೆನ್ಸರ್ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಿ

ಹರಿಶೇಖರನ್; ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸುತ್ತಿದ್ದೇವೆ. ದೋಷಪೂರಿತ ಸೈಲೆನ್ಸರ್ ಹಾಕುವ ಮೆಕ್ಯಾನಿಕ್ ವಿರುದ್ಧವೇ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

* ನವೀನ್: ಸಂಚಾರ ನಿಯಮ ಗೊತ್ತಿಲ್ಲದವರಿಗೆ ಆರ್‌ಟಿಒ ಚಾಲನಾ ಪರವಾನಗಿ ಕೊಡುತ್ತಿದ್ದಾರೆ. ಅಂಥ ಚಾಲಕರಿಂದ ದಟ್ಟಣೆ ಉಂಟಾಗುತ್ತಿದೆ.

ಹರಿಶೇಖರನ್: ಆ ಬಗ್ಗೆ ಆರ್‌ಟಿಒ ಅವರನ್ನೇ ಕೇಳಬೇಕು. ಆರ್‌ಟಿಒ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಂದರೆ ಭಯ ಬರಬೇಕು. ಆ ರೀತಿ ಅವರೆಲ್ಲರೂ ನಡೆದುಕೊಳ್ಳಬೇಕು. ಅಂದಾಗ ಸಮಸ್ಯೆ ಉದ್ಭವಿಸುವುದಿಲ್ಲ.

* ಕೋರಮಂಗಲದ ಕಮಲಾಕ್ಷಿ: ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಲಾಲ್‌ಬಾಗ್ ಹಾಗೂ ಫೋರಂ ಬಳಿ ಪೊಲೀಸರು ವಾಹನ ತಡೆದು ನಿಲ್ಲಿಸುತ್ತಾರೆ. ಅದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ

ಹರಿಶೇಖರನ್: ಆ ರೀತಿ ಮಾಡದಂತೆ ಸಂಬಂಧಪಟ್ಟ ಠಾಣೆ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡುತ್ತೇನೆ.

* ಬೆಂಗಳೂರು ವಿವಿಯ ಕುಮಾರ್: ಚಿಕ್ಕಪೇಟೆ ಸಂಚಾರ ಠಾಣೆಯ ಗೃಹರಕ್ಷಕನೊಬ್ಬ ದಂಡದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾನೆ. ಆ ಬಗ್ಗೆ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.

ಹರಿಶೇಖರನ್: ಆ ಗೃಹರಕ್ಷಕನನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಮುಂದೆ ಇಂಥ ಪ್ರಕರಣಗಳ ಬಗ್ಗೆ ನಿಗಾ ವಹಿಸುವಂತೆ ಎಲ್ಲ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT