ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಆಕಸ್ಮಿಕ: ಉನ್ನತ ಮಟ್ಟದ ತನಿಖೆಗೆ ಬಿಎಸ್‌ವೈ ಆಗ್ರಹ

ಏರೊ ಇಂಡಿಯಾ ವೈಮಾನಿಕ ಪ್ರದರ್ಶನ
Last Updated 24 ಫೆಬ್ರುವರಿ 2019, 18:44 IST
ಅಕ್ಷರ ಗಾತ್ರ

ಬೆಂಗಳೂರು: ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ ಅಗ್ನಿ ಆಕಸ್ಮಿಕದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಗ್ರಹಿಸಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ವೈಫಲ್ಯದಿಂದ ಈ ಘಟನೆ ನಡೆದಿದೆ. ಕಾರು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು. ಜತೆಗೆ, ರಾಜ್ಯದ ಜನರ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

‘ಸಣ್ಣ ಕಾರ್ಯಕ್ರಮವಾದರೂ ಅಗ್ನಿ ಅವಘಡ ತಡೆಗೆ ಸುರಕ್ಷಿತ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ವೈಮಾನಿಕ ಪ್ರದರ್ಶನದ ವೇಳೆ ಅಂಥ ವ್ಯವಸ್ಥೆ ಇರಲಿಲ್ಲ. ಇದು ಪೊಲೀಸ್‌ ವೈಫಲ್ಯ. ವಾಹನ ನಿಲುಗಡೆಗೆ ಸ್ಥಳವನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಸಂಚಾರಿ ಪೊಲೀಸರು ವಹಿಸಲಿಲ್ಲ. ಅಗ್ನಿಶಾಮಕ ದಳದ ಅಧಿಕಾರಿಗಳು ಈ ಸ್ಥಳವನ್ನು ಪರಿಶೀಲಿಸಿ ನಿರಕ್ಷೇಪಣಾ ಪತ್ರ (ಎನ್ಒಸಿ) ನೀಡಬೇಕಿತ್ತು. ರಾಜ್ಯ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು’ ಎಂದು ಅವರು ಪ್ರತಿಪಾದಿಸಿದರು.

‘ಅಂತರರಾಷ್ಟ್ರೀಯ ಮಟ್ಟದ ವಿಮಾನ ಪ‍್ರದರ್ಶನದ ಸಂದರ್ಭದಲ್ಲಿ ಸಣ್ಣ ತಪ್ಪುಗಳು ದೇಶದ ಕೀರ್ತಿಗೆ ಧಕ್ಕೆ ಬರುತ್ತದೆ ಎಂಬ ಪರಿಜ್ಞಾನ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಇದ್ದಂತಿಲ್ಲ. ದೇಶದ ಎಲ್ಲೆಡೆ ಭಯೋತ್ಪಾದನೆ ಚಟುವಟಿಕೆ ಹೆಚ್ಚಿದೆ. ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತ ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿತ್ತು. ಹೆಚ್ಚಿನ ಅನಾಹುತ ಸಂಭವಿಸಿದ್ದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

‘ಕೇವಲ ಕಾರುಗಳಷ್ಟೇ ಸುಟ್ಟಿವೆ ಎಂದು ಗೃಹ ಸಚಿವರು ಸಮಾಧಾನದ ಮಾತನಾಡಿರುವುದು ಆಘಾತಕಾರಿ. ನೂರಾರು ಕಾರುಗಳು ಭಸ್ಮವಾಗಿದ್ದು, ರಾಷ್ಟ್ರೀಯ ನಷ್ಟ ಎಂದು ಸಚಿವರಿಗೆ ಅನಿಸಿಯೇ ಇಲ್ಲ. ಈ ಘಟನೆಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ಹೊಣೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT