ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ಕಹಿ ನೆನಪುಗಳ ‘ಏರೋ ಇಂಡಿಯಾ 2019’ ಸಂಪನ್ನ

ಕಾರು ದುರಂತದ ಬಳಿಕವೂ ಕುಗ್ಗದ ಉತ್ಸಾಹ * ಕೊನೆಯ ದಿನ ಹರಿದು ಬಂದ ಜನಸಾಗರ
Last Updated 24 ಫೆಬ್ರುವರಿ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು:ನಗರದ ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳಿಂದ ಹಲವಾರು ಸಿಹಿ ನೆನಪುಗಳ ಬುತ್ತಿ ಕಟ್ಟಿಕೊಟ್ಟ, ಅನೇಕ ಕಹಿ ಘಟನೆಗಳಿಗೂ ಸಾಕ್ಷಿಯಾದ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿ ಭಾನುವಾರ ಸಂಪನ್ನಗೊಂಡಿತು.

ಹಲವು ಅವಘಡಗಳಿಂದಾಗಿ ಎದುರಾದ ದುಗುಡಗಳ ನಡುವೆಯೂ ಲೋಹದ ಹಕ್ಕಿಗಳ ಕಸರತ್ತಿನ ಪ್ರದರ್ಶನ ನೋಡಲು ಭಾನುವಾರ ಜನಸಾಗರವೇ ಹರಿದುಬಂತು. ಸುಮಾರು 300 ಕಾರುಗಳ ನಾಶಕ್ಕೆ ಕಾರಣವಾಗಿದ್ದ ಬೆಂಕಿ ಆಕಸ್ಮಿಕ ಜನರ ಉತ್ಸಾಹವನ್ನು ಕುಗ್ಗಿಸಲಿಲ್ಲ. ಬೆಳಿಗ್ಗೆ ಪ್ರೇಕ್ಷಕರ ಸಂಖ್ಯೆ ತುಸು ಕಡಿಮೆಯಿದ್ದರೂ ಮಧ್ಯಾಹ್ನದ ವೇಳೆಗೆ ಜನ ಕಿಕ್ಕಿರಿದಿದ್ದರು. ಪ್ರದರ್ಶನ ಮಳಿಗೆಗಳಲ್ಲೂ ಜನಜಂಗುಳಿ ಜೋರಾಗಿಯೇ ಇತ್ತು.

ಟಿಕೆಟ್ ಖರೀದಿಸದ ಜನರು ವಾಯುನೆಲೆಯ ತಡೆಗೋಡೆ, ಬೇಲಿಗಳ ಮೇಲೆ ಹತ್ತಿ ವೈಮಾನಿಕ ಕಸರತ್ತನ್ನು ಕಣ್ತುಂಬಿಸಿಕೊಂಡರು. ಅನೇಕರು ಕಟ್ಟಡಗಳ ಮೇಲೇರಿ ಫೋಟೊ ಸೆರೆ ಹಿಡಿದರು.

ಕಡು ಬಿಸಿಲನ ನಡುವೆಯೂ ಜನ ಕೊಡೆ ಹಿಡಿದೇ ಯುದ್ಧವಿಮಾನಗಳ, ಪೈಲಟ್‌ಗಳ ಪರಾಕ್ರಮ ವೀಕ್ಷಿಸಿದರು. ಕೊನೇಯ ದಿನವೂ ಸಾರಂಗ ತಂಡದ ಹೆಲಕಾಪ್ಟರ್‌ಗಳು ನೀಲ ಗಗನದಲ್ಲಿ ಬೆಳ್ಳಿ ರೇಖೆ ಮೂಡಿಸುತ್ತಾ ಚಿತ್ತಾರ ಬಿಡಿಸಿದವು. ರಫೇಲ್ ಅಬ್ಬರದಿಂದ ಕಂಪನ ಸೃಷ್ಟಿಸಿತು. ಬಾನನ್ನು ಸೀಳುತ್ತಾ ಮೇಲಕ್ಕೆ ನುಗ್ಗಿದ ತೇಜಸ್, ಆರ್ಭಟಿಸಿದ ಸುಖೋಯ್ ಜನರ ಎದೆಯಲ್ಲಿ ನಡುಕ ಹುಟ್ಟಿಸಿತು.

ಪ್ರೇಕ್ಷಕರಿಂದ ಮೆಚ್ಚುಗೆ:ಬೆಂಕಿ ಅನಾಹುತದ ಮಧ್ಯೆಯೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪ್ರದರ್ಶನ ಏರ್ಪಡಿಸಲಾಗಿದೆ. ಇದು ಭಾರತೀಯ ವಾಯುಪಡೆಯ ಶಕ್ತಿ. ಈ ಬಾರಿಯ ವೈಮಾನಿಕ ಪ್ರದರ್ಶನ ಅತ್ಯುತ್ತಮವಾಗಿತ್ತು ಎಂದು ಕೆಲವು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪ‍ಡಿಸಿದ್ದಾರೆ.

ಯಲಹಂಕದಲ್ಲಿ ಸಂಚಾರ ದಟ್ಟಣೆ:ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರುಸಂಜೆ 5 ಗಂಟೆಗೆ ವೈಮಾನಿಕ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆ ತಂಡೋಪತಂಡವಾಗಿ ಮರಳತೊಡಗಿದರು. ಇದರಿಂದ ಯಲಹಂಕ ವಾಯುನೆಲೆಯಿಂದ 5 ಕಿಲೋಮೀಟರ್ ದೂರದವರೆಗೂ ಸಂಚಾರ ದಟ್ಟಣೆ ಉಂಟಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರ ಪೊಲೀಸರು ಹರಸಾಹಸಪಟ್ಟರು.

ಸಾರ್ವಜನಿಕ ಸಾರಿಗೆ ಬಳಕೆ!:ಶನಿವಾರದ ಬೆಂಕಿ ಅನಾಹುತ ಬಹುತೇಕರನ್ನು ಸಾರ್ವಜನಿಕ ಸಾರಿಗೆಯಲ್ಲಿ ಬರುವಂತೆ ಮಾಡಿತ್ತು. ‘ಸ್ವಂತ ಕಾರು, ವಾಹನಗಳನ್ನು ಮನೆಯಲ್ಲೇ ಬಿಟ್ಟು ಓಲಾ, ಉಬರ್ ಮತ್ತಿತರ ಟ್ಯಾಕ್ಸಿ ಹಾಗೂ ಬಸ್‌ಗಳ ಮೂಲಕವೇ ಪ್ರದರ್ಶನಕ್ಕೆ ಬಂದೆವು’ ಎಂದು ಜನರು ಆಡಿಕೊಳ್ಳುತ್ತಿದ್ದರು.

ಹಲವು ಪ್ರಥಮಗಳಿಗೆ ಸಾಕ್ಷಿ

ಈ ಬಾರಿಯ ಏರೋಶೋ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ದೇಶದ ಮೊತ್ತಮೊದಲ ಡ್ರೋನ್ ಒಲಿಂಪಿಕ್ಸ್, ಮಹಿಳಾ ದಿನಾಚರಣೆ ವೈಮಾನಿಕ ಪ್ರದರ್ಶನದಲ್ಲಿ ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಐವರು ಮಹಿಳೆಯರ ತಂಡ 5,000 ಅಡಿ ಎತ್ತರದಿಂದ ಹಾರಿದ್ದು ಗಮನ ಸೆಳೆದಿತ್ತು. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ತೇಜಸ್‌ನಲ್ಲಿ ಹಾರಾಟ ನಡೆಸಿದ್ದು ಪ್ರದರ್ಶನಕ್ಕೆ ಹೆಚ್ಚಿನ ಮೆರುಗು ನೀಡಿತು.

ವೀಕ್ಷಕರ ಸಂಖ್ಯೆ ಶೇ 25 ಇಳಿಕೆ

ಕಳೆದ ಆವೃತ್ತಿಗೆ ಹೋಲಿಸಿದರೆ ಈ ಬಾರಿಯ ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡಿದ ವೀಕ್ಷಕರ ಸಂಖ್ಯೆ ಶೇ 25ರಷ್ಟು ಕುಸಿತವಾಗಿದೆ. ‌

‘ಏರೋ ಇಂಡಿಯಾದ 11ನೇ ಆವೃತ್ತಿಯಲ್ಲಿ 5.4 ಲಕ್ಷ ಜನ ಭಾಗವಹಿಸಿದ್ದರು. ಈ ಬಾರಿ 4 ಲಕ್ಷ ಜನ ಪ್ರದರ್ಶನ ವೀಕ್ಷಿಸಿದ್ದಾರೆ. ಈ ಸಲ ಕೆಲವು ಅವಘಡಗಳು ಸಂಭವಿಸಿದ್ದೂ ಇದಕ್ಕೆ ಕಾರಣವಿರಬಹುದು’ ಎಂದು ಸಂಘಟಕರು ತಿಳಿಸಿದ್ದಾರೆ.

***

ಏರ್‌ ಶೋ ಹೈಲೈಟ್ಸ್‌

* 600 ಭಾರತೀಯ ಕಂಪನಿಗಳು ಭಾಗಿ

* 200 ವಿದೇಶಿ ಕಂಪನಿಗಳು ಭಾಗಿ

* 61 ಯುದ್ಧವಿಮಾನಗಳಿಂದ ಪ್ರದರ್ಶನ

* 50 ಒಪ್ಪಂದಗಳಿಗೆ ಸಹಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT