ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದ ಬಳಿಕ ₹10 ಕೋಟಿ ವಸೂಲಿಗೆ ಮುಂದು!

ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪರಿಹಾರ ವಿತರಣೆ ಮಾಡಿದ್ದ ವಿಶೇಷ ಭೂಸ್ವಾಧೀನ ಅಧಿಕಾರಿ – ಆರೋಪ
Last Updated 9 ನವೆಂಬರ್ 2018, 20:45 IST
ಅಕ್ಷರ ಗಾತ್ರ

ಬೆಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘಿಸಿ ₹10 ಕೋಟಿ ಭೂಪರಿಹಾರ ವಿತರಿಸಿದ್ದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು, ಅದನ್ನು ವಸೂಲಿ ಮಾಡಲು 10 ವರ್ಷಗಳ ನಂತರ ಪ್ರಯತ್ನ ಆರಂಭಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ಜಾಲ ಹೋಬಳಿ ಬಂಡಿಕೋಡಿಗೇಹಳ್ಳಿ ಗ್ರಾಮದಲ್ಲಿ ಫಕ್ರುಲ್ಲಾಖಾನ್ ಎಂಬುವರು 1996ರಲ್ಲಿ ರೈತರಿಂದ 32 ಎಕರೆ ಜಮೀನು ಖರೀದಿಸಿದ್ದರು. ಮಾರಾಟ ಒಪ್ಪಂದ ಮತ್ತು ರೈತರಿಂದ ಪವರ್ ಆಫ್ ಅಟಾರ್ನಿ (ಜಿಪಿಎ) ಪಡೆದುಕೊಂಡಿದ್ದರು.

ಈ ನಡುವೆ 2005ರಲ್ಲಿ ಏರೋಸ್ಪೇಸ್ ಇನ್‌ಫರ್ಮೇಷನ್ ಟೆಕ್ನಾಲಜಿ ಮತ್ತು ಹಾರ್ಡ್‌ವೇರ್ ಪಾರ್ಕ್‌ ನಿರ್ಮಾಣಕ್ಕಾಗಿ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್) ಸ್ಥಾಪನೆಗೆ ಸರ್ಕಾರ ಮುಂದಾಯಿತು. ಇದಕ್ಕಾಗಿ ಕೆಐಎಡಿಬಿ ಮೂಲಕ ಈ ಭೂಮಿಯ ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಲಾಯಿತು.

ಭೂ ಪರಿಹಾರಕ್ಕೆ ಫಕ್ರುಲ್ಲಾಖಾನ್ ಆರ್ಜಿ ಸಲ್ಲಿಸಿದ್ದರು. 2008ರ ಏಪ್ರಿಲ್‌ನಲ್ಲಿದ್ದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ (ಎಸ್‌ಎಲ್‌ಎಒ) ಟಿ.ಪಿ. ಮುನಿನಾರಾಯಣಪ್ಪ‌ ಈ ಪ್ರಕ್ರಿಯೆ ನಡೆಸುತ್ತಿದ್ದರು. ಮೂಲ ಮಾಲೀಕರಿಗೆ ಪರಿಹಾರ ವಿತರಣೆ ಮಾಡಲಿರುವ ಮಾಹಿತಿ ಅರಿತ ಫಕ್ರುಲ್ಲಾಖಾನ್ ನ್ಯಾಯಾಲಯದ ಮೊರೆ ಹೋದರು.

ಭೂ ಮಾಲೀಕತ್ವದ ವಿವಾದ ಇರುವ ಕಾರಣ ಬಗೆಹರಿಯುವ ತನಕ ಪರಿಹಾರ ವಿತರಣೆ ಮಾಡದೆ ತನ್ನ ಬಳಿ ಠೇವಣಿ ಇಡುವಂತೆ ಭೂಸ್ವಾಧೀನಾಧಿಕಾರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಆದರೂ, ಎಂಟು ಮಂದಿ ಮೂಲ ಮಾಲೀಕರಿಗೆ ಮುನಿನಾರಾಯಣಪ್ಪ ಪರಿಹಾರ ವಿತರಣೆ ಮಾಡಿದರು ಎಂದು ಫಕ್ರುಲ್ಲಾಖಾನ್ ಹೇಳಿದರು.

ಬಳಿಕ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು. ಎಂಟು ಮಂದಿ ಭೂ ಮಾಲೀಕರು ವಂಚನೆ ಮಾಡಿ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಬೆಂಗಳೂರು ಪೊಲೀಸರು ನ್ಯಾಯಾಲಯಕ್ಕೆ 2011ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಸ್ವಯಂ ನಿವೃತ್ತಿ: ಈ ನಡುವೆ 2008ರಲ್ಲಿ ಪರಿಹಾರ ವಿತರಣೆ ಮಾಡಿದ್ದ ಎಸ್‌ಎಲ್‌ಎಒ ಟಿ.ಪಿ. ಮುನಿನಾರಾಯಣಪ್ಪ, 2009ರ ಅಕ್ಟೋಬರ್‌ 16ರಂದು ಸ್ವಯಂ ನಿವೃತ್ತಿ ಪಡೆದಿದ್ದಾರೆ.

‘ಇವರ ವಿರುದ್ಧ ಕ್ರಮ ಕೈಗೊಳ್ಳದೆ ಕೆಐಎಡಿಬಿ ಮೌನವಾಗಿದ್ದ ಕಾರಣ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದೆ. ಅವರು ಆದೇಶ ನೀಡಿದ ಬಳಿಕ ಕ್ರಮ ಕೈಗೊಳ್ಳಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮುಂದಾಗಿದೆ’ ಎಂದು ಫಕ್ರುಲ್ಲಾಖಾನ್ ವಿವರಿಸಿದರು.

ನಿವೃತ್ತಿ ಪಡೆದು 4 ವರ್ಷ ಪೂರೈಸಿದ್ದರೆ ಕರ್ನಾಟಕ ಸೇವಾ ನಿಯಮಾವಳಿಗಳ ಪ್ರಕಾರ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಹೀಗಾಗಿ, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಸರಿಯಾದ ವಕೀಲರನ್ನು ಸರ್ಕಾರ ನೇಮಿಸಿದ ಕಾರಣ ತಪ್ಪು ಮಾಡಿದ ಅಧಿಕಾರಿಗೆ ನೋಟಿಸ್ ಕೂಡ ನೀಡಿಲ್ಲ ಎಂದು ಆರೋಪಿಸಿದರು.

**

ಸ್ವಾಧೀನವೇ ಆಗದ ಭೂಮಿಗೆ ಪರಿಹಾರ

ಭೂಸ್ವಾಧೀನವೇ ಆಗದ ಭೂಮಿಗೆ ₹1.25 ಕೋಟಿ ಪರಿಹಾರ ನೀಡಿರುವ ಕೆಐಎಡಿಬಿ ಅಧಿಕಾರಿಗಳು, 10 ವರ್ಷದ ಬಳಿಕ ಇಕ್ಕಟ್ಟಿಗೆ ಸಿಲುಕಿದ್ದಾರೆ. ಫಕ್ರುಲ್ಲಾಖಾನ್ ಖರೀದಿಸಿದ್ದ 32 ಎಕರೆಯಲ್ಲಿ ಸರ್ವೆ ನಂ.40ರ 25–ಪಿ ನಲ್ಲಿರುವ 4 ಎಕರೆ ಸ್ವಾಧೀನವಾಗಿಲ್ಲ. ಆದರೂ. 2008ರಲ್ಲೇ ₹1.25 ಕೋಟಿ ಹಣ ಲಕ್ಷ್ಮೀಪತಿ ಎಂಬುವರ ಹೆಸರಿಗೆ ಪಾವತಿಯಾಗಿದೆ.

ಹಣ ಪಡೆದವರ ಹೆಸರು ಚೆಕ್‌ ಸಂಖ್ಯೆ ಎಲ್ಲವನ್ನೂ ದಾಖಲಿಸಿರುವ ಅಧಿಕಾರಿಗಳು, ಈ ಭೂಮಿ ಅಧಿಸೂಚನೆಯಲ್ಲಿ ಸೇರಿಲ್ಲ ಎಂದೂ ದಾಖಲಿಸಿದ್ದಾರೆ. ಆದರೆ, ಈ ಭೂಮಿಯ ಬಗ್ಗೆ ಮಾಹಿತಿ ಕೇಳಿದರೆ, ಹಾಲಿ ಇರುವ ವಿಶೇಷ ಭೂಸ್ವಾಧೀನಾಧಿಕಾರಿ ಪೂರ್ಣಿಮಾ ಅವರು ಭೂಮಿ ಸ್ವಾಧೀನವಾಗಿದೆ ಎಂಬ ತಪ್ಪು ಮಾಹಿತಿ ನೀಡಿದ್ದಾರೆ.

ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಭಿಯೋಜನಾ ಮಂಜೂರಾತಿ ನೀಡುವಂತೆ ಫಕ್ರುಲ್ಲಾಖಾನ್ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಮನವಿಮಾಡಿದ್ದಾರೆ.

ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆಐಎಡಿಬಿಗೆ ಸೂಚನೆ ನೀಡಿದ್ದಾರೆ. ಸ್ವಾಧೀನವಾಗಿರುವ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರನ್ನು ತೆರವುಗೊಳಿಸುವಂತೆಯೂ ಪತ್ರದಲ್ಲಿ ತಿಳಿಸಿದ್ದಾರೆ.

**

ನನಗೆ ಮಾರಾಟ ಮಾಡಿ ಹಣ ಪಡೆದಿದ್ದಲ್ಲದೇ ಸರ್ಕಾರದಿಂದಲೂ ಪರಿಹಾರ ಪಡೆದಿರುವವರೇ ಈಗಲೂ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದಾರೆ.

-ಫಕ್ರುಲ್ಲಾಖಾನ್, ದೂರುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT