ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಯಲ್ಲಿನ ಹೊಗೆ,ದೂಳು ಹೀರಲಿದೆ ಯಂತ್ರ

ಹಡ್ಸನ್‌ ವೃತ್ತದ ಬಳಿ ವಾಯು ಶುದ್ಧೀಕರಣ ಯಂತ್ರ ಅಳವಡಿಸಿರುವ ಬಿಬಿಎಂಪಿ
Last Updated 2 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಾತಾವರಣದಲ್ಲಿ ಬೆರೆತು ಹೋಗಿರುವ ದೂಳಿನ ಕಣ, ಹೊಗೆಯನ್ನೆಲ್ಲ ಹೀರಿಕೊಂಡು ಶುದ್ಧ ಗಾಳಿಯನ್ನು ಹೊರ ಬಿಡಲು ಯಂತ್ರವೊಂದಿದ್ದರೆ ಹೇಗೆ ಎಂಬ ಆಲೋಚನೆ ಬಹುತೇಕರಲ್ಲಿ ಇರಬಹುದು. ಈ ಆಲೋಚನೆ ನಗರದಲ್ಲಿ ಸಾಕಾರ ಗೊಂಡಿದೆ.

ನಗರದ ಹಡ್ಸನ್‌ ವೃತ್ತದ ಬಳಿ ಪಾಲಿಕೆ ವತಿಯಿಂದ ಮೊದಲ ವಾಯು ಶುದ್ಧೀಕರಣ ಯಂತ್ರವನ್ನು ಗುರುವಾರ ಅಳವಡಿಸಲಾಯಿತು. ಅ–ಟೆಕ್‌ಟ್ರಾನ್‌ ಎಂಬ ಸಂಸ್ಥೆ ಪಾಲಿಕೆ ಕೇಂದ್ರ ಕಚೇರಿ ಬಳಿ ಉಚಿತವಾಗಿ ಈ ಯಂತ್ರ ಅಳವಡಿಸಿದೆ.

ಈ ಯಂತ್ರವು ಆರು ಹಂತದಲ್ಲಿ ಗಾಳಿಯನ್ನು ಶೋಧಿಸುತ್ತದೆ. ಒಂದೊಂದು ಶೋಧಕವೂ (ಫಿಲ್ಟರ್‌) ದೂಳಿನ ಕಣ, ಹೊಗೆಯ ಕಣ ಮುಂತಾದ ಮಾಲಿನ್ಯಕಾರಕಗಳನ್ನು ಹಂತ ಹಂತವಾಗಿ ಸೋಸುತ್ತದೆ. ಕೊನೆಗೆ ಯಂತ್ರದ ತಳ ಭಾಗದಲ್ಲಿ ಶುದ್ಧಗಾಳಿ ಹೊರಗೆ ಬರುತ್ತದೆ ಎಂದು ಈ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.

‘ಹೀರಿಕೊಳ್ಳುವ ದೂಳು ಮತ್ತಿತರ ಮಾಲಿನ್ಯಕಾರಕಗಳು ಈ ಯಂತ್ರದಲ್ಲಿ ಸಂಗ್ರಹವಾಗುತ್ತವೆ. 15ರಿಂದ 20 ದಿನಗಳಿಗೊಮ್ಮೆ ಅದನ್ನು ಹೊರತೆಗೆಯಬೇಕು. ಮಾಲಿನ್ಯದ ಪ್ರಮಾಣ ಹೆಚ್ಚು ಇದ್ದರೆ 15 ದಿನಗಳಲ್ಲಿ ಸುಮಾರು 2 ಕೆ.ಜಿಯಿಂದ 3 ಕೆ.ಜಿ.ಗಳಷ್ಟು ದೂಳು ಸಂಗ್ರಹಗೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಅವರು ವಿವರಿಸಿದರು.

‘ಈ ಯಂತ್ರಕ್ಕೆ ₹ 2 ಲಕ್ಷ ಬೆಲೆ ಇದೆ. ಇದರ ಕಾರ್ಯಕ್ಷಮತೆ ಬಗ್ಗೆ ಪಾಲಿಕೆ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ಇಲ್ಲಿ ಉಚಿತವಾಗಿ ಅಳವಡಿಸಿದ್ದೇವೆ. ಪುಣೆ ಸೇರಿದಂತೆ ವಿವಿಧ ನಗರಗಳಲ್ಲಿ ಇದನ್ನು ಈಗಾಗಲೇ ಅಳವಡಿಸಿದ್ದು ಉತ್ತಮ ಫಲಿತಾಂಶ ಬಂದಿದೆ’ ಎಂದರು.

‘ನಾವು ಈ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡುತ್ತೇವೆ. ಇದರ ಕಾರ್ಯನಿರ್ವಹಣೆ ತೃಪ್ತಿಕರವಾಗಿದ್ದರೆ ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚು ಇರುವ ಕಡೆ ಇಂತಹ ಯಂತ್ರಗಳನ್ನು ಅಳವಡಿಸುವ ಬಗ್ಗೆ ಪರಿಶೀಲಿಸುತ್ತೇವೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

2019– 20ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ನಗರದಲ್ಲಿ ವಾಯು ಶುದ್ಧೀಕರಣ ಯಂತ್ರಗಳನ್ನು ಅಳವಡಿಸುವುದಕ್ಕೆ ₹ 5 ಕೋಟಿ ಕಾಯ್ದಿರಿಸಲಾಗಿದೆ.

ಏನೆಲ್ಲ ಹೀರಲಿದೆ?

* ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿ.ಎಂ.) 2.5

* ಪಿ.ಎಂ.10

* ಧೂಳಿನ ಕಣ

* ಹೊಂಜು

* ದುರ್ವಾಸನೆ

* ಹೊಗೆಯ ಕಣ

ವಾಯುಮಾಲಿನ್ಯ ಇಳಿಕೆ

ನಗರದಲ್ಲಿ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) ಸರಾಸರಿ 83.5ರಷ್ಟಿದೆ. ಹಡ್ಸನ್‌ ವೃತ್ತದ ಬಳಿ ಈ ಯಂತ್ರ ಅಳವಡಿಸುವುದಕ್ಕೆ ಮುನ್ನ ಸೂಚ್ಯಂಕ 35ಕ್ಕಿಂತ ಹೆಚ್ಚು ಇತ್ತು. ಯಂತ್ರ ಅಳವಡಿಸಿ 10 ನಿಮಿಷದ ಬಳಿಕ ಪರಿಶೀಲಿಸಿದಾಗ ಇದರ ಪ್ರಮಾಣ 25ಕ್ಕೆ ಇಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT