ವಿಮಾನ ನಿಲ್ದಾಣಕ್ಕೆ ‘ಪಿಂಕ್’ ಟ್ಯಾಕ್ಸಿ

7
ಮಹಿಳೆಯರ ಸುರಕ್ಷತೆಗೆ ಕೆಎಸ್‌ಟಿಡಿಸಿ ಕ್ರಮ

ವಿಮಾನ ನಿಲ್ದಾಣಕ್ಕೆ ‘ಪಿಂಕ್’ ಟ್ಯಾಕ್ಸಿ

Published:
Updated:
Prajavani

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮಹಿಳೆಯರಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಶುಭ ಸುದ್ದಿ ನೀಡಿದೆ. ಸದ್ಯ ಟ್ಯಾಕ್ಸಿಗಳಲ್ಲಿ ಭಯದಲ್ಲೇ ಸಂಚರಿಸುತ್ತಿದ್ದ ಮಹಿಳೆಯರಿಗೆ ಇನ್ನು ಮುಂದೆ ಆತಂಕವಿಲ್ಲ. ಏಕೆಂದರೆ, ನಿಲ್ದಾಣಕ್ಕೆ ಹೊಸದಾಗಿ ‘ಪಿಂಕ್‌’ ಟ್ಯಾಕ್ಸಿಗಳು ಓಡಾಡಲಿವೆ.

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ 10 ಮಹಿಳಾ ಚಾಲಕಿಯರು ಇರುವ ‘ಪಿಂಕ್‌’ ಟ್ಯಾಕ್ಸಿಗಳನ್ನು ರಸ್ತೆಗೆ ಇಳಿಸಲು ಕೆಎಸ್‌ಟಿಡಿಸಿ ಸಜ್ಜಾಗಿದೆ. ವಿಮಾನ ನಿಲ್ದಾಣದ ಆವರಣದಲ್ಲಿ ಜ. 7ರಂದು ಬೆಳಿಗ್ಗೆ 9.15ಕ್ಕೆ ಟ್ಯಾಕ್ಸಿಗಳ ಓಡಾಟಕ್ಕೆ ಚಾಲನೆ ಸಿಗಲಿದೆ.

‘ನಿಲ್ದಾಣಕ್ಕೆ ಪ್ರಯಾಣಿಸುವ ಬಹುಪಾಲು ಮಂದಿ, ಪುರುಷರು ಚಾಲಕರಾಗಿರುವ ಟ್ಯಾಕ್ಸಿಗಳಲ್ಲಿ ಓಡಾಡಲು ಭಯಪಡುತ್ತಾರೆ. ಇತ್ತೀಚೆಗೆ ನಡೆದಿರುವ ಹಲವು ಘಟನೆಗಳೂ ಅದಕ್ಕೆ ಕಾರಣ. ಈಗ ಕೆಎಸ್‌ಟಿಡಿಸಿಯಿಂದ ಮಹಿಳೆಯರಿಗೆ ಪ್ರತ್ಯೇಕವಾಗಿ ಪಿಂಕ್ ಟ್ಯಾಕ್ಸಿಗಳನ್ನು ಓಡಿಸಲಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಅಲ್ಲಿಂದ ನಗರಕ್ಕೆ ಬರುವ ಮಹಿಳಾ ಪ್ರಯಾಣಿಕರು ಯಾವುದೇ ಭಯವಿಲ್ಲದೇ ಟ್ಯಾಕ್ಸಿಗಳಲ್ಲಿ ಸಂಚರಿಸಬಹುದು’ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. 

‘ಈ ಟ್ಯಾಕ್ಸಿಗಳ ಬಂಪರ್‌ಗಳಿಗೆ ಗುಲಾಬಿ ಬಣ್ಣ ಬಳೆಯಲಾಗಿದ್ದು, ಸುಲಭವಾಗಿ ಗುರುತಿಸಬಹುದಾಗಿದೆ. ಜಿಪಿಎಸ್ ಸಾಧನ,  ಎಂಡಿಟಿ ಸಾಧನ ಹಾಗೂ ಪ್ಯಾನಿಕ್ ಬಟನ್ ಸಹ ಟ್ಯಾಕ್ಸಿಯಲ್ಲಿದೆ. ಟ್ಯಾಕ್ಸಿಗಳ ಮೇಲೆ ದಿನದ 24 ಗಂಟೆಯೂ ನಿಗಾವಹಿಸುವ ವ್ಯವಸ್ಥೆ ಇದೆ’ ಎಂದು ಕೆಎಸ್‌ಟಿಡಿಸಿ ತಿಳಿಸಿದೆ. 

ಟ್ಯಾಕ್ಸಿ ಕಾಯ್ದಿರಿಸಲು 080–44664466 ಅಥವಾ ಕೆಎಸ್‌ಟಿಡಿಸಿ ಆ್ಯಪ್ ಸಂಪರ್ಕಿಸಬಹುದು. ಪ‍್ರಯಾಣ ದರ (ಪ್ರತಿ ಕಿ.ಮೀಗೆ) ₹21.50 (ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12) ₹23.50 (ಮಧ್ಯರಾತ್ರಿ 12ರಿಂದ ಬೆಳಿಗ್ಗೆ 6) ನಿಗದಿ ಪಡಿಸಲಾಗಿದೆ.

ಚಾಲಕಿಯರಿಗೆ ತರಬೇತಿ: 10 ಮಹಿಳೆಯರಿಗೆ ಚಾಲನಾ ಹಾಗೂ ಸ್ವ–ರಕ್ಷಣಾ ತರಬೇತಿ ನೀಡಲಾಗಿದೆ. ಅವರೇ ಟ್ಯಾಕ್ಸಿಗಳನ್ನು ನಿರ್ವಹಣೆ ಮಾಡಲಿದ್ದಾರೆ. ದಿನದ 24 ಗಂಟೆಯೂ ಟ್ಯಾಕ್ಸಿಗಳು ಸಂಚರಿಸಲಿದ್ದು, ಎರಡು ಸರದಿಯಲ್ಲಿ ಚಾಲಕಿಯರು ಕೆಲಸ ಮಾಡಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !