ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌–ಶೋ; ಅಕ್ರಮ ನೌಕೆ ನಾಶಕ್ಕೆ ‘ಗರುಡ’!

ವಾಯುನೆಲೆ ಸುತ್ತಮುತ್ತ ಬಿಗಿ ಭದ್ರತೆ l ರಾಡರ್, ಶಾರ್ಪ್‌ ಶೂಟರ್‌ಗಳ ನಿಗಾ
Last Updated 18 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನದ ವೇಳೆ ಡ್ರೋನ್, ಮಾನವರಹಿತ ವಾಯು ವಾಹನ (ಯುಎವಿ) ಸೇರಿದಂತೆ ಯಾವುದೇ ನೌಕೆಗಳು ಹಾರಾಡಿದರೂ, ಅವುಗಳನ್ನು ಧ್ವಂಸ ಮಾಡಲು ‘ಗರುಡ’ ಪಡೆಯ ಶಾರ್ಪ್‌ ಶೂಟರ್‌ಗಳನ್ನು ನಿಯೋಜಿಸಲಾಗಿದೆ.

‘ಫೆ.20ರಿಂದ ಫೆ.24ರ ನಡುವೆ ಯಲಹಂಕ ವಾಯುನೆಲೆ ಸುತ್ತಮುತ್ತ ಡ್ರೋನ್, ಯುಎವಿ ಹಾಗೂ ಬಲೂನುಗಳನ್ನು ಹಾರಿಸದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇಷ್ಟಾಗಿಯೂ ನೌಕೆಗಳನ್ನು ಹಾರಿಸಿದರೆ, ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ತುಂಬ ಎತ್ತರದಲ್ಲಿ ಅನಧಿಕೃತವಾಗಿ ಹಾರಿಸಬಹುದಾದ ನೌಕೆಗಳ ಪತ್ತೆಗೆ ‘ಏರ್‌ ಡಿಫೆನ್ಸ್ ಸಿಸ್ಟಮ್ಸ್‌’ನವರು ರಾಡರ್ ಮೂಲಕ ನಿಗಾ ಇಡಲಿದ್ದಾರೆ. ರಾಡರ್‌ ಕಣ್ಣಿಗೆ ಕಾಣದಂತೆ, ಕೆಳಮಟ್ಟದಲ್ಲಿ ನೌಕೆಗಳು ಹಾರಿದರೆ ಅವುಗಳನ್ನು ಶಾರ್ಪ್‌ಶೂಟರ್‌ಗಳು ನಾಶಪಡಿಸಲಿ
ದ್ದಾರೆ. ಅವರಿಗಾಗಿ ವಾಯುನೆಲೆ ಸುತ್ತಮುತ್ತ 30 ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಎತ್ತರದ ಕಟ್ಟಡಗಳ ಮೇಲೆ ನಿಂತು ಕಣ್ಣಿಡಲಿದ್ದಾರೆ’ ಎಂದರು.

ಮೂರು ಹಂತದ ಭದ್ರತೆ: ‘ಏರ್‌–ಶೋ ಭದ್ರತೆಗೆ ಹಾಗೂ ಸಂಚಾರ ನಿರ್ವಹಣೆಗೆ ಸುಮಾರು 3,700 ಪೊಲೀಸರನ್ನು ನಿಯೋಜಿಸಲಾಗಿದ್ದು, ಮೂರು ಹಂತಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ’ ಎಂದು ಕಮಿಷನರ್ ಹೇಳಿದರು.

‘ವಾಯುನೆಲೆ ಸುತ್ತಲ ರಸ್ತೆಗಳಲ್ಲಿ 2,200 ಸಿವಿಲ್ ಪೊಲೀಸರು, ಒಳಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹಾಗೂ ವಾಯುಸೇನೆಯ ರಕ್ಷಣಾ ಸಿಬ್ಬಂದಿ ಭದ್ರತೆ ಕೈಗೊಳ್ಳಲಿದ್ದಾರೆ. ಏರೋ–ಇಂಡಿಯಾದ ನೋಡಲ್ ಅಧಿಕಾರಿಯೂ ಆಗಿರುವ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಭದ್ರತೆಯ ಉಸ್ತುವಾರಿ ನೀಡಲಾಗಿದೆ’ ಎಂದರು.

‘ವಾಯುನೆಲೆಯ ಹೊರಗೆ ಹಾಗೂ ಒಳಗೆ ಮೂರು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದ್ದೇವೆ. ಅದರ ಜತೆಗೆ ವಾಯುಪಡೆ, ಸಿಐಎಸ್‌ಎಫ್ ಹಾಗೂ ವಿಪತ್ತು ನಿರ್ವಹಣಾ ಪಡೆಗಳ ಸಿಬ್ಬಂದಿಯ ಸಹಯೋಗದಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನೂ ನಿರ್ಮಿಸಿದ್ದೇವೆ. ರಾಯಲ್ ಆರ್ಕೆಡ್ ಹೋಟೆಲ್‌ನಲ್ಲಿ ಡಿಆರ್‌ಡಿಓ ವಿಜ್ಞಾನಿಗಳ ಸಮಾವೇಶ ಹಾಗೂ ಜಕ್ಕೂರು ವಾಯುನೆಲೆಯಲ್ಲಿ ನಡೆಯುತ್ತಿರುವ ಡ್ರೋನ್ ಸ್ಪರ್ಧೆಗೂ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಭಾರಿ ವಾಹನ ನಿರ್ಬಂಧ: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ತುರ್ತು ವಾಹನಗಳನ್ನು ಹೊರತುಪಡಿಸಿ ಫೆ.20–24ರವರೆಗೆ ಯಲಹಂಕ-ಮೇಖ್ರಿ ವೃತ್ತದವರೆಗಿನ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹೈದರಾಬಾದ್‌ ಮತ್ತು ಚಿಕ್ಕಬಳ್ಳಾಪುರ ಕಡೆಯಿಂದ ಬರುವ ಲಾರಿ ಹಾಗೂ ಖಾಸಗಿ ಬಸ್‌ಗಳು ತುಮಕೂರು-ಪುಣೆ ಎನ್‌ಎಚ್‌-4ರಲ್ಲಿ ಹಾಗೂ ಬೆಂಗಳೂರು ನಗರದ ಕಡೆಗೆ ಹೋಗಲು ದೇವನಹಳ್ಳಿಯಿಂದ ದೊಡ್ಡಬಳ್ಳಾಪುರ, ದಾಬಸ್‌ಪೇಟೆ-ನೆಲಮಂಗಲ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ.

**
ಕೆಐಎಎಲ್‌ ಪ್ರಯಾಣಿಕರು ಏನು ಮಾಡಬೇಕು?

ಏರ್‌–ಶೋ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ (ಕೆಐಎಎಲ್) ತೆರಳುವ ಪ್ರಯಾಣಿಕರಿಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.

ಪಶ್ಚಿಮ ಭಾಗದಿಂದ: ಗೊರಗುಂಟೆ ಪಾಳ್ಯ, ಬಿಇಎಲ್‌ ಸರ್ಕಲ್‌, ಗಂಗಮ್ಮ ಸರ್ಕಲ್‌, ಮದರ್‌ ಡೈರಿ, ಮೇಜರ್‌ ಉನ್ನಿಕೃಷ್ಣನ್‌ ಜಂಕ್ಷನ್‌, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಎಂವಿಐಟಿ ಕ್ರಾಸ್‌, ವಿದ್ಯಾನಗರ ಕ್ರಾಸ್‌ ಮಾರ್ಗವಾಗಿ ಕೆಐಎಎಲ್‌ಗೆ ಹೋಗಬಹುದು.

ಪೂರ್ವ ಭಾಗದಿಂದ: ಕೆ.ಆರ್‌ ಪುರ, ಹೆಣ್ಣೂರು ಕ್ರಾಸ್‌, ಬಾಗಲೂರು, ಮೈಲನಹಳ್ಳಿ, ಬೇಗೂರು, ನೈರುತ್ಯ ಪ್ರವೇಶ ದ್ವಾರದ ಮೂಲಕ ಕೆಐಎಎಲ್‌ ತಲುಪಬಹುದು.

ದಕ್ಷಿಣ ಭಾಗದಿಂದ: ಮೈಸೂರು ರಸ್ತೆ ನಾಯಂಡಹಳ್ಳಿ ಮೂಲಕ ಚಂದ್ರಲೇಔಟ್‌, ಗೊರಗುಂಟೆ ಪಾಳ್ಯ, ಬಿ.ಇ.ಎಲ್‌ ಸರ್ಕಲ್‌ ತಲುಪಿ ಗಂಗಮ್ಮ ಸರ್ಕಲ್‌ ಮೂಲಕ ಮದರ್‌ ಡೈರಿ, ಮೇಜರ್‌ ಉನ್ನಿಕೃಷ್ಣನ್‌ ಜಂಕ್ಷನ್‌, ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ, ಅದ್ದಿಗಾನಹಳ್ಳಿ, ಎಂವಿಐಟಿ ಕ್ರಾಸ್‌, ವಿದ್ಯಾನಗರ ಕ್ರಾಸ್‌ ಮಾರ್ಗವಾಗಿ ಕೆಐಎಎಲ್‌ ತಲುಪಬಹುದು.

ಪಾರ್ಕಿಂಗ್ ಎಲ್ಲೆಲ್ಲಿ?

‘ಏರ್‌ ಡಿಸ್‌ಪ್ಲೇ ವ್ಯೂವ್ ಏರಿಯಾ (ಅಡ್ವಾ) ಬಳಿ ಸುಮಾರು 100 ಎಕರೆ ಜಾಗದಲ್ಲಿ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಪ್ರದೇಶಕ್ಕೆ ಮಾತ್ರ ಟಿಕೆಟ್ ಪಡೆದಿರುವವರು ಗಂಟಿಗಾನಹಳ್ಳಿ ಬಳಿ ವಾಹನಗಳನ್ನು ನಿಲುಗಡೆ ಮಾಡಬೇಕು. ಪ್ರದರ್ಶನದ ಎಲ್ಲ ಸ್ಥಳಗಳಿಗೂ ಹೋಗಲು ‘ಡೊಮೆಸ್ಟಿಕ್’ ಟಿಕೆಟ್ ಪಡೆದಿರುವವರು ಹುಣಸಮಾರನಹಳ್ಳಿ ಬಳಿ ವಾಹನಗಳನ್ನು ನಿಲ್ಲಿಸಬೇಕು.

**
ಭದ್ರತೆಯ ಬಲಾಬಲ ಅಂಕಿಅಂಶ

2,200 - ಸಿವಿಲ್ ಪೊಲೀಸರು

1,478 - ಸಂಚಾರ ಪೊಲೀಸರು

11 - ಕೆಎಸ್‌ಆರ್‌ಪಿ ತುಕಡಿ

5 - ಸಿಎಆರ್ ತುಕಡಿ

2 - ಕ್ಷಿಪ್ರ ಪ್ರತಿಕ್ರಿಯಾ ಪಡೆ (ಕ್ಯೂಆರ್‌ಟಿ) ತುಕಡಿ

2- ಜಿಲ್ಲಾ ವಿಶೇಷ ಶಸ್ತ್ರಾಸ್ತ್ರ ಮತ್ತು ಯುದ್ಧತಂತ್ರ ಪಡೆಯ (ಡಿ–ಸ್ವಾಟ್) ತುಕಡಿ

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT