ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ಗೆ ₹69.61 ಲಕ್ಷ ವಂಚನೆ

ಪೊಟ್ಟಣದಲ್ಲಿ ನಕಲಿ ವಸ್ತುಗಳನ್ನಿಟ್ಟು ಹಿಂದಿರುಗಿಸುತ್ತಿದ್ದ ನಾಲ್ವರ ವಿರುದ್ಧ ಪ್ರಕರಣ
Last Updated 24 ಡಿಸೆಂಬರ್ 2018, 19:22 IST
ಅಕ್ಷರ ಗಾತ್ರ

ಬೆಂಗಳೂರು: ಇ– ಕಾಮರ್ಸ್‌ ಸಂಸ್ಥೆಯಾದ ‘ಅಮೆಜಾನ್’ ಕಂಪನಿಗೆ ರಾಜ್ಯದಲ್ಲಿ ₹69.61 ಲಕ್ಷ ವಂಚನೆಯಾಗಿದ್ದು, ಆ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಮೆಜಾನ್ ಡಾಟ್ ಇನ್’ ಜಾಲ|ತಾಣದಲ್ಲಿ ಖರೀದಿಸುತ್ತಿದ್ದ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿದ್ದ ಬೆಂಗಳೂರಿನ ‘ಡಿಪೇನ್ಡೊ ಲಾಜಿಸ್ಟಿಕ್ ಸಲ್ಯೂಷನ್ಸ್’ ಕಂಪನಿಯ ನೌಕರರೇ ವಂಚನೆ ಮಾಡಿದ್ದಾರೆ’ ಎಂದು ಅಮೆಜಾನ್‌ನ ದೆಹಲಿ ಪ್ರತಿನಿಧಿ ನಿಶಾದ್ ಶರ್ಮಾ ದೂರು ನೀಡಿದ್ದಾರೆ.

‘ಲಾಜಿಸ್ಟಿಕ್ ಕಂಪನಿಯ ನೌಕರರಾದ ಮಹಮ್ಮದ್ ಅನ್ವರ್, ಶಿವನಾಯಕ್, ರವಿಕುಮಾರ್ ಹಾಗೂ ಸೋನು ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ’ ಎಂದು ಕೋರಮಂಗಲ ಪೊಲೀಸರು ಹೇಳಿದರು.

ನಕಲಿ ವಸ್ತು ಹಿಂದಿರುಗಿಸಿ ವಂಚನೆ: ‘ಜಾಲತಾಣದಲ್ಲಿ ವಸ್ತು ಖರೀದಿಸುವ ಗ್ರಾಹಕರು, ತಮಗಿಷ್ಟವಿಲ್ಲದಿದ್ದರೆ ವಸ್ತುವನ್ನು ನಿಗದಿತ ಸಮಯದಲ್ಲಿ ಹಿಂದಿರುಗಿಸಿ ಹಣ ವಾಪಸ್ ಪಡೆಯುವ ಸೌಲಭ್ಯವಿದೆ. ಇದನ್ನೇ ಆರೋಪಿಗಳು ದುರುಯೋಗಪಡಿಸಿಕೊಂಡು ವಂಚನೆ ಮಾಡಿದ್ದಾರೆ’ ಎಂದು ನಿಶಾದ್ ದೂರಿನಲ್ಲಿ ತಿಳಿಸಿದ್ದಾರೆ.

‘ಗ್ರಾಹಕರಿಗೆ ವಸ್ತುಗಳನ್ನು ಪೂರೈಕೆ ಮಾಡುವ ಸಂಬಂಧ ದೇಶದಾದ್ಯಂತ ಡೆಲಿವರಿ ಸ್ಟೇಷನ್‌ಗಳನ್ನು ತೆರೆಯಲಾಗಿದ್ದು, ಅವುಗಳ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ಲಾಜಿಸ್ಟಿಕ್ ಕಂಪನಿಗಳಿಗೆ ನೀಡಲಾಗಿದೆ. ಅದೇ ರೀತಿ ಬೆಂಗಳೂರಿನ ಕೋರಮಂಗಲದಲ್ಲಿರುವ ‘ಡಿಪೇನ್ಡೊ ಲಾಜಿಸ್ಟಿಕ್ ಸಲ್ಯೂಷನ್ಸ್’ ಕಂಪನಿ ಜೊತೆ ಸ್ಟೇಷನ್ ನಿರ್ವಹಣೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದೇ ಕಂಪನಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಮಹಮ್ಮದ್ ಅನ್ವರ್, ಶಿವನಾಯಕ್, ರವಿಕುಮಾರ್, ಸೋನು ವಂಚನೆ ಮಾಡಿದ್ದಾರೆ.’

‘ಗ್ರಾಹಕರು ಎಂಬಂತೆ ಬಿಂಬಿಸಿಕೊಳ್ಳುವ ಸಲುವಾಗಿಆರೋಪಿಗಳು ನಕಲಿ ಇ–ಮೇಲ್ ಐಡಿಗಳನ್ನು ಸೃಷ್ಟಿಸಿಕೊಂಡಿದ್ದರು. ಅದರ ಸಹಾಯದಿಂದ ಜಾಲತಾಣದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬುಕಿಂಗ್ ಮಾಡುತ್ತಿದ್ದರು. ಜಾಲತಾಣದ ಸಿಬ್ಬಂದಿ, ವಸ್ತುಗಳನ್ನು ಪ್ಯಾಕ್ ಮಾಡಿ ಕಳುಹಿಸುತ್ತಿದ್ದರು. ಪೊಟ್ಟಣದಲ್ಲಿರುತ್ತಿದ್ದ ಅಸಲಿ ವಸ್ತುಗಳನ್ನು ತೆಗೆದಿಟ್ಟುಕೊಳ್ಳುತ್ತಿದ್ದ ಆರೋಪಿಗಳು, ನಕಲಿ ವಸ್ತುಗಳನ್ನು ಅದರಲ್ಲಿಡುತ್ತಿದ್ದರು. ನಂತರ, ಅದೇ ಪೊಟ್ಟಣವನ್ನು ಹಿಂದಿರುಗಿಸಿ ಹಣ ವಾಪಸ್ ಪಡೆದುಕೊಳ್ಳುತ್ತಿದ್ದರು’ ಎಂದು ನಿಶಾದ್‌ ಹೇಳಿದ್ದಾರೆ.

854 ವಸ್ತುಗಳು ನಕಲಿ: ‘43 ಪೇಟಿಎಂ ಖಾತೆ ತೆರೆದಿದ್ದ ಆರೋಪಿಗಳು, ಗ್ರಾಹಕರ ಸೋಗಿನಲ್ಲೇ ಕೃತ್ಯ ಎಸಗುತ್ತಿದ್ದರು. ಇದುವರೆಗೂ 854 ಅಸಲಿ ವಸ್ತುಗಳನ್ನು ಕದ್ದು, ಅದರ ಜಾಗದಲ್ಲೇ ನಕಲಿ ವಸ್ತುಗಳನ್ನು ಕಂಪನಿಗೆ ಹಿಂದಿರುಗಿಸಿದ್ದಾರೆ’ ಎಂದು ನಿಶಾದ್ ಹೇಳಿಕೊಂಡಿದ್ದಾರೆ. ‘ಆರೋಪಿಗಳ ಕೃತ್ಯದ ಬಗ್ಗೆ ಇತ್ತೀಚೆಗಷ್ಟೇ ಜಾಲತಾಣದ ಸಿಬ್ಬಂದಿಗೆ ಅನುಮಾನ ಬಂದಿತ್ತು. ಪೇಟಿಎಂ ಖಾತೆಗಳ ಪರಿಶೀಲನೆ ನಡೆಸಿದಾಗ ಒಂದಕ್ಕೊಂದು ಸಂಬಂಧ ಇರುವುದು ಗೊತ್ತಾಯಿತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT