ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಡಾ.ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಹೆಚ್ಚಿದ ‘ಬಾಬುಗಿರಿ’?
Last Updated 22 ಫೆಬ್ರುವರಿ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌’ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಮಧ್ಯೆ ಆರಂಭಗೊಂಡಿರುವ ಸಂಘರ್ಷ ಬೀದಿಗೆ ಬಂದಿದೆ. ಸಂಸ್ಥೆಯಲ್ಲಿ ‘ಬಾಬು ಗಿರಿ’ (ಅಧಿಕಾರಿಗಳ ನಿರಂಕುಶ ಆಡಳಿತ) ವಿರೋಧಿಸಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯ, ಹೈದರಾಬಾದ್ ಸೆಂಟ್ರಲ್‌ ವಿಶ್ವವಿದ್ಯಾಲಯ ಮತ್ತು ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಸಿಕ್ಕಿದವರೂ ಬಿಟ್ಟು ಇಲ್ಲಿಗೆ ಸೇರಿದ್ದರು.ಸಂಸ್ಥೆಯಲ್ಲಿನ ಅವ್ಯವಸ್ಥೆ, ದುರಾಡಳಿತಕ್ಕೆ ಬೇಸತ್ತಿರುವ ಬಹುತೇಕ ವಿದ್ಯಾರ್ಥಿಗಳು ಇಲ್ಲಿಗೆ ಸೇರಿ ತಮ್ಮ ಭವಿಷ್ಯ ಮಸುಕಾಗಿದೆ ಎಂದು ಶಪಿಸಲಾರಂಭಿಸಿದ್ದಾರೆ.

ಜಾಗತಿಕ ಮಟ್ಟದ ಅರ್ಥಶಾಸ್ತ್ರ ಬೋಧಿಸುವ ಸಂಸ್ಥೆಯಾಗಿಸುವ ಗುರಿ ಹೊಂದಿದ್ದರೂ ಇದಕ್ಕೆ ನಿರ್ದೇಶಕರನ್ನಾಗಿ ಅರ್ಥಶಾಸ್ತ್ರ ಹಿನ್ನೆಲೆಯ ವ್ಯಕ್ತಿಯನ್ನು ಇಲ್ಲಿಯವರೆಗೂ ನೇಮಿಸಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉನ್ನತ ಶಿಕ್ಷಣ ಇಲಾಖೆ ಈ ಸಂಸ್ಥೆಯ ಆಗುಹೋಗುಗಳತ್ತ ಗಮನಹರಿಸಿಲ್ಲ ಎಂದು ಮೂಲಗಳು ಹೇಳಿವೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ, ಮನಮೋಹನಸಿಂಗ್‌ ಅವರಿಂದ ‘ಬೆಂಗಳೂರು ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌’ಗೆ (ಬೇಸ್‌) ಚಾಲನೆ ನೀಡಿದ್ದರು.

ಪ್ರತಿಭಟನೆ ನಿರತ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಜತೆ ಮಾತನಾಡಿ ತಾವು ಎದುರಿಸುತ್ತಿರುವ ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ಮುಂದಿಟ್ಟರು.

* ನಮಗೆ ಪದವಿ ಪ್ರಮಾಣ ಪತ್ರವನ್ನು ಬೆಂಗಳೂರು ವಿಶ್ವವಿದ್ಯಾಲಯ ಹೆಸರಿನಲ್ಲಿ ನೀಡುವ ಪ್ರಯತ್ನ ನಡೆದಿದೆ. ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕನಾಮಿಕ್ಸ್‌ ಹೆಸರಿನಲ್ಲೇ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ನೀಡಬೇಕು. ರಾಜ್ಯಪಾಲರು ಮಸೂದೆಗೆ ಸಹಿ ಮಾಡಿಲ್ಲ ಎಂಬ ಸಬೂಬು ಹೇಳಲಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಮಾಣ ಪತ್ರವನ್ನು ನಾವು ಒಪ್ಪುವುದಿಲ್ಲ.

* ಎರಡನೇ ವರ್ಷ ಮುಗಿಯುತ್ತಾ ಬಂದಿದ್ದರೂ, ಒಬ್ಬರೇ ಒಬ್ಬ ಕಾಯಂ ಬೋಧಕರ ನೇಮಕ ಆಗಿಲ್ಲ. ಇಬ್ಬರು ಅಧ್ಯಾಪಕರು ವಾರ್ಷಿಕ ಗುತ್ತಿಗೆ ಮೇಲೆ ಇದ್ದಾರೆ. ಕೆಲವು ವಿಷಯಗಳಿಗೆ ಅತಿಥಿ ಉಪನ್ಯಾಸಕರನ್ನು ಕರೆಸಲಾಗುತ್ತಿದೆ.

* ಸಂಸ್ಥೆ ಆರಂಭಗೊಂಡ ಆರಂಭದಿಂದಲೂ ಪ್ರತಿ ಸೆಮಿಸ್ಟರ್‌ಗೂ ಪರೀಕ್ಷಾ ವಿಧಾನ ಬದಲಿಸಲಾಗುತ್ತಿದೆ. ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಒಪ್ಪಿತವಾದ ಸಂವೇದನಾಶೀಲ ಪರೀಕ್ಷಾ ಪದ್ಧತಿ ರೂಪಿಸಬೇಕು. ಈಗಿನ ಪರೀಕ್ಷಾ ಪದ್ಧತಿಯನ್ನು ನಾವು ಒಪ್ಪುವುದಿಲ್ಲ.

* ಸಂಸ್ಥೆಗೆ ನಿರ್ದೇಶಕರನ್ನಾಗಿ ಶೈಕ್ಷಣಿಕ ಹಿನ್ನೆಲೆ ಇರುವ ಅರ್ಥಶಾಸ್ತ್ರಜ್ಞರನ್ನು ನೇಮಿಸಬೇಕು. ನಮ್ಮ ಭವಿಷ್ಯವನ್ನು ರೂಪಿಸುವವರು ಒಬ್ಬ ಸಮರ್ಥ ಅರ್ಥಶಾಸ್ತ್ರಜ್ಞರಾಗಿರಬೇಕೇ ಹೊರತು ಅಧಿಕಾರಿಗಳಲ್ಲ.

* ಸ್ವತಂತ್ರ ಸಂಸ್ಥೆಯಾದರೂ ಇಲ್ಲಿ ಪಠ್ಯೇತರ ಚಟುವಟಿಕೆಗಳೇ ನಡೆಯುವುದಿಲ್ಲ. ವಿಚಾರಸಂಕಿರಣಗಳು, ಉಪನ್ಯಾಸ ಸರಣಿಗಳು, ಶೈಕ್ಷಣಿಕ ಸ್ಪರ್ಧೆಗಳು, ಉತ್ಸವ, ಕ್ರೀಡಾ ಕೂಡ ಏನೂ ನಡೆಯುತ್ತಿಲ್ಲ. ಇಂಥದನ್ನು ವಿದ್ಯಾರ್ಥಿಗಳೇ ಸ್ವಯಂ ಪ್ರೇರಣೆಯಿಂದ ನಡೆಸಲು ಮುಂದಾದರೆ, ಅದಕ್ಕೆ ತಣ್ಣೀರು ಎರಚಲಾಗುತ್ತದೆ. ಈ ಪರಿಪಾಠ ತಪ್ಪಬೇಕು.

4 ವಿದ್ಯಾರ್ಥಿಗಳ ಅಮಾನತು

‘ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿ ಸಂಘಟನೆ ರಚಿಸಿಕೊಂಡಿದ್ದೆವು. ವಿದ್ಯಾರ್ಥಿ ಸಂಘಟನೆಯನ್ನು ವಿಸರ್ಜಿಲಾಗಿದೆ ಎಂದು ಆಡಳಿತ ಮಂಡಳಿ ಗುರುವಾರ ದೂರವಾಣಿ ಮೂಲಕ ತಿಳಿಸಿತು. ಇದನ್ನು ವಿರೋಧಿಸಿ ತರಗತಿಗೆ ಹಾಜರಾಗದಿರಲು ನಿರ್ಧರಿಸಿದೆವು.

ಇದಕ್ಕೆ ಪ್ರತಿಯಾಗಿ ನಾಲ್ಕು ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದನ್ನೂ ದೂರವಾಣಿ ಮೂಲಕವೇ ಮಾಹಿತಿ ನೀಡಿದರು’ ಎಂದು ವಿದ್ಯಾರ್ಥಿಗಳು ತಿಳಿಸಿದರು. ‘ಮೊದಲಿನಿಂದಲೂ ವಿದ್ಯಾರ್ಥಿಗಳ ಅಭಿಪ್ರಾಯ ಮತ್ತು ವಾಕ್ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ’ ಎಂದು ವಿದ್ಯಾರ್ಥಿಗಳು ದೂರಿದರು.

ಅಧಿಕಾರಿಗಳ ಹಿಡಿತ:ಐಎಎಸ್‌ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ನಿರ್ದೇಶಕರಾದರೆ, ಮತ್ತೊಬ್ಬ ಐಎಎಸ್‌ ಅಧಿಕಾರಿ ಎಂ.ಬಿ.ದ್ಯಾಬೇರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ). ಮಾಣಿಕಾ ಗಿರಿನಾಥ್‌ (ಐಎಎಸ್‌ ಅಧಿಕಾರಿ ತುಷಾರ್‌ ಗಿರಿನಾಥ್‌ ಪತ್ನಿ) ಪರೀಕ್ಷಾ ನಿಯಂತ್ರಕರು.ಸಂಸ್ಥೆಯ ಸಂಪೂರ್ಣ ಅಧಿಕಾರಿಗಳು ಹಿಡಿತದಲ್ಲೇ ಇದೆ ಎಂದು ವಿದ್ಯಾರ್ಥಿಗಳು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT