ಅಂಬಿಗೆ ನಮನ–ದಿಗ್ಗಜರ ಗಾಯನ

ಗುರುವಾರ , ಮಾರ್ಚ್ 21, 2019
25 °C

ಅಂಬಿಗೆ ನಮನ–ದಿಗ್ಗಜರ ಗಾಯನ

Published:
Updated:
Prajavani

ಬೆಂಗಳೂರು: ಸಮರ್ಥನಂ ಸಂಸ್ಥೆಯು ಭಾನುವಾರ ಆಯೋಜಿಸಿದ್ದ ‘ಅಂಬಿ ನಮನ’ ಕಾರ್ಯಕ್ರಮದಲ್ಲಿ ಗಾಯಕರು ಗಾನಸುಧೆ ಹರಿಸುವ ಮೂಲಕ ದಿವಂಗತ ಅಂಬರೀಷ್ ಅವರನ್ನು ಸ್ಮರಿಸಿದರು. 

ಹೆಸರಾಂತ ಗಾಯಕರಾದ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಯಿಂದ ‘ಇದೇ ನಾಡು, ಇದೇ ಭಾಷೆ... ಎಂದೆಂದೂ ನನ್ನದಾಗಿರಲಿ...’ ಎಂಬ ಹಾಡಿನೊಂದಿಗೆ ಸಮಾರಂಭ ಆರಂಭವಾಯಿತು. ಗಾಯಕರ ಸ್ವರ ಮಾಧುರ್ಯಕ್ಕೆ ಹಾಗೂ ಹಾಡಿನ ಸಾಹಿತ್ಯಕ್ಕೆ ಸಭಿಕರು ತಲೆದೂಗಿದರು.

ಅರ್ಚನಾ ಉಡುಪ ಮತ್ತು ಎಸ್‌ಪಿಬಿ ಅವರು ‘ನೀ ಬಂದರೆ ಮೆಲ್ಲಗೆ, ಎದೆ ಚಿಮ್ಮಿತು ಝಲ್ಲನೆ....’ ಹಾಡನ್ನು ಪ್ರಸ್ತುತ
ಪಡಿಸಿದಾಗ ಕರತಾಡನದ ಸುರಿ ಮಳೆ. ‘ಮಂಡ್ಯದ ಗಂಡು, ಮುತ್ತಿನ ಚಂಡು...’ ಗೀತೆ ಆಲಿಸಿದ ಅಂಬಿ ಅಭಿಮಾನಿಗಳ ಕೇಕೆ ಮುಗಿಲು ಮುಟ್ಟಿತ್ತು.

‘ಇನ್ನೊಬ್ಬರ ಹೃದಯದಲ್ಲಿ ನೆಲೆಸಿರುವವರು ಎಂದಿಗೂ ಸಾಯುವುದಿಲ್ಲ. ಆ ಗೌರವವನ್ನು ಅಂಬರೀಷ್‌ ಪಡೆದು ಅಮರರಾಗಿದ್ದಾರೆ’ ಎಂದು ಅಂಬರೀಷ್‌ ಪತ್ನಿ ಸುಮಲತಾ ಹೇಳಿದರು.

ಹಿರಿಯ ಚಿತ್ರನಟ ದೊಡ್ಡಣ್ಣ, ‘ಸ್ನೇಹ, ಉದಾರತೆ ಹಾಗೂ ಒರಟುತನಕ್ಕೆ ಅಂಬರೀಷ್‌ ಹೆಸರಾಗಿದ್ದರು. ಅವರಲ್ಲಿ ಕಲ್ಮಶ, ಸ್ವಾರ್ಥ ಇರಲಿಲ್ಲ. ಹಾಗಾಗಿ ಅಂಬಿ ಬೆಳೆದರು. ಅಂಬಿಗೆ ನಾಗರಹಾವು ಎಂದರೆ ಬಹಳ ಭಯ. ‘ಅರಣ್ಯದಲ್ಲಿ ಅಭಿಮನ್ಯು’ ಸಿನಿಮಾ ಚಿತ್ರೀಕರಣದ ವೇಳೆ ಹಾವುಗಳನ್ನು ತರಿಸಲಾಗಿತ್ತು. 50 ಹಾವುಗಳೊಂದಿಗೆ ಒಳಾಂಗಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ವಿದ್ಯುತ್‌ ಕಡಿತಗೊಂಡಿತ್ತು. ಆಗ ಅಂಬರೀಷ್‌ ಎಲ್ಲರನ್ನು ತರಾಟೆಗೆ ತೆಗೆದುಕೊಂಡಿದ್ದರು’ ಎಂದು ಘಟನೆಯೊಂದನ್ನು ಮೆಲುಕು ಹಾಕಿದರು.  ‘ಚೆನ್ನೈನ ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ, ಅಂಬರೀಷ್‌, ವಿಷ್ಣುವರ್ಧನ್‌, ದ್ವಾರಕೀಶ್‌, ಶ್ರೀನಾಥ್‌ ತಪ್ಪದೆ ಬರುತ್ತಿದ್ದರು. ಅವರು ದೊಡ್ಡ ಕಲಾವಿದರು ಮಾತ್ರವಲ್ಲ, ಅಷ್ಟೇ ಒಳ್ಳೆಯ ಮನುಷ್ಯರೂ ಕೂಡ’ ಎಂದು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಸ್ಮರಿಸಿದರು.

ಅಂಬರೀಷ್‌ ನಟಿಸಿದ ಸಿನಿಮಾದ ಗೀತೆಗಳನ್ನು ಹಾಡುವ ಮೂಲಕ ಕಲಾವಿದರು ಸಭಿಕರನ್ನು ರಂಜಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !