ಭಾನುವಾರ, ಫೆಬ್ರವರಿ 28, 2021
31 °C
ದಕ್ಷಿಣ ಭಾರತದ ದೊಡ್ಡ ಶಕ್ತಿಯಾಗಿದ್ದರು. ಪದ– ಪ್ರತಿಭೆ ಇದ್ದರೂ ಅಹಂಕಾರ ತೋರದ ಸಹೃದಯಿ

ರಾಜ್ಯದ ಹಿತಾಸಕ್ತಿ ಕಾಪಾಡಿದ ಅನಂತಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹುಬ್ಬಳ್ಳಿ: ಕೊನೆಯವರೆಗೂ ರಾಜ್ಯದ ಹಿತಾಸಕ್ತಿ ಕಾಪಾಡಿದ ಕನ್ನಡಿಗ, ತತ್ವ– ಸಿದ್ಧಾಂತಗಳಿಗೆ ಬದ್ಧನಾಗಿದ್ದ ದೇಶ ಪ್ರೇಮಿ, ಹಿರಿಯ– ಕಿರಿಯರನ್ನು ಗೌರವದಿಂದ ಕಂಡ ಸಹೃದಯಿ... ನಗರದಲ್ಲಿ ಶುಕ್ರವಾರ ನಡೆದ ‘ಅನಂತ ನಮನ’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅನಂತಕುಮಾರ್ ವ್ಯಕ್ತಿತ್ವವನ್ನು ವಿವಿಧ ಪಕ್ಷಗಳ ಮುಖಂಡರು, ಮಠಾಧೀಶರು, ಸ್ನೇಹಿತರು ಬಣ್ಣಿಸಿದ್ದು ಹೀಗೆ.

ಅಗಲಿದ ನಾಯಕನ ಸಾಧನೆಗೆ ಹೆಮ್ಮೆ ಒಂದೆಡೆಯಾದರೆ, ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಯಿತಲ್ಲ ಎಂಬ ನೋವು ಇನ್ನೊಂದು ಕಡೆ. ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಛಾ‍ಪು ಮೂಡಿಸಿದ ಹುಬ್ಬಳ್ಳಿಯ ಹುಡುಗನೊಬ್ಬನ ಸಾಹಸಗಾಥೆಯನ್ನು ಪ್ರತಿ ಅಧ್ಯಾಯವನ್ನು ತೆರೆದಿಡುವಾಗ ಆವರಿಸಿದ ಭಾವುಕತೆ ಸಭಾಂಗಣದ ಮೌನಕ್ಕೆ ಕಾರಣವಾಗಿತ್ತು.

ವಾಜಪೇಯಿ, ಎಲ್‌.ಕೆ. ಅಡ್ವಾಣಿ ಅವರಿಗೆ ಆಪ್ತರಾಗಿದ್ದ ಅನಂತಕುಮಾರ್ ಅವರು ಕೇಂದ್ರದಲ್ಲಿ ರಾಜ್ಯವನ್ನು ಹೇಗೆ ಪ್ರತಿನಿಧಿಸಿದರು. ಸಮಸ್ಯೆಗಳು ಎದುರಾದಾಗ ಚಾಣಾಕ್ಷತೆಯಿಂದ ಹೇಗೆ ಪರಿಹಾರ ಕಂಡುಕೊಂಡರು ಎಂಬುದನ್ನು ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಎಚ್‌.ಕೆ. ಪಾಟೀಲ, ಜಗದೀಶ ಶೆಟ್ಟರ್, ಮಾಜಿ ಸಂಸದ ಐ.ಜಿ. ಸನದಿ ವಿವರಿಸಿದರು.

‘ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪ್ರತ್ಯೇಕವಾದ ನಂತರ ಕೃಷ್ಣ ನದಿ ನೀರು ಹಂಚಿಕೆಯ ಬಗ್ಗೆ ಮತ್ತೊಮ್ಮೆ ನ್ಯಾಯಮಂಡಳಿ ಮೊರೆ ಹೋಗಲು ನಿರ್ಧರಿಸಿದವು. ಹಾಗೇನಾದರೂ ಆಗಿದ್ದರೆ ರಾಜ್ಯಕ್ಕೆ ಆ ವಿಷಯದಲ್ಲಿ ಮತ್ತಷ್ಟು ಹಿನ್ನಡೆಯಾಗುತ್ತಿತ್ತು. ಆದ್ದರಿಂದ ಕೂಡಲೇ ಅನಂತಕುಮಾರ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದೆವು. ಅವರು ಕಾನೂನು ಇಲಾಖೆ, ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ, ಮತ್ತೊಮ್ಮೆ ನ್ಯಾಯಮಂಡಳಿ ಅಗತ್ಯ ಇಲ್ಲ ಎಂದು ಅಭಿಪ್ರಾಯ ನೀಡುವಂತೆ ಮಾಡಿದರು’ ಎಂದು ಶೆಟ್ಟರ್ ಹೇಳಿದರು.

‘ಎಸ್‌.ಎಂ. ಕೃಷ್ಣ ಅವರ ಸರ್ಕಾರ ಇದ್ದಾಗ ನಾನು ಜಲ ಸಂಪನ್ಮೂಲ ಸಚಿವನಾಗಿದ್ದೆ. ಕಳಸಾ– ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರದ ಅನುಮತಿಯನ್ನು ಅನಂತಕುಮಾರ್ ಕೊಡಿಸಿದರು. ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ನವಲ್‌ವಾಲಾ ಅವರು ರಾಜ್ಯಕ್ಕೆ ಸಹಾಯ ಮಾಡಿದರು. ಈ ವಿಷಯ ತಿಳಿದುಕೊಂಡ ಗೋವಾದ ಮನೋಹರ್ ಪರಿಕ್ಕರ್ ಅವರು ವಾಜಪೇಯಿ ಅವರ ಮೇಲೆ ಒತ್ತಡ ಹೇರಿ ನವಲ್‌ವಾಲಾ ಅವರನ್ನು ಹುದ್ದೆಯಿಂದ ಕೆಳಗಿಸುವಲ್ಲಿ ಯಶಸ್ವಿಯಾದರು. ನೊಂದುಕೊಂಡ ಅನಂತಕುಮಾರ್ ಅವರು, ನವಲ್‌ವಾಲಾ ಅವರ ಆಕಾಂಕ್ಷೆಯಂತೆ ಅವರನ್ನು ಯುಪಿಎಸ್‌ಸಿ ಸದಸ್ಯರನ್ನಾಗಿಸಿದರು. ಅದು ಅವರ ವ್ಯಕ್ತಿತ್ವ’ ಎಂದು ಎಚ್‌.ಕೆ. ಪಾಟೀಲ್ ನೆನಪು ಮಾಡಿಕೊಂಡರು.

‘ಧಾರವಾಡದಲ್ಲಿ ನಿರ್ಮಾಣ ಮಾಡಲಿರುವ ಕ್ರೀಡಾ ವಸತಿ ಸಮುಚ್ಚಯಕ್ಕೆ ಅನಂತಕುಮಾರ ಹೆಸರಿಡಲಾಗುವುದು. ರಾಜ್ಯ ಸರ್ಕಾರ ಸಹಕಾರ ನೀಡಿದರೆ ಕ್ಯಾನ್ಸರ್ ಕೇಂದ್ರವನ್ನು ಸಹ ಆರಂಭಿಸಿ ಅದಕ್ಕೂ ಅವರ ಹೆಸರಿಡಲು ಪ್ರಯತ್ನಿಸಲಾಗುವುದು’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಾಸಕ ಅರವಿಂದ ಬೆಲ್ಲದ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು