ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಂತು ವರ್ಸಸ್‌ ನುಸ್ರತ್‌’ ಫೋಟೊ ಶೂಟ್‌: ಮಾಹಿತಿ ಕೇಳಿದ ಹೈಕೋರ್ಟ್‌

Last Updated 16 ನವೆಂಬರ್ 2018, 18:45 IST
ಅಕ್ಷರ ಗಾತ್ರ

ಬೆಂಗಳೂರು: ‘ಅನಂತು ವರ್ಸಸ್ ನುಸ್ರತ್’ ಸಿನಿಮಾಕ್ಕಾಗಿ ಹೈಕೋರ್ಟ್ ಆವರಣದಲ್ಲಿ ಫೋಟೊ ಶೂಟ್‌ ನಡೆಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ದೂರಿನ ಕುರಿತು ಏನು ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ಮಾಹಿತಿ ನೀಡಿ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಕುರಿತಂತೆ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್, ‘ಚಿತ್ರತಂಡವು ಹೈಕೋರ್ಟ್‌ನಲ್ಲಿ ಶೂಟ್ ಮಾಡಿದ್ದ ದೃಶ್ಯಾವಳಿಯನ್ನು ಸಿನಿಮಾದಲ್ಲಿ ಬಳಸುವುದಿಲ್ಲ ಎಂದು ತಿಳಿಸಿತ್ತು. ಆದರೆ, ಇತ್ತೀಚೆಗೆ ಬಿಡುಗಡೆ ಮಾಡಿರುವ ಟ್ರೇಲರ್‌ನಲ್ಲಿ ಆ ದೃಶ್ಯ ಬಳಸಲಾಗುತ್ತಿದೆ. ಆದ್ದರಿಂದ, ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

‘ಪೊಲೀಸರು ಈವರೆಗೆ ನೋಟಿಸ್ ನೀಡಿ ಸುಮ್ಮನಾಗಿದ್ದಾರೆ. ಇನ್ನೂ ಎಫ್‌ಐಆರ್ ದಾಖಲು ಮಾಡಿಲ್ಲ. ತನಿಖೆಯನ್ನೂ ನಡೆಸುತ್ತಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರು ನೀಡಿರುವ ದೂರಿನ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ವಿವರವಾದ ಮಾಹಿತಿ ನೀಡಿ’ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿದೆ.

ಪ್ರಕರಣವೇನು?: ‘ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್ ನಟಿಸಿರುವ ಚಿತ್ರದ ಫೋಟೊ ಶೂಟಿಂಗ್‌ ಅನ್ನು 2017ರ ಆಗಸ್ಟ್‌ 17ರಂದು ಹೈಕೋರ್ಟ್‌ನಲ್ಲಿ ನಡೆಸಲಾಗಿತ್ತು.

‘ರಾಷ್ಟ್ರೀಯ ಚಿಹ್ನೆಗಳು ಹಾಗೂ ಹೆಸರುಗಳ ದುರ್ಬಳಕೆ ತಡೆ ಕಾಯ್ದೆ ಅನ್ವಯ ಸಂಸತ್, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಸೇರಿದಂತೆ ಕೆಲವು ನಿರ್ಬಂಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಚಿತ್ರೀಕರಣ ನಡೆಸುವಂತಿಲ್ಲ. ಆದರೂ ಭದ್ರತಾ ನಿಯಮ ಉಲ್ಲಂಘಿಸಿ ಚಿತ್ರೀಕರಣ ನಡೆಸಲಾಗಿದೆ’ ಎಂದು ಅರ್ಜಿದಾರರು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT