ಕನ್ನಡ ಶಾಲೆ ಉಳಿಸುವ ಹೊಣೆ ಶಿಕ್ಷಕರ ಮೇಲಿದೆ: ಬಸವರಾಜ ಹೊರಟ್ಟಿ

7
ಅನಸೂಯ ಮೆಳ್ಳಿಗೇರಿ ವಿಜ್ಞಾನ– ತಂತ್ರಜ್ಞಾನ ಕೇಂದ್ರ ಉದ್ಘಾಟನೆ

ಕನ್ನಡ ಶಾಲೆ ಉಳಿಸುವ ಹೊಣೆ ಶಿಕ್ಷಕರ ಮೇಲಿದೆ: ಬಸವರಾಜ ಹೊರಟ್ಟಿ

Published:
Updated:

ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಮುಗಿಬೀಳುವಂತಹ ವಾತಾವರಣ ನಿರ್ಮಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ವಿಧಾನಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಏಕಸ್ ಪ್ರತಿಷ್ಠಾನ ನಗರದ ಹೊಸೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ಅನಸೂಯ ಮೆಳ್ಳಿಗೇರಿ ವಿಜ್ಞಾನ– ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದ 2,800 ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕಿಂತ ಕಡಿಮೆ ಇದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇಂತಹ ಪರಿಸ್ಥಿತಿಯನ್ನು ಶಿಕ್ಷಕರು ಬದಲಾಯಿಸಬೇಕು. ಸಾಧಕರನ್ನು ಸಮಾಜಕ್ಕೆ ನೀಡಬೇಕು ಎಂದರು.

ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತವರು ದೊಡ್ಡ ಸಾಧನೆ ಮಾಡಿರುವ ಉದಾಹರಣೆಗಳು ನಮ್ಮಲ್ಲಿವೆ. ಆದರೆ ಪ್ರಾಥಮಿಕ ಹಂತದಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪಡೆದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂಬ ತಪ್ಪು ಭಾವನೆ ಈಗಿನ ಪೋಷಕರಲ್ಲಿದೆ. ಸರ್ಕಾರಿ ಶಾಲೆಯಲ್ಲಿ ಕಲಿತು ದೊಡ್ಡ ಹುದ್ದೆಯಲ್ಲಿರುವ ಸಾವಿರಾರು ಜನರಿದ್ದಾರೆ. ಹಳೆಯ ಸಾಧಕ ವಿದ್ಯಾರ್ಥಿಗಳನ್ನು ಶಾಲೆಗೆ ಆಹ್ವಾನಿಸಿ ಎಂದು ಶಿಕ್ಷಣ ಸಚಿವನಾಗಿದ್ದಾಗ ಸುತ್ತೋಲೆ ಹೊರಡಿಸಿದ್ದೆ. ನಮ್ಮೂರಿನ ಶಾಲೆಯನ್ನು ಅಭಿವೃದ್ಧಿಪಡಿಸಿದೆ. 130 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ 1,065 ಮಂದಿ ಕಲಿಯುತ್ತಿದ್ದಾರೆ. ಶೇ99ರಷ್ಟು ಫಲಿತಾಂಶವೂ ಬರುತ್ತಿದೆ ಎಂದು ತಿಳಿಸಿದರು.

ಹಳೆಯ ವಿದ್ಯಾರ್ಥಿಗಳು ಶಾಲೆಯನ್ನು ಅಭಿವೃದ್ಧಿಪಡಿಸಬೇಕು. ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರು ಸಹ ತಲಾ ಒಂದೊಂದು ಶಾಳೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಸೂಚನೆ ನೀಡಿದರು.

ಏಕಸ್ ಗ್ರೂಪ್ ಅಧ್ಯಕ್ಷ ಅರವಿಂದ ಮೆಳ್ಳಿಗೇರಿ ಮಾತನಾಡಿ, 30 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಕಲಿತಿದ್ದೆ. ಏಳು ವರ್ಷಗಳ ಕಲಿಕೆಯ ಅವಧಿಯ ನೆನಪುಗಳು ಈಗಲೂ ಹಸಿರಾಗಿವೆ. ಅಲ್ಲದೆ ಶಿಕ್ಷಣ ವಿಧಾನವೂ ಒಂದಿಷ್ಟೂ ಬದಲಾಗಿಲ್ಲ. ಕೇವಲ ಪುಸ್ತಕ ಓದಿ ಕಲಿಯವುದರಿಂದ ವಿಶ್ವ ಮನ್ನಣೆಯ ವಿಜ್ಞಾನಿಗಳನ್ನು ಸೃಷ್ಟಿಸಲು ಸಾಧ್ಯವಾಗದು. ಪ್ರಾಯೋಗಿಕ ಜ್ಞಾನ ಇದ್ದರೆ ಅದು ತಲೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅದೇ ಕಾರಣಕ್ಕೆ ಇಲ್ಲಿ ₹7 ಕೋಟಿ ವೆಚ್ಚದಲ್ಲಿ ವಿಜ್ಞಾನ ತಂತ್ರಜ್ಞಾನ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.

ಶಂಕರ ಪಾಟೀಲ್ ಮುನೇನಕೊಪ್ಪ, ಪ್ರದೀಪ ಶೆಟ್ಟರ್, ಉಪ ಮೇಯರ್ ಮೇನಕ ಹುರುಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕುಂಬಾರ್, ಪಾಲಿಕೆ ಹೆಚ್ಚುವರಿ ಆಯುಕ್ತ ಎ.ಆರ್. ದೇಸಾಯಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !