ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಚ್ಚನೆ ಸೂರು ಹೊಂದುವ ಸುದಿನ ಸನ್ನಿಹಿತ

ಕೊಳಗೇರಿಯ ನಿವಾಸಿಗಳಿಗಾಗಿ ಸಮುಚ್ಚಯ ನಿರ್ಮಾಣ: ಕೊನೆಹಂತಕ್ಕೆ ಬಂದ ಕಾಮಗಾರಿ
Last Updated 22 ಅಕ್ಟೋಬರ್ 2018, 19:48 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ದಶಕಗಳಿಂದ ನಗರದ ಕೊಳಗೇರಿಗಳ ಗುಡಿಸಲು, ಶೆಡ್‌ಗಳಲ್ಲಿ ದಿನದೂಡುತ್ತಿರುವ ನೂರಾರು ಕುಟುಂಬಗಳು ಬೆಚ್ಚನೆಯ ಸೂರೊಂದನ್ನು ಹೊಂದುವ ಸುದಿನ ಹತ್ತಿರವಾಗುತ್ತಿದೆ.

ಕೊಳೆಗೇರಿ ಅಭಿವೃದ್ಧಿ ಮಂಡಳಿಯು ವಸತಿ ಹೀನರಿಗಾಗಿ ಮಾರತ್ತಹಳ್ಳಿಯಲ್ಲಿ ಕಟ್ಟುತ್ತಿರುವ ಸಮುಚ್ಚಯದ ಕಾಮಗಾರಿ ಕೊನೆಯ ಹಂತಕ್ಕೆ ಬಂದಿದೆ. ಫಲಾನುಭವಿಗಳುವಾಸ ಆರಂಭಿಸಲುನವೆಂಬರ್‌ 10ರೊಳಗೆ ಅನುವು ಮಾಡಿಕೊಡಲು ಮಂಡಳಿಯ ಆಯುಕ್ತರು ತೀರ್ಮಾನಿಸಿದ್ದಾರೆ.

ಚಲ್ಲಘಟ್ಟ, ತಿಪ್ಪಸಂದ್ರದ ಕೃಷ್ಣಪ್ಪ ಗಾರ್ಡನ್‌, ಪುಲಕೇಶಿನಗರದ ನೆಹರೂ ಕೊಳೆಗೇರಿಗಳ 924 ಕುಟುಂಬಗಳಿಗಾಗಿ ಸಮುಚ್ಚಯ ನಿರ್ಮಾಣ ಮಾಡಲಾಗಿದೆ. ಮನೆಗಳ ಹಂಚಿಕೆಪ್ರಕ್ರಿಯೆ ಮುಗಿದಿದೆ.

ಈ ಯೋಜನೆಗೆ2009ರಲ್ಲಿ ಹಸಿರು ನಿಶಾನೆ ಸಿಕ್ಕರೂ, 2015ರಲ್ಲಿ ನಿರ್ಮಾಣ ಕಾರ್ಯ ಶುರುವಾಗಿತ್ತು. ಕಾಮಗಾರಿಯ ವಿಳಂಬದ ಕುರಿತು ‘ಪ್ರಜಾವಾಣಿ’ಯು ‘ಗೃಹಪ್ರವೇಶಕ್ಕೆ ಕೂಡಿ ಬಾರದ ಮುಹೂರ್ತ!’ ಎಂಬ ಶೀರ್ಷಿಕೆಯ ವರದಿಯನ್ನು ಕಳೆದ ಸೆಪ್ಟೆಂಬರ್‌ 20ರಂದು ಪ್ರಕಟಿಸಿ ಮಂಡಳಿಯ ಗಮನ ಸೆಳೆದಿತ್ತು.

ಸೌಲಭ್ಯಗಳು:ಸಮುಚ್ಚಯವೂ ಆರು ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಪ್ರತಿ ಮನೆಯೂ 300 ಚದರ ಅಡಿ ವಿಸ್ತೀರ್ಣವಿದೆ. ಅದರಲ್ಲಿಯೇ ಹಾಲ್‌, ಒಂದು ಬೆಡ್‌ರೂಮ್‌, ಅಡುಗೆ ಕೋಣೆ, ಶೌಚಾಲಯ ವ್ಯವಸ್ಥೆ ಇದೆ.

ಆರು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಒಳಚರಂಡಿ ಕಾಮಗಾರಿ ಸದ್ಯ ಮುಗಿದಿದೆ. ವಿದ್ಯುತ್‌ ಸಂಪರ್ಕದ ಕೆಲಸವೂ ಬಹುತೇಕ ಪೂರ್ಣಗೊಂಡಿದೆ. ಇದಕ್ಕಾಗಿ 11 ಕೆ.ವಿ.ವಾಟ್‌ನ ಟ್ರಾನ್ಸ್‌ಫಾರ್ಮರ್‌ಗಳನ್ನು ಜೋಡಿಸಲಾಗಿದೆ.

ನೀರಿನ ವ್ಯವಸ್ಥೆಗಾಗಿ ಮೂರು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ನಾಲ್ಕು ಸಂಪ್‌ಗಳನ್ನು ಕಟ್ಟಲಾಗಿದೆ. ಇಲ್ಲಿಂದ ನೀರು ಪಂಪ್‌ ಆಗಿ ಒವರ್‌ ಹೆಡ್‌ ಟ್ಯಾಂಕ್‌ಗಳಲ್ಲಿ ಶೇಖರಣೆ ಆಗಲಿದೆ. ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಸರಬರಾಜಿಗೆ ಕೊಳವೆಗಳನ್ನು ಜೋಡಿಸಲಾಗಿದೆ.

ನಿವಾಸಿಗಳ ಸಭೆ, ಸಮಾರಂಭಗಳ ಆಚರಣೆಗಾಗಿ ಎರಡು ಅಂತಸ್ತಿನ ಸಭಾಭವನ ಕಟ್ಟಲಾಗುತ್ತಿದೆ. ಅದರ ಮುಂಭಾಗದಲ್ಲೇ ಮಕ್ಕಳ ಉದ್ಯಾನ ನಿರ್ಮಾಣಕ್ಕೆ ಜಾಗ ಮೀಸಲಿರಿಸಲಾಗಿದೆ. ಜನರಲ್‌ ಸ್ಟೋರ್‌, ಮೆಡಿಕಲ್‌ ಸ್ಟೋರ್‌, ಹಣ್ಣು–ತರಕಾರಿ ಅಂಗಡಿಗಳಿಗಾಗಿ ಮಳಿಗೆಗಳನ್ನು ರೂಪಿಸಲಾಗಿದೆ.

‘ಮಳೆನೀರಿನ ಹರಿವಿಗೆಸದ್ಯಕ್ಕೆ ಕಾಲುವೆಗಳನ್ನು ಕಟ್ಟಲಾಗಿದೆ. ಮುಂದಿನ ದಿನಗಳಲ್ಲಿ ಮಳೆನೀರಿನ ಸಂಗ್ರಹ ವ್ಯವಸ್ಥೆ ಮಾಡುತ್ತೇವೆ’ ಎಂದು ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಪ್ಪ
ತಿಳಿಸಿದರು.

ಸಮುಚ್ಚಯವನ್ನು ಜವಾಹರಲಾಲ್‌ ನೆಹರೂ ರಾಷ್ಟ್ರೀಯ ನಗರ ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇ 50 ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ನೀಡಿವೆ.

₹ 50 ಸಾವಿರ ವಂತಿಗೆ

‘ಕಟ್ಟಿದ ಮನೆಯೊಂದರ ವೆಚ್ಚದ ಶೇ 10ರಷ್ಟು ಮೊತ್ತವನ್ನು ಫಲಾನುಭವಿಗಳು ವಂತಿಕೆಯಾಗಿ ಮಂಡಳಿಗೆ ಪಾವತಿಸಬೇಕು. ಆರ್ಥಿಕವಾಗಿ ಸ್ವಲ್ಪ ಸಬಲರಾದವರಿಂದ ಮಾತ್ರ ವಂತಿಕೆ ಪಡೆದು ಮನೆಗಳನ್ನು ವಾಸಕ್ಕೆ ನೀಡುತ್ತೇವೆ. ಈ ಮೊತ್ತವನ್ನೂ ಪಾವತಿಸಲು ಶಕ್ತರಿಲ್ಲದ ಫಲಾನುಭವಿಗಳಿಗೆ ನೆರವಾಗಲು ಬಿಬಿಎಂಪಿ ₹ 85 ಲಕ್ಷ ನೀಡಲು ಮುಂದಾಗಿದೆ’ ಎಂದು ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪದ್ಮನಾಭ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ–ಅಂಶ

* 924 - ಸಮುಚ್ಚಯದಲ್ಲಿನ ಒಟ್ಟು ಮನೆಗಳು

* ₹35 ಕೋಟಿ - ಯೋಜನೆಯ ಒಟ್ಟು ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT