ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಮಾರಾಟಕ್ಕೆ ವಿರೋಧ: ಎಪಿಎಂಸಿ ಬಂದ್‌

ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡದಂತೆ ಒತ್ತಾಯ * ‘ಬಿ2ಬಿ’ ಆ್ಯಪ್‌ ಸೇವೆ ರದ್ದತಿಗೆ ಆಗ್ರಹ
Last Updated 7 ಡಿಸೆಂಬರ್ 2018, 18:59 IST
ಅಕ್ಷರ ಗಾತ್ರ

ಬೆಂಗಳೂರು: ದಿನಸಿ ಪದಾರ್ಥಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಯಶವಂತಪುರ ಎಪಿಎಂಸಿ ವರ್ತಕರು ಶುಕ್ರವಾರ ವಹಿವಾಟು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

‘ಎಪಿಎಂಸಿ ವರ್ತಕರನ್ನು ಉಳಿಸಿ’ ಎಂಬ ಘೋಷಣೆ ಕೂಗಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಯಶವಂತಪುರ ಎಪಿ‌ಎಂಸಿ ಯಾರ್ಡ್ ಒಕ್ಕೂಟ'ದ ಮುಖಂಡ ರಮೇಶ್ಚಂದ್ರ ಲಹೋಟಿ, ‘ಅಕ್ಕಿ, ಬೆಳೆ, ಸಕ್ಕರೆ ಸೇರಿದಂತೆ ದಿನಸಿ ಪದಾರ್ಥಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುತ್ತಿರುವುದು ಖಂಡನೀಯ. ಇದರಿಂದ ನಮ್ಮಂಥ ವರ್ತಕರು ಬೀದಿಗೆ ಬೀಳಲಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಆನ್‌ಲೈನ್‌ ವಹಿವಾಟಿಗಾಗಿ ಜಾರಿಗೆ ತರಲಾಗುತ್ತಿರುವ ‘ಬಿ2ಬಿ’ ಆ್ಯಪ್ ಸೇವೆಯನ್ನು ಈ ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಎಪಿಎಂಸಿ ಬಂದ್‌ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಬಿ.ಎಲ್‌.ಶಂಕರಪ್ಪ, ‘ಆನ್‌ಲೈನ್‌ನಲ್ಲಿ ದಿನಸಿ ಪದಾರ್ಥಗಳನ್ನು ಮಾರಾಟ ಮಾಡಲು ‘ಬಿ2ಬಿ’ ಆ್ಯಪ್‌ ಸೇವೆ ಬಳಸುವುದರಿಂದ, ಎಪಿಎಂಸಿ ಯಾರ್ಡ್‌ನ ವ್ಯಾಪಾರಸ್ಥರಿಗೆ ನಷ್ಟ ಉಂಟಾಗಲಿದೆ. ಅಂಗಡಿಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ತಗ್ಗಲಿದ್ದು, ಮಳಿಗೆಗಳಿಗೆ ಬೀಗ ಹಾಕಬೇಕಾದ ಸ್ಥಿತಿ ಬರಲಿದೆ’ ಎಂದು ದೂರಿದರು.

‘ಎಪಿಎಂಸಿಯಲ್ಲಿ ನಿತ್ಯವೂ 1 ಸಾವಿರ ಟನ್‍ನಿಂದ 100 ಟನ್‍ವರೆಗೂ ವ್ಯಾಪಾರ ನಡೆಯುತ್ತಿದೆ. ರಾಜ್ಯ ಸರ್ಕಾರವು ಆನ್‍ಲೈನ್ ಸೇವೆಯನ್ನು ಜಾರಿಗೆ ತಂದು ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಆನ್‍ಲೈನ್ ಸೇವೆಯನ್ನು ನಿಷೇಧಿಸಲಾಗಿದ್ದು, ಅಂಥ ನಿರ್ಧಾರವನ್ನು ನಮ್ಮ ರಾಜ್ಯ ಸರ್ಕಾರವೂ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಶಾಸಕ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ, ‘ವರ್ತಕರ ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT