ಹಿರಿಯ ವಕೀಲರ ನಿಯುಕ್ತಿ ಅಧಿಸೂಚನೆ ರದ್ದತಿಗೆ ಅರ್ಜಿ

ಸೋಮವಾರ, ಮೇ 27, 2019
23 °C

ಹಿರಿಯ ವಕೀಲರ ನಿಯುಕ್ತಿ ಅಧಿಸೂಚನೆ ರದ್ದತಿಗೆ ಅರ್ಜಿ

Published:
Updated:

ಬೆಂಗಳೂರು: ಹೈಕೋರ್ಟ್‌ನ 17 ವಕೀಲರನ್ನು ‘ಹಿರಿಯ ವಕೀಲ’ರು ಎಂದು ನಿಯುಕ್ತಿಗೊಳಿಸಿದ ಅಧಿಸೂಚನೆ ರದ್ದುಗೊಳಿಸಬೇಕು ಎಂಬ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಲಾಗಿದೆ.

ಈ ಕುರಿತ ಅರ್ಜಿಗಳನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಈ ಕುರಿತಂತೆ 2018ರ ನ. 16 ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್‌ ಅವರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಆಕ್ಷೇಪಣೆ ಏನು?: ‘ಆಯ್ಕೆ ವೇಳೆ ಅನುಸರಿಸಲಾಗಿರುವ ನಿಯಮಗಳ ದಾಖಲೆ ಬಹಿರಂಗಪಡಿಸಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ. ‘ಆರ್‌ಟಿಐ ಕಾಯ್ದೆ ಅಡಿಯಲ್ಲೂ ಮಾಹಿತಿ ಒದಗಿಸಿಲ್ಲ. ಪದೋನ್ನತಿಗೆ ನಾಲ್ವರು ವಕೀಲರ ಹೆಸರನ್ನು ಶಿಫಾರಸು ಮಾಡಿದ್ದ ಅಡ್ವೊಕೇಟ್ ಜನರಲ್ ಅವರೇ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಸರಿಯಲ್ಲ’ ಎಂದೂ ಅರ್ಜಿದಾರು ದೂರಿದ್ದಾರೆ.

ಪುತ್ತಿಗೆ ಆರ್. ರಮೇಶ್ ಸೇರಿದಂತೆ ನಾಲ್ವರು ವಕೀಲರು ಹಾಗೂ ಜಿ.ಆರ್‌. ಮೋಹನ್ ಪ್ರತ್ಯೇಕವಾಗಿ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ. ‘ಹಿರಿಯ ವಕೀಲರ ಆಯ್ಕೆ ಸಂದರ್ಭ ನೀಡಲಾಗಿರುವ ಅಂಕಗಳ ಮರು ಮೌಲ್ಯಮಾಪನಕ್ಕೆ ನಿರ್ದೇಶಿಸ ಬೇಕು’ ಎಂಬುದು ಮೋಹನ್‌ ಅವರ ಕೋರಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !