ಚಾಲಾಕಿ ಚೋರನ ಬಳಿ ಸಹಸ್ರಾರು ನಕಲಿ ಕೀಗಳು!

ಗುರುವಾರ , ಏಪ್ರಿಲ್ 25, 2019
21 °C
ಕೀ ತಯಾರಿಸುವ ಯಂತ್ರವನ್ನೇ ಇಟ್ಟುಕೊಂಡಿದ್ದ * ನೂರಕ್ಕೂ ಹೆಚ್ಚು ಮನೆಗಳಲ್ಲಿ ಆಭರಣ ದೋಚಿದ್ದ

ಚಾಲಾಕಿ ಚೋರನ ಬಳಿ ಸಹಸ್ರಾರು ನಕಲಿ ಕೀಗಳು!

Published:
Updated:
Prajavani

ಬೆಂಗಳೂರು:‌ ಕೀ ತಯಾರಿಸುವ ಯಂತ್ರವನ್ನೇ ತನ್ನ ಬಳಿ ಇಟ್ಟುಕೊಂಡಿದ್ದ ಈ ಚಾಲಾಕಿ, ಅದರಿಂದ ಸಾವಿರಾರು ಕೀಗಳನ್ನು ತಯಾರಿಸಿ ನಗರದ ನೂರಕ್ಕೂ ಹೆಚ್ಚು ಮನೆಗಳಲ್ಲಿ ನಗ–ನಾಣ್ಯ ದೋಚಿದ್ದ. ಇದೀಗ ಸಿ.ಸಿ ಟಿ.ವಿ ಕ್ಯಾಮೆರಾ ನೀಡಿದ ಸುಳಿವಿನಿಂದ ಆತ ಸದ್ದುಗುಂಟೆಪಾಳ್ಯ ಪೊಲೀಸರಿಗೆ ಸಿಕ್ಕಿಬಿದ್ದು ಕಂಬಿ ಹಿಂದೆ ಸೇರಿದ್ದಾನೆ.

‘ಉತ್ತರಹಳ್ಳಿ ಸಮೀಪದ ಭುವನೇಶ್ವರಿನಗರ ನಿವಾಸಿ ಪ್ರಕಾಶ್ ಅಲಿಯಾಸ್ ಬಾಲಾಜಿ (32) ಎಂಬಾತನನ್ನು ಬಂಧಿಸಿ, ಒಂದೂಕಾಲು ಕೆ.ಜಿ ಚಿನ್ನ ಹಾಗೂ 1 ಕೆ.ಜಿ. 800 ಗ್ರಾಂ ಬೆಳ್ಳಿ ವಸ್ತುಗಳನ್ನು (ಒಟ್ಟು ಮೌಲ್ಯ ₹ 40 ಲಕ್ಷ) ಜಪ್ತಿ ಮಾಡಿದ್ದೇವೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ.

ಹಗಲು ವೇಳೆ ಪ್ರತಿಷ್ಠಿತ ರಸ್ತೆಗಳಲ್ಲಿ ಓಡಾಡುತ್ತಿದ್ದ ಪ್ರಕಾಶ್, ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್ ಸಮುಚ್ಚಯಗಳನ್ನು ಗುರುತಿಸಿಕೊಳ್ಳುತ್ತಿದ್ದ. ಬಳಿಕ ಫ್ಲ್ಯಾಟ್‌ ಖರೀದಿದಾರನ ಸೋಗಿನಲ್ಲಿ ಒಳ ಹೋಗಿ, ಅಲ್ಲಿ ಇರುತ್ತಿದ್ದ ಮಾಲೀಕರು ಅಥವಾ ವ್ಯವಸ್ಥಾಪಕರ ಜತೆ ಮಾತುಕತೆ ನಡೆಸುತ್ತಿದ್ದ. ಅವರು ಫ್ಲ್ಯಾಟ್ ತೋರಿಸುವ ವೇಳೆ, ಬಾಗಿಲುಗಳಲ್ಲೇ ಬಿಟ್ಟಿರುತ್ತಿದ್ದ ಕೀಗಳ ಗೊಂಚಲಿನಿಂದ ಒಂದು ಕೀಯನ್ನು ಕಳವು ಮಾಡಿಕೊಂಡು ಹೋಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಕಟ್ಟಡ ನಿರ್ಮಾಣ ಕೆಲಸ ಮುಗಿಯುವವರೆಗೂ ಕಾಯುತ್ತಿದ್ದ ಆರೋಪಿ, ಆ ಫ್ಲ್ಯಾಟ್‌ಗೆ ಯಾರಾದರೂ ಬಾಡಿಗೆ ಬಂದ ಕೂಡಲೇ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ. ನಿತ್ಯ ಕಟ್ಟಡದ ಬಳಿ ಹೋಗಿ, ಬಾಡಿಗೆದಾರರು ಯಾವಾಗ ಮನೆಯಿಂದ ಹೊರ ಹೋಗುತ್ತಾರೆ? ಯಾವಾಗ ವಾಪಸ್ ಬರುತ್ತಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದ.

ಕೊನೆಗೆ, ಮೊದಲೇ ಕಳವು ಮಾಡಿದ್ದ ಕೀ ಬಳಸಿ ಒಂದು ದಿನ ಆ ಫ್ಲ್ಯಾಟ್‌ಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸ್ಟಿಕ್ಕರ್ ಅಂಟಿಸುತ್ತಿದ್ದ: ಹಲವು ಮನೆಗಳ ಕೀಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ ಆರೋಪಿ, ಗೊಂದಲ ಆಗಬಾರದೆಂದು ಅದು ಯಾವ ಮನೆಯ ಕೀ ಎಂದು ಪ್ರತಿಯೊಂದರ ಮೇಲೂ ಸ್ಟಿಕ್ಕರ್ ಅಂಟಿಸಿ ವಿಳಾಸ ಬರೆದಿರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 

2018ರ ಫೆಬ್ರುವರಿಯಲ್ಲಿ ಬೊಮ್ಮನಹಳ್ಳಿ ಪೊಲೀಸರು ಪ್ರಕಾಶ್‌ನನ್ನು ಬಂಧಿಸಿ 1 ಕೆ.ಜಿ 750 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಈತ, ಜೂನ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಎಂಟು ಮನೆಗಳಲ್ಲಿ ಕಳ್ಳತನ ಮಾಡಿದ್ದ. 2018ರ ಡಿ.2ರಂದು ಭವಾನಿನಗರದ ‘ಚಂದ್ರೋದಯ’ ಕಲ್ಯಾಣ ಮಂಟಪಕ್ಕೆ ನುಗ್ಗಿದ್ದ ಆರೋಪಿ,ಅಲ್ಲೇ ಕೊಠಡಿಯೊಂದರ ನಕಲಿ ಕೀ ತಯಾರಿಸಿಕೊಂಡು ಮದುವೆಗೆ ಬಂದಿದ್ದವರ ಒಡವೆಗಳನ್ನು ದೋಚಿದ್ದ.

ಮದುವೆ ವಿಡಿಯೊ ಪರಿಶೀಲಿಸಿದ ಪೊಲೀಸರಿಗೆ, ಆರೋಪಿಯ ಚಹರೆ ಸಿಕ್ಕಿತ್ತು. ಅದರ ಬೆನ್ನಲ್ಲೇ ಎಚ್‌ಎಸ್‌ಆರ್ ಲೇಔಟ್‌ ಠಾಣೆ ವ್ಯಾಪ್ತಿಯ ಫ್ಲ್ಯಾಟ್‌ ಒಂದರಲ್ಲೂ ಕಳ್ಳತನ ಮಾಡಿದ್ದ. ಆ ದೃಶ್ಯವೂ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ಮೊಬೈಲ್ ಕರೆ ವಿವರ ಆಧರಿಸಿ ಪೊಲೀಸರು ಮಾರ್ಚ್ 23ರಂದು ಪೀಣ್ಯದಲ್ಲಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !