ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಬೆವರಿಳಿಸಿದ ರೇವಣ್ಣ

ಕೆಲಸ ಮಾಡದ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ
Last Updated 15 ಜೂನ್ 2018, 12:19 IST
ಅಕ್ಷರ ಗಾತ್ರ

ಹಾಸನ: ಸಮರ್ಪಕ ಮಾಹಿತಿ ನೀಡದ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಮಾಡಿದ ಅಧಿಕಾರಿಗಳಿಗೆ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಬೆವರಿಳಿಸಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ, ವಿವಿಧ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಮಾದರಿ ಜಿಲ್ಲೆಯಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸರಿಯಾಗಿ ಕರ್ತವ್ಯ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು.

ಎರಡು ತಿಂಗಳ ಒಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಎಲ್ಲಾ ಸಾಮಾಜಿಕ ಭದ್ರತಾ ಪಿಂಚಣಿಗಳು, ಬಿ.ಪಿ.ಎಲ್ ಕಾರ್ಡುಗಳ ವಿತರಣೆ ಪೂರ್ಣಗೊಳಿಸಬೇಕು. ಪ್ರತಿ ಗ್ರಾಮವಾರು ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನಕ್ಕೆ ಬಾಕಿ ಇರುವ ಅರ್ಹರನ್ನು ಪತ್ತೆ ಮಾಡಿ ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜಿಸಿ ಸ್ಥಳದಲ್ಲಿಯೇ ಪಿಂಚಣಿ ಮಂಜೂರೂ ಮಾಡಿ ಆದೇಶ ಪ್ರತಿ ನೀಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದೇ ರೀತಿ ಬಿಪಿಎಲ್ ಪಡಿತರ ಚೀಟಿ ಹೊಂದಿರದ ಅರ್ಹರನ್ನು ಪತ್ತೆ ಮಾಡಿ ಅವರಿಗೂ ಶೀಘ್ರವೇ ಕಾರ್ಡ್ ವಿತರಿಸುವಂತೆ ಹೇಳಿದರು.

ಜಿಲ್ಲಾಧಿಕಾರಿ ಪಿ.ಸಿ.ಜಾಫರ್‌ ಪ್ರತಿಕ್ರಿಯಿಸಿ, ಪಿಂಚಣಿ ಮಂಜೂರಾತಿಗಾಗಿ ಪ್ರತಿ ಹೋಬಳಿ ಮಟ್ಟದಲ್ಲಿ ವಿಶೇಷ ಆಂದೋಲನ ನಡೆಸಿ ಸ್ಥಳದಲ್ಲಿ ವ್ಶೆದ್ಯಾಧಿಕಾರಿಗಳು, ಅಂಗವಿಕಲರು ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಮತ್ತು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಅಗತ್ಯ ದೃಢೀಕರಣ ಪತ್ರ ನೀಡಬೇಕು. ಈ ಬಗ್ಗೆ ಎಲ್ಲಾ ತಹಶೀಲ್ದಾರರು ಯೋಜಿತವಾಗಿ ಕಾರ್ಯಾನುಸ್ಠಾನಗೊಳಿಸಬೇಕು ಎಂದು ತಿಳಿಸಿದರು.

ಕೃಷಿ ಚಟುವಟಿಕೆ ಕುರಿತು ಮಾಹಿತಿ ನೀಡಿದ ಜಂಟಿ ಕೃಷಿ ನಿರ್ದೇಶಕ ಮಧುಸೂದನ್‌, ‘ಮುಂಗಾರು ಹಂಗಾಮಿನಲ್ಲಿ 2.60 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 60 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಹೆಚ್ಚಿನ ಮಳೆಯಿಂದ 520 ಹೆಕ್ಟೇರ್ (ತಂಬಾಕು 345 ಹೆಕ್ಟೇರ್‌, ಹಲಸಂದೆ 175 ಹೆಕ್ಟೇರ್‌ ) ಬೆಳೆ ಹಾನಿಯಾಗಿದೆ. 1,500 ಹೆಕ್ಟೇರ್‌ನಲ್ಲಿ ನೀರು ನಿಂತಿದ್ದು, ಇದೇ ರೀತಿ ಜೋರು ಮಳೆಯಾದರೆ ಬೆಳೆ ಹಾನಿ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿಯಿಂದ ಹಾನಿಗೀಡಾಗಿರುವ ಬೆಳೆ, ಮನೆಗಳಿಗೆ ತಕ್ಷಣ ಪರಿಹಾರ ವಿತರಿಸಬೇಕು. ಮಳೆ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕೃಷಿ, ತೋಟಗಾರಿಕೆ, ಚೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳ ತಂಡ ನಿರಂತರ ನಿಗಾ ವಹಿಸಬೇಕು. ಪ್ರತಿದಿನ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ಮಾಡಬೇಕು, ತುರ್ತು ಪರಹಾರ ಕ್ರಮಗಳಿಗೆ ಸದಾ ಸನ್ನದ್ಧರಾಗಿರಬೇಕು ಎಂದು ಹೇಳಿದರು.

ಭೂ ಮಂಜೂರಾತಿಗೆ ಹಾಗೂ ಅಕ್ರಮ ಸಕ್ರಮಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳು ಕಾಲ ಮಿತಿಯೊಳಗೆ ಪೂರ್ಣಗೊಳ್ಳಬೇಕು. ಹಣ ವಸೂಲಾತಿ ಕಂಡು ಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಅರಸೀಕೆರೆ, ಬೇಲೂರು, ಅರಕಲಗೂಡಿನ ಕೆಲ ಹಳ್ಳಿಗಳಿಗೆ ಖಾಸಗಿ ಬೋರೆವೆಲ್‌ ಮತ್ತು ಟ್ಯಾಂಕರ್‌ ಮೂಲಕ ನೀರು ನೀಡಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೂರ್ಣಿಮಾ ಸಭೆ ಗಮನಕ್ಕೆ ತಂದರು.

‘ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಕೆರೆ, ಕಟ್ಟೆಗಳು ತುಂಬಿವೆ. ಇನ್ನು ಎಷ್ಟು ದಿನ ಸುಳ್ಳು ಲೆಕ್ಕ ಬರೆಯುತ್ತೀರಾ. ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮಗಳಿಗೆ ಶಾಶ್ವತ ಯೋಜನೆಗಳು ಅನುಷ್ಠಾನವಾಗಬೇಕು. ಅಧಿಕಾರಿಗಳು ದೂರ ದೃಷ್ಟಿ ಚಿಂತನೆಯೊಂದಿಗೆ ಕೆಲಸ ಮಾಡಬೇಕು’ ಎಂದು ರೇವಣ್ಣ ತಾಕೀತು ಮಾಡಿದರು.

‘ವಿಶೇಷ ಭೂ ಸ್ವಾಧೀನ ಇಲಾಖೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದಕ್ಕೆ ಕಡಿವಾಣ ಹಾಕಬೇಕು. ಭೂ ಸ್ವಾಧೀನಗೊಂಡಿರುವ ಭೂಮಿಗೆ ತಕ್ಷಣ ಪರಿಹಾರ ವಿತರಣೆ ಆಗಬೇಕು. ನೈಜ ನಿರಾಶ್ರಿತರಿಗೆ ಭೂ ಮಂಜೂರಾತಿ ಪತ್ರ ಬೇಗ ವಿತರಿಸಬೇಕು. ಎಸ್.ಎಲ್.ಎ.ಓ ಕಚೇರಿ ಸಿಬ್ಬಂದಿಗಳನ್ನು ಸಂಪೂರ್ಣ ಬದಲಿಸಬೇಕು’ ಎಂದು ಸಚಿವರು ಜಿಲ್ಲಾಧಿಕಾರಿಗೆ ಸಲಹೆ ನೀಡಿದರು.

ಶಾಸಕ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಜಿಲ್ಲೆಯಲ್ಲಿ ಕೃಷಿ ಸಮಸ್ಯೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ಲೋಪ, ವಿಳಂಬಗಳ ಬಗ್ಗೆ ಸಭೆ ಗಮನಕ್ಕೆ ತಂದರು.

ಶಾಸಕ ಎಚ್.ಕೆ ಕುಮಾರಸ್ವಾಮಿ, ನಗರ, ಪಟ್ಟಣ ಪ್ರದೇಶಗಳಲ್ಲಿ ಎಲ್ಲಿಯೂ ಖಾಲಿ ಜಾಗ ಉಳಿಯುತ್ತಿಲ್ಲ. ಕೃಷಿ ಜಾಗವು ಭೂ ಪರಿವರ್ತನೆ, ನಿವೇಶನಗಳ ನಿರ್ಮಾಣ ಮಾರಾಟ ನಡೆಯುತ್ತಿದೆ. ಈ ಬಗ್ಗೆ ನಿಯಂತ್ರಣ ತರಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಶಾಸಕರಾದ ಬಾಲಕೃಷ್ಣ, ಕೆ.ಎಸ್.ಲಿಂಗೇಶ್, ಪ್ರೀತಂ ಜೆ ಗೌಡ, ಪ್ರತಿ ಹೋಬಳಿ ಕೇಂದ್ರದಲ್ಲಿ 5 ರಿಂದ 10 ಎಕರೆ ಜಾಗ ಕಾಯ್ದಿರಿಸಿ ಕಸ ವಿಲೇವಾರಿಗೆ ಸೂಕ್ತ ಯೋಜನೆ ರೂಪಿಸಬೇಕಿದೆ ಎಂದು ಒತ್ತಾಯಿಸಿದರು.

ಜಲಾಶಯಗಳ ನೀರಿನ ಸಂಗ್ರಹ ಒಳ ಹರಿವಿನ ಬಗ್ಗೆ ಮಾಹಿತಿ ಪಡೆದ ಸಚಿವರು, ಕೃಷಿ ಉದ್ದೇಶಕ್ಕೆ ನೀರು ಹರಿಸುವ ಬಗ್ಗೆ ಶೀಘ್ರ ತೀರ್ಮಾನಿಸಲಾಗುವುದು. ನಾಲೆ ದುರಸ್ತಿಗೆ ಅಗತ್ಯವಿರುವ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಹೇಮಾವತಿ, ಯಗಚಿ, ವಾಟೇಹೊಳೆ ಯೋಜನೆಗಳಿಗೆ ಅಗತ್ಯವಿರುವ ಪ್ರಸ್ತಾವಗಳನ್ನು ಕೂಡಲೇ ಸಲ್ಲಿಸಬೇಕು. ಹೂಳೆತ್ತುವುದು, ನಾಲೆಗಳ ದುರಸ್ತಿ ಕಾರ್ಯ ತುರ್ತಾಗಿ ನಡೆಯಬೇಕಿದೆ ಎಂದು ಅವರು ಹೇಳಿದರು.

18 ನೇ ಕಾಲುವೆಯಿಂದ ಬಲ ಮೇಲ್ದಂಡೆ ಕಾಲುವೆಗಳಿಗೆ ನೀರು ಹರಿಸಬೇಕು. ಹಾಸನ ನಗರದಲ್ಲಿ ₹ 110 ಕೋಟಿ ರೂಪಾಯಿ ಅಂದಾಜು ಮೊತ್ತದ ರಸ್ತೆ ಕಾಮಗಾರಿಗೆ ಸಿ.ಆರ್.ಎಫ್ ನಿಧಿಯಿಂದ ಮಂಜೂರಾತಿ ನೀಡಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷ ಶ್ರೀನಿವಾಸ್, ಪೋಲಿಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪುರವಾಡ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಹಾಜರಿದ್ದರು.

ಅಸಮರ್ಥರನ್ನು ಅಮಾನತು ಮಾಡಿ

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವರ ಕೆಲಸವೇನು ಎಂಬುದೇ ಗೊತ್ತಿಲ್ಲ. ಇದಕ್ಕಾಗಿ ತರಬೇತಿ ಹಮ್ಮಿಕೊಂಡಿದ್ದು, ಅಸಮರ್ಥರನ್ನು ಕೆಲಸದಿಂದ ವಿಮುಕ್ತಿಗೊಳಿಸುವ ಎಚ್ಚರಿಕೆ ನೀಡಲಾಗಿದೆ. ಹಾಸನ ನಗರದ ಸುತ್ತಮುತ್ತ 10 ಪಂಚಾಯಿತಿಗಳಲ್ಲಿ ಕೇವಲ ಖಾತೆ ಬದಲಾವಣೆ ಬಿಟ್ಟರೆ ಬೇರೆ ಕೆಲಸ ಮಾಡುತ್ತಿಲ್ಲ. ನಾನು ಡಿಗ್ರಿ ಮಾಡಿದ್ದೇನೆ, ಪಿಡಿಓಗಳೂ ಡಿಗ್ರಿ ಮಾಡಿದ್ದಾರೆ. ಅವರಿಗೂ ನನಗೂ ಯಾವುದೇ ವ್ಯತ್ಯಾಸ ಇಲ್ಲ’ ಎಂದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಾಥ್‌ ನೀಡಿದ ರೇವಣ್ಣ, ‘ಕೆಲಸ ಮಾಡದವರನ್ನು ಅಮಾನತು ಮಾಡಿ, ನಿಮ್ಮ ಜತೆ ನಾನಿರುವೆ’ ಎಂದು ಅಭಯ ನೀಡಿದರು.

ನಗೆಯ ಹೊನಲು

ಅರಕಲಗೂಡು ತಾಲ್ಲೂಕಿನ ಗಂಗೂರು ಗ್ರಾಮ ಪಂಚಾಯಿತಿ ಪಿಡಿಓ ಅವರು ರೇವಣ್ಣರಿಗೆ ದೂರು ನೀಡಿದರು. ‘ಪಂಚಾಯಿತಿ ಸದಸ್ಯರು ಕಾನೂನು ಬಾಹಿರ ಕೆಲಸ ಮಾಡುವಂತೆ ಒತ್ತಡ ಹೇರುತ್ತಾರೆ. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಬೇರೆಡೆಗೆ ವರ್ಗಾವಣೆ ಮಾಡುವಂತೆ’ ಮನವಿ ಮಾಡಿದರು. ನಂತರ ರೇವಣ್ಣ ಪ್ರತಿಕ್ರಿಯಿಸಿ, ‘ತಹಶೀಲ್ದಾರ್‌ ಜತೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡುತ್ತೇನೆ. ಕಾನೂನು ರೀತಿಯಲ್ಲಿ ಕೆಲಸ ಮಾಡಿ ಎಂದರು. ಸಚಿವರ ಮಾತಿಗೆ ಟಾಂಗ್‌ ಕೊಟ್ಟ ಪಿಡಿಓ, ‘ಅಧ್ಯಕ್ಷೆ ಕಚೇರಿಗೆ ಬರುವುದಿಲ್ಲ. ಅವರ ಪತಿ ಬರುತ್ತಾರೆ’ ಎಂದು ಹೇಳುತ್ತಿದ್ದಂತೆ ಸಭೆಯಲ್ಲಿದ್ದವರು ನಗೆಗಡಲಲ್ಲಿ ತೇಲಿದರು.

600ಕ್ಕೂ ಹೆಚ್ಚು ಸಿಬ್ಬಂದಿ ಭಾಗಿ

ಸಭೆಯಲ್ಲಿ 600ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಹೊಯ್ಸಳ ಸಭಾಂಗಣ ತುಂಬಿ ತುಳುಕುತ್ತಿತ್ತು. ಸಭಾಂಗಣದಲ್ಲಿ ಕೂರಲು ಸ್ಥಳವಿಲ್ಲದೇ ಹೊರಾಂಗಣ, ಮೆಟ್ಟಿಲುಗಳ ಮೇಲೆ ಅಧಿಕಾರಿಗಳು ನಿಂತಿರುವ ದೃಶ್ಯ ಕಂಡು ಬಂತು.
ಕಂದಾಯ, ಕೃಷಿ, ನೀರಾವರಿ ಇಲಾಖೆ, ನಗರಸಭೆ, ನಗರ ನೀರು ಸರಬರಾಜು, ಭೂ ಸ್ವಾಧೀನ ಅಧಿಕಾರಿಗಳು ಸೇರಿ 8 ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರ್‌ಗಳು, 267 ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗಿಯಾಗಿದ್ದರು.

ಪಿಡಿಓಗಳಿಗೆ ಬಹುಮಾನ

ಜಿಲ್ಲೆಯನ್ನು ಎಲ್ಲಾ ಕ್ಷೇತ್ರದಲ್ಲಿ ನಂಬರ್‌ 1 ಮಾಡಬೇಕು. ಉತ್ತಮ ಕಾರ್ಯ ನಿರ್ವಹಿಸುವ ಪಿಡಿಓ ಮತ್ತು ಕಾರ್ಯದರ್ಶಿಗಳಿಗೆ ₹ 25 ರಿಂದ ₹ 50 ಸಾವಿರ ವರೆಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಸಚಿವರು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT