ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮೇಲೆ ಹಲ್ಲೆ: ಕಠಿಣ ಕಾನೂನು ಜಾರಿಗೆ ಆಗ್ರಹ

Last Updated 14 ಜೂನ್ 2019, 13:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋಲ್ಕತ್ತದ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವಿಗೀಡಾದ ರೋಗಿಯೊಬ್ಬರಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯ ಹುಬ್ಬಳ್ಳಿ ಘಟಕದ ಸದಸ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ವೈದ್ಯರ ಮೇಲೆ ಹಲ್ಲೆಗಳು ಹೆಚ್ಚಾಗಿ ನಡೆಯುತ್ತಿವೆ. ವೈದ್ಯ ವೃತ್ತಿಯಲ್ಲಿರುವವರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಪ್ರತಿಯೊಬ್ಬ ವೈದ್ಯರೂ ರೋಗಿಯನ್ನು ಅಪಾಯದಿಂದ ಪಾರು ಮಾಡಬೇಕೆಂದೇ ಬಯಸಿರುತ್ತಾರೆ. ಸಾಧ್ಯವಿರುವ ಎಲ್ಲ ಚಿಕಿತ್ಸೆಯನ್ನೂ ನೀಡುತ್ತಾರೆ. ಚಿಕಿತ್ಸೆಗೆ ಸ್ಪಂದಿಸದಿದ್ದಾಗ ರೋಗಿ ಸಾಯುತ್ತಾನೆ. ಅದಕ್ಕೆ ವೈದ್ಯರು ಹೊಣೆಗಾರರಲ್ಲ. ಇದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದರು.

ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದವರಿಗೆ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಅದನ್ನು ಏಳು ವರ್ಷಕ್ಕೆ ಏರಿಕೆ ಮಾಡಬೇಕು. ಆಗ ಹಲ್ಲೆ ಮಾಡಿದವರಿಗೆ ಜಾಮೀನು ಸಿಗುವುದಿಲ್ಲ. ಅಲ್ಲದೆ, ಕೇಂದ್ರ ಸರ್ಕಾರ ವೈದ್ಯರ ರಕ್ಷಣೆ ಕುರಿತು ನೂತನ ಕಾನೂನು ಜಾರಿಗೆ ತರಬೇಕು ಎಂದು ಐಎಂಎ ಅಧ್ಯಕ್ಷ ಡಾ. ಅಭಯ ಮಟ್ಕರ್ ಆಗ್ರಹಿಸಿದರು.

ಡಾ. ಜಿ.ಬಿ. ಸತ್ತೂರ ಮಾತನಾಡಿ, ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣದ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಲ್ಲಿ ಈಗಾಗಲೇ ಚರ್ಚೆ ನಡೆಸಿದ್ದೇವೆ. ಮುಂಬರುವ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ. ಶಾಸಕ ಜಗದೀಶ ಶೆಟ್ಟರ್‌, ಪ್ರಸಾದ ಅಬ್ಬಯ್ಯ ಅವರಲ್ಲೂ ಈ ಕುರಿತು ಮಾತನಾಡಿದ್ದು, ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ ಎಂದರು.

ಹುಬ್ಬಳ್ಳಿ ಘಟಕದ ಕಾರ್ಯದರ್ಶಿ ಡಾ. ಸಚಿನ್‌ ರೇವಣ್ಕರ್‌ ಹಾಗೂ ಡಾ. ನಾಗರಾಜ ಟಂಕಸಾಲಿ, ಡಾ. ಎಂ.ಸಿ. ಸಿಂಧೂರ, ಡಾ. ಮಹೇಶ ಡಿ.ಕೆ., ಡಾ. ಮಂಜುನಾಥ ನೇಕಾರ, ಡಾ.ಎಚ್‌.ಬಿ. ಕೊಟಬಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT