ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್ ಉದ್ಯೋಗಿ ಕಟ್ಟಿಹಾಕಿ ಚಿತ್ರಹಿಂಸೆ

ಡ್ರಾಪ್ ನೀಡುವ ನೆಪದಲ್ಲಿ ಸುಲಿಗೆ
Last Updated 3 ಫೆಬ್ರುವರಿ 2019, 19:19 IST
ಅಕ್ಷರ ಗಾತ್ರ

ಬೆಂಗಳೂರು: ಇನ್ಫೊಸಿಸ್ ಕಂಪನಿ ಉದ್ಯೋಗಿ ಅನುರಾಗ್ ಶರ್ಮಾ ಎಂಬುವರನ್ನು ಡ್ರಾಪ್ ನೀಡುವ ನೆಪದಲ್ಲಿ ಕಾರಿನಲ್ಲಿ ಹತ್ತಿಸಿಕೊಂಡಿದ್ದ ದುಷ್ಕರ್ಮಿಗಳು, ಕೈ–ಕಾಲು ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿ ಸುಲಿಗೆ ಮಾಡಿದ್ದಾರೆ.

ಆ ಸಂಬಂಧ ಅನುರಾಗ್ ಶರ್ಮಾ, ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದಾರೆ. ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ಚೆನ್ನೈ ಕಚೇರಿಯಲ್ಲಿ ಕೆಲಸ ಮಾಡುವ ಅನುರಾಗ್, ಜ. 26ರಂದು ಬೆಂಗಳೂರಿಗೆ ಬಂದಿದ್ದರು. ವಾಪಸ್‌ ಚೆನ್ನೈಗೆ ಹೋಗಲು ಜ. 31ರಂದು ಬಸ್‌ ಟಿಕೆಟ್ ಕಾಯ್ದಿರಿಸಿದ್ದರು. ರಾತ್ರಿ ಅವರು ನಿಲ್ದಾಣಕ್ಕೆ ಹೋಗುವುದು ತಡವಾಗಿದ್ದರಿಂದಾಗಿ ಬಸ್ ಹೊರಟುಹೋಗಿತ್ತು’ ಎಂದು ಪೊಲೀಸರು ಹೇಳಿದರು.

‘ಲಗೇಜು ಸಮೇತ ಬಂದಿದ್ದ ಅವರು ಬೇರೆ ವಾಹನದಲ್ಲಾದರೂ ಚೆನ್ನೈಗೆ ಹೋದರಾಯಿತೆಂದು ಫೆ. 1ರ ನಸುಕಿನ 1 ಗಂಟೆ ಸುಮಾರಿಗೆ ಹೊಸೂರು ಮುಖ್ಯರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿರುವ ಆಡಿ ಸರ್ವೀಸ್ ಸೆಂಟರ್‌ ಬಳಿ ನಿಂತಿದ್ದರು. ಆಗ ಆಮ್ನಿ ಕಾರಿನಲ್ಲಿ ಸ್ಥಳಕ್ಕೆ ಬಂದಿದ್ದ ನಾಲ್ವರು, ಚೆನ್ನೈವರೆಗೂ ಡ್ರಾಪ್ ಕೊಡುವುದಾಗಿ ಹೇಳಿ ಹತ್ತಿಸಿಕೊಂಡಿದ್ದರು.’

‘ಕಾರು ಸ್ವಲ್ಪ ದೂರ ಹೋಗುತ್ತಿದ್ದಂತೆ ವ್ಯಕ್ತಿಯೊಬ್ಬ, ಅನುರಾಗ್ ಅವರ ಮುಖಕ್ಕೆ ಗುದ್ದಿದ್ದ. ಇನ್ನೊಬ್ಬ, ಆಯುಧದಿಂದ ಮೋಣಕಾಲಿಗೆ ಹೊಡೆದಿದ್ದ. ನಂತರ ಆರೋಪಿಗಳೆಲ್ಲರೂ ಸೇರಿ ಪರ್ಸ್‌ ಹಾಗೂ ₹ 2 ಸಾವಿರ ಕಿತ್ತುಕೊಂಡಿದ್ದರು. ಐಸಿಐಸಿಐ ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌, ಚಾಲನಾ ಪರವಾನಗಿ ಪತ್ರ, ಗುರುತಿನ ಚೀಟಿಗಳು ಪರ್ಸ್‌ನಲ್ಲಿದ್ದವು.’

‘ಅನುರಾಗ್ ಅವರಿಗೆ ಚಿತ್ರಹಿಂಸೆ ನೀಡಿ ಎಟಿಎಂ ಕಾರ್ಡ್‌ನ ಪಿನ್ ತಿಳಿದುಕೊಂಡು, ₹45 ಸಾವಿರ ಡ್ರಾ ಮಾಡಿಕೊಂಡಿದ್ದರು. ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಚಂದಾಪುರ ಬಳಿ ತಳ್ಳಿ ಹೋಗಿದ್ದಾರೆ.’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT