ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುರಸ್ತೆಯಲ್ಲೇ ರೌಡಿ ಅಟ್ಟಹಾಸ; ಬೆಚ್ಚಿಬಿದ್ದ ಜನ

ಎದುರಾಳಿಗೆ ಹೊಡೆದ, ಜನರ ಮೇಲೂ ಮಚ್ಚು ಬೀಸಿದ; ತೋಟದ ಮನೆಯಲ್ಲಿ ಆರೋಪಿಗಳ ಸೆರೆ
Last Updated 4 ಏಪ್ರಿಲ್ 2019, 20:17 IST
ಅಕ್ಷರ ಗಾತ್ರ

ಬೆಂಗಳೂರು: ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ‌ಬುಧವಾರ ಸಂಜೆ ತಮ್ಮ ಎದುರಾಳಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಸಾರ್ವಜನಿಕರ ಮೇಲೂ ಮಚ್ಚು ಬೀಸಿದ್ದ ಪಾನಮತ್ತ ಯುವಕರಿಬ್ಬರನ್ನು ಕೃತ್ಯ ನಡೆದ ಮೂರೇ ತಾಸುಗಳಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನಕಪುರ ರಸ್ತೆ ರಘುವನಹಳ್ಳಿ ನಿವಾಸಿ ಹರ್ಷಿತ್ ಗೌಡ ಅಲಿಯಾಸ್ ಹಚ್ಚು (20) ಹಾಗೂ ವಡೇರಹಳ್ಳಿಯ ಶರಣ್ (20) ಬಂಧಿತರು. ಇವರಿಂದ ಹಲ್ಲೆಗೊಳಗಾದ ಮಿಥುನ್, ಸ್ವರೂಪ್ ಕೃಷ್ಣ, ಶ್ರೀಕಾಂತ್ ಹಾಗೂ ಸರಕು ಸಾಗಣೆ ವಾಹನದ ಚಾಲಕ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಕಂಠಪೂರ್ತಿ ಕುಡಿದು ಸಂಜೆ 6.30ರ ಸುಮಾರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಆರೋಪಿಗಳು, ಮೆಟ್ರೊ ನಿಲ್ದಾಣದ ಬಳಿ ತಮ್ಮ ಎದುರಾಳಿ ಮಿಥುನ್‌ನನ್ನು ಕಂಡಿದ್ದಾರೆ.

ಆ ಕೂಡಲೇ ಮಚ್ಚು ತೆಗೆದುಕೊಂಡು ರಸ್ತೆಯಲ್ಲೇ ಆತನನ್ನು ಅಟ್ಟಿಸಿಕೊಂಡು ಹೋದ ಹರ್ಷಿತ್, ನಿಲ್ದಾಣದ ಬಳಿ ಮುಗ್ಗರಿಸಿ ಬಿದ್ದಾಗ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಜಗಳ ಬಿಡಿಸಲು ಮುಂದಾದ, ಸ್ವರೂಪ್‌ ಎಂಬುವರಿಗೂ ಹೊಡೆದಿದ್ದಾನೆ.

ವಿಡಿಯೊ ಮಾಡಿಕೊಂಡಿದ್ದಕ್ಕೆ ಹಲ್ಲೆ: ಆ ಭೀಕರ ದೃಶ್ಯವನ್ನು ಶ್ರೀಕಾಂತ್ ಎಂಬುವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ
ಕೊಳ್ಳುತ್ತಿದ್ದರು. ಈ ವಿಚಾರ ತಿಳಿದ ಅವರ ಮೇಲೂ ಹಲ್ಲೆ ನಡೆಸಿದ್ದ ಹರ್ಷ ಹಾಗೂ ಶರಣ್, ಪೊಲೀಸ್ ವಾಹನ ಬರುತ್ತಿರುವುದನ್ನು ನೋಡಿ ಸ್ಥಳದಿಂದ ಪರಾರಿಯಾಗಿದ್ದರು. ಆ ನಂತರವೂ ಕೋಣನಕುಂಟೆ ಮುಖ್ಯರಸ್ತೆಯಲ್ಲಿ ಸರಕು ಸಾಗಣೆ ವಾಹನವೊಂದರ ಗಾಜು ಒಡೆದು, ಅದರ ಚಾಲಕನ ಮೇಲೂ ಮಚ್ಚು ಬೀಸಿದ್ದರು.

ತಮ್ಮ ಕಣ್ಮುಂದೇ ನಡೆದ ಪುಡಿರೌಡಿಗಳ ಹಾವಳಿಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದರು.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದ್ದ ವಿಡಿಯೊದ ದೃಶ್ಯ ಆಧರಿಸಿ ಕಾರ್ಯಾಚರಣೆಗೆ ಇಳಿದ ಸುಬ್ರಹ್ಮಣ್ಯಪುರ ಉಪವಿಭಾಗದ ಎಸಿಪಿ ಟಿ.ಮಹಾದೇವ್ ನೇತೃತ್ವದ ತಂಡ, ವಡೇರಹಳ್ಳಿ ತೋಟದ ಮನೆಯಲ್ಲಿ ಅವಿತಿದ್ದ ಆರೋಪಿಗಳನ್ನು ರಾತ್ರಿಯೇ ಬಂಧಿಸಿದೆ.

ದುಶ್ಚಟಗಳ ದಾಸ: ಮೂರು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಹರ್ಷಿತ್,2017ರಲ್ಲಿ ನಡೆದಿದ್ದ ಕುಮಾರಸ್ವಾಮಿ ಲೇಔಟ್ ಠಾಣೆ ರೌಡಿಶೀಟರ್ ಪುನೀತ್ ಅಲಿಯಾಸ್ ಜಬ್ಬರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ.

ಮಗ ದಾರಿ ತಪ್ಪಿದ್ದರಿಂದ ಹೆದರಿದ ಪೋಷಕರು, ಕುಮಾರಸ್ವಾಮಿಲೇಔಟ್‌ನಿಂದ ರಘುವನಹಳ್ಳಿಗೆ ವಾಸ್ತವ್ಯ ಬದಲಿಸಿದ್ದರು. ಮದ್ಯವ್ಯಸನಿಯಾಗಿದ್ದ ಆತ, ಈ ನಡುವೆ ಮಾದಕ ವಸ್ತುವಿನ ದಾಸನೂ ಆಗಿದ್ದ. ದುಶ್ಚಟಗಳನ್ನು ಬಿಡಿಸಲು ಪೋಷಕರು ಕೆಲದಿನಗಳ ಕಾಲ ದೊಡ್ಡಬಿದರಕಲ್ಲು ಸಮೀಪದ ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದರು. ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಮಂಗಳವಾರ ಸಂಜೆ ಕೂಡ ಆತ ಸ್ನೇಹಿತ ಶರಣ್ ಜತೆ ಕನಕಪುರ ರಸ್ತೆಯ ಬಾರ್‌ನಲ್ಲಿ ಪಾನಮತ್ತನಾಗಿ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಅಣ್ಣನಿರುವ ಜಾಗಕ್ಕೇ ಕಳಿಸ್ತೀನಿ’

ಈಗ ಹಲ್ಲೆಗೆ ಒಳಗಾಗಿರುವ ಮಿಥುನ್, ಹರ್ಷಿತ್‌ ಗ್ಯಾಂಗ್‌ನಿಂದ ಕೊಲೆಯಾಗಿದ್ದ ರೌಡಿ ಪುನೀತ್‌ನ ಸ್ನೇಹಿತ.

‘ಸಂಜೆ ನಾನು ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ ಮಚ್ಚು ಹಿಡಿದುಕೊಂಡು ಎದುರುಗಡೆ ಬಂದ ಹರ್ಷಿತ್, ‘ನಿನ್ನ ಅಣ್ಣನ (ಪುನೀತ್) ಕತೆ ಏನಾಯ್ತು ಗೊತ್ತು ತಾನೆ. ಅವನನ್ನು ಕಳುಹಿಸಿದ ಜಾಗಕ್ಕೇ ನಿನ್ನನ್ನೂ ಕಳಿಸ್ತೀನಿ. ನಿನಗೆ ತುಂಬ ಜನ ಫ್ರೆಂಡ್ಸ್ ಇದ್ದಾರಂತೆ. ಈಗ ನಿನ್ನನ್ನ ಉಳಿಸಿಕೊಳ್ಳೋಕೆ ಯಾರು ಬರ್ತಾರೆ ನೋಡೋಣ ಕರಿಯೋ’ ಎಂದು ಧಮ್ಕಿ ಹಾಕಿದ. ಜೀವಭಯದಿಂದ ನಾನು ಓಡಲಾರಂಭಿಸಿದೆ. ಮುಗ್ಗರಿಸಿ ಬಿದ್ದಾಗ ಮಚ್ಚಿನಿಂದ ಹೊಡೆದು. ಶರಣ್ ಜತೆ ಸ್ಕೂಟರ್‌ನಲ್ಲಿ ಹೊರಟು ಹೋದ’ ಎಂದು ಮಿಥುನ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT