ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ: ವೈದ್ಯನಿಗೂ ತಗುಲಿದ ಗುಂಡು

ವೆಂಕಟೇಶಪುರ ಮುಖ್ಯರಸ್ತೆಯಲ್ಲಿ ಘಟನೆ
Last Updated 18 ಡಿಸೆಂಬರ್ 2018, 20:19 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಜಿ.ಹಳ್ಳಿ ಸಮೀಪದ ವೆಂಕಟೇಶಪುರ ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು, ಸಲೀಂ ಅಲಿಯಾಸ್ ಚಟ್ನಿ (37) ಎಂಬುವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ದುಷ್ಕರ್ಮಿಗಳ ಗುಂಡೊಂದು ಗುರಿ ತಪ್ಪಿ, ರಸ್ತೆಯಲ್ಲಿ ನಿಂತಿದ್ದ ವೈದ್ಯ ಬಷೀರ್ ಅಹ್ಮದ್ (38) ಎಂಬುವರಿಗೂ ತಗುಲಿದೆ.

ಜಯಮಾತಾ ಲೇಔಟ್ ನಿವಾಸಿ ಸಲೀಂ,ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ರಾತ್ರಿ 11.30ರ ಸುಮಾರಿಗೆ ಕಚೇರಿ ಬಂದ್ ಮಾಡಿ ಆಚೆ ಬಂದು ಸ್ನೇಹಿತ ಜಾಫರ್ ಜೊತೆ ಮಾತನಾಡುತ್ತ ನಿಂತಿದ್ದರು. ಎರಡು ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳ ಪೈಕಿ ಇಬ್ಬರು, ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು ಎಂದು ಕೆ.ಜಿ.ಹಳ್ಳಿ ಪೊಲೀಸರು ಹೇಳಿದರು.

ಒಂದು ಗುಂಡು ಸಲೀಂರ ಅಂಗೈ ಸೀಳಿಕೊಂಡು ಹೋಗಿದ್ದು, ಮತ್ತೊಂದು ಪಕ್ಕೆಗೆ ಬಿದ್ದಿದೆ. ವೈದ್ಯ ಬಷೀರ್ ಅವರಿಗೆ ತಗುಲಿರುವ ಗುಂಡು, ತೊಡೆ ಸೀಳಿದೆ. ಇಬ್ಬರನ್ನೂ ಕ್ವೀನ್ಸ್ ರಸ್ತೆಯ ಮಹಾವೀರ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಹೋರಾಟ ಆರಂಭಿಸಿದ್ದಕ್ಕೆ ಕೃತ್ಯ: ‘ನದೀಂ ಎಂಬಾತ, 2017 ಡಿ. 12ರಂದು ‘ಆಲಾ ವೆಂಚರ್ಸ್ ಕಂಪನಿ’ ಆರಂಭಿಸಿದ್ದ.ತಿಂಗಳಿಗೆ ಶೇ 10ರಷ್ಟು ಬಡ್ಡಿ ಆಮಿಷವೊಡ್ಡಿ ಜನರಿಂದ ಹಣ ಸಂಗ್ರಹಿಸುತ್ತಿದ್ದ. ಅದೇ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಸಲೀಂ, 150ಕ್ಕೂ ಹೆಚ್ಚು ಜನರಿಂದ ಹಣ ಹೂಡಿಕೆ ಮಾಡಿಸಿದ್ದರು. ಆ ಹಣವನ್ನು ಕೊಡದೇ ನದೀಂ ನಾಪತ್ತೆಯಾಗಿದ್ದ’ ಎಂದು ಸಲೀಂರ ತಂದೆ ಫೈರೋಜ್ ಹೇಳಿದರು.

‘ಎಂಟು ತಿಂಗಳ ಹಿಂದೆ ಕಂಪನಿ ಕೆಲಸಕ್ಕೆ ಸಲೀಂ ರಾಜೀನಾಮೆ ನೀಡಿದ್ದರು. ಅಂದಿನಿಂದ ಹೂಡಿಕೆದಾರರು ಹಣ ವಾಪಸ್‌ ಕೇಳಲಾರಂಭಿಸಿದ್ದರು. ಸಂಘಟನೆಯೊಂದನ್ನು ಕಟ್ಟಿಕೊಂಡಿದ್ದ ಸಲೀಂ, ಕಂಪನಿ ವಿರುದ್ಧ ಹೋರಾಟ ಆರಂಭಿಸಿದ್ದರು. ಯುಟ್ಯೂಬ್‌ನಲ್ಲಿ ವಿಡಿಯೊ ಹರಿಬಿಟ್ಟಿದ್ದರು. ಅದೇ ಕಾರಣಕ್ಕೆ ನದೀಂನೇ ಮಗನಿಗೆ ಗುಂಡು ಹೊಡೆಸಿದ್ದಾನೆ’ ಎಂದು ಅವರು ಆರೋಪಿಸಿದರು.

ಕ್ಲಿನಿಕ್ ಹೊರಗೆ ತಗುಲಿದ ಗುಂಡು: ವೆಂಕಟೇಶಪುರದ ನಿವಾಸಿ ಬಷೀರ್ ಅಹ್ಮದ್, ‘ಮೆಡಿಲೇನ್ ಹೆಲ್ತ್‌ ಕೇರ್’ ಕ್ಲಿನಿಕ್ ನಡೆಸುತ್ತಿದ್ದಾರೆ. ರಾತ್ರಿ ಕ್ಲಿನಿಕ್ ಬಂದ್ ಮಾಡಿ ಮನೆಗೆ ಹೋಗಲೆಂದು ಹೊರಗೆ ಬಂದು ರಸ್ತೆಯಲ್ಲಿ ನಿಂತಿದ್ದರು. ಅದೇ ವೇಳೆಯೇ ದುಷ್ಕರ್ಮಿಗಳು ಹಾರಿಸಿದ್ದ ಗುಂಡು ಅವರಿಗೆ ತಗುಲಿತ್ತು ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT