ಶುಕ್ರವಾರ, ನವೆಂಬರ್ 22, 2019
20 °C

ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದ ಕ್ಯಾಬ್‌ ಚಾಲಕನ ಬಂಧನ

Published:
Updated:

ಬೆಂಗಳೂರು: ತನ್ನನ್ನು ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಆರೋಪದಡಿ ಜನಾರ್ದನ್ (26) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ಆರೋಪಿ, ಕ್ಯಾಬ್ ಚಾಲಕ. ಆತನ ವಿರುದ್ಧ ಯುವತಿ ದೂರು ನೀಡಿದ್ದಳು. ಆತ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಹಲವು ವರ್ಷಗಳಿಂದ ಯುವತಿಯ ಹಿಂದೆ ಬಿದ್ದಿದ್ದ ಆರೋಪಿ, ಆಕೆಯ ಸ್ನೇಹ ಸಂಪಾದಿಸಿದ್ದ. ತನ್ನನ್ನು ಪ್ರೀತಿಸುವಂತೆ ಕೆಲವು ದಿನಗಳಿಂದ ಒತ್ತಾಯಿಸಲಾರಂಭಿಸಿದ್ದ. ಆತನ ಕಿರುಕುಳದಿಂದ ಬೇಸತ್ತ ಯುವತಿ, ‘ನಾನು ನಿನ್ನನ್ನು ಪ್ರೀತಿಸುವುದಿಲ್ಲ. ನಿತ್ಯವೂ ಹಿಂಬಾಲಿಸಬೇಡ’ ಎಂದು ಹೇಳಿದ್ದಳು.

ಅಷ್ಟಕ್ಕೆ ಕೋಪಗೊಂಡಿದ್ದ ಆರೋಪಿ, ಚೊಕ್ಕಸಂದ್ರದಲ್ಲಿ ಬುಧವಾರ ಮಧ್ಯಾಹ್ನ ಯುವತಿಯನ್ನು ಅಡ್ಡಗಟ್ಟಿ ಜಗಳ ತೆಗೆದಿದ್ದ. ಅದೇ ವೇಳೆ ಯುವತಿಯ ಹೊಟ್ಟೆಗೆ ಚಾಕುವಿನಿಂದ ಇರಿದು ಓಡಿಹೋಗಿದ್ದ.

‘ರಕ್ಷಣೆಗೆ ಬಂದಿದ್ದ ಸ್ಥಳೀಯರೇ ಯುವತಿಯನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು. ಯುವತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಪೊಲೀಸರು ಹೇಳಿದರು.

‘ಕೃತ್ಯದ ಬಳಿಕ ಆರೋಪಿ, ಸಂಬಂಧಿಕರ ಮನೆಗೆ ಹೋಗಿ ತಲೆಮರೆಸಿಕೊಂಡಿದ್ದ. ಆ ಮನೆಯಲ್ಲಿ ಆತನನ್ನು ಬಂಧಿಸಲಾಯಿತು’ ಎಂದು ತಿಳಿಸಿದರು. 

ಪ್ರತಿಕ್ರಿಯಿಸಿ (+)