ಗುರುವಾರ , ನವೆಂಬರ್ 21, 2019
20 °C
ಅಟ್ಟಿಕಾ ಗೋಲ್ಡ್ ಕಂಪನಿಯ ಕ್ಯಾಷಿಯರ್, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

ಹಲ್ಲೆ; ₹25 ಲಕ್ಷ ದೋಚಿ ಪರಾರಿ

Published:
Updated:

ಬೆಂಗಳೂರು: ಅಟ್ಟಿಕಾ ಗೋಲ್ಡ್ ಕಂಪನಿ ಕ್ಯಾಷಿಯರ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ₹25 ಲಕ್ಷ ದೋಚಿದ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಕ್ವೀನ್ಸ್ ರಸ್ತೆಯಲ್ಲಿರುವ ಅಟ್ಟಿಕಾ ಗೋಲ್ಡ್ ಕಂಪನಿ ಕ್ಯಾಷಿಯರ್ ಸಂತೋಷ್‌ ದೂರು ನೀಡಿದ್ದಾರೆ.

ಸಂತೋಷ್‌ ತಮ್ಮ ಶಾಖೆಯಲ್ಲಿ ಸಂಗ್ರಹವಾಗಿದ್ದ ₹25 ಲಕ್ಷವನ್ನು ವಿಜಯವಾಡದಲ್ಲಿರುವ ಕಂಪನಿಯ ಮುಖ್ಯ ಕಚೇರಿಗೆ ತೆಗೆದುಕೊಂಡು ಹೋಗುತ್ತಿದ್ದರು. ಜೊತೆಗೆ ಕಂಪನಿಯ ಭದ್ರತಾ ಸಿಬ್ಬಂದಿಯೂ ಇದ್ದರು. ಆಂಧ್ರಪ್ರದೇಶಕ್ಕೆ ತೆರಳುವ ಬಸ್‌ಗಾಗಿ ಹಳೇ ಮದ್ರಾಸ್ ರಸ್ತೆಯ ಟಿನ್‌ ಫ್ಯಾಕ್ಟರಿ ಬಳಿ ಕಾಯುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಐವರ ತಂಡ ಇಬ್ಬರ ಮೇಲೂ ಹಲ್ಲೆ ನಡೆಸಿ ಹಣ ಇದ್ದ ಬ್ಯಾಗ್ ಸಹಿತ ಪರಾರಿಯಾಗಿದೆ.

ತಕ್ಷಣ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂತೋಷ್‌ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಕೂಡಲೆ (ರಾತ್ರಿ 11 ಗಂಟೆ ಸುಮಾರಿಗೆ) ರಾಮಮೂರ್ತಿನಗರ ಠಾಣೆ ಪೊಲೀಸರು ಟಿನ್‌ ಫ್ಯಾಕ್ಟರಿಗೆ ಹೊಂದಿಕೊಂಡಿರುವ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ತಪಾಸಣೆ ನಡೆಸಿದ್ದರು. ಆದರೆ, ಆರೋಪಿಗಳು ಪತ್ತೆ ಆಗಿಲ್ಲ.

‘ಘಟನೆ ಸ್ಥಳದ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಸಂತೋಷ್ ಹಾಗೂ ಭದ್ರತಾ ಸಿಬ್ಬಂದಿಯನ್ನೂ ವಿಚಾರಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)