ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದೆ ಹಂಜ ಶಾಲೆ

ನಕ್ಸಲ್ ಪೀಡಿತ ಸರ್ಕಾರಿ ಶಾಲೆಗೆ ಶಿಕ್ಷಕರಿಲ್ಲದೇ ಪರದಾಟ
Last Updated 16 ಜೂನ್ 2018, 11:11 IST
ಅಕ್ಷರ ಗಾತ್ರ

ಸಿದ್ದಾಪುರ: ನಕ್ಸಲ್ ಪೀಡಿತ ಪ್ರದೇಶ ಮಡಾಮಕ್ಕಿ ಗ್ರಾಮ ಹಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಇಲ್ಲದೇ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಇನ್ನೂ ಇದ್ದ ಒಬ್ಬ ಕಾಯಂ ಶಿಕ್ಷಕಿ ಪ್ರಸೂತಿ ರಜೆಯಲ್ಲಿ ಇದ್ದಾರೆ.

ಮಡಾಮಕ್ಕಿ ಪೇಟೆಯಿಂದ ನಾಲ್ಕೂವರೆ ಕಿಲೋ ಮೀಟರ್‌ ಒಳ ಪ್ರದೇಶದಲ್ಲಿರುವ ಹಂಜ ಸರ್ಕಾರಿ ಶಾಲೆಗೆ ತೆರಳುವುದಕ್ಕೆ ಸರಿಯಾದ ರಸ್ತೆಯಿಲ್ಲ. ಪ್ರಸ್ತುತ ಇರುವ ರಸ್ತೆ ಮಳೆಗಾಲದಲ್ಲಿ ಹೊಂಡ ಗುಂಡಿಗಳಿಂದ ಕೂಡಿದೆ. ಸಂಚಾರ‌ ದುಸ್ತರ ಆಗಿದೆ. ನಕ್ಸಲ್ ಬಾಧಿತ ಪ್ರದೇಶ ಎಂದು ಗುರುತಿಸಲ್ಪಟ್ಟ ಹಂಜ ಪರಿಸರದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರ್ಯ ಮಾಡುತ್ತಿದೆ. ಹಂಜ, ಎಡಮಲೆ ಭಾಗದಲ್ಲಿ 40 ಕ್ಕೂ ಅಧಿಕ ಮನೆಗಳಿದ್ದು, ಅವರಿಗಿರುವ ಏಕೈಕ ಶಾಲೆ ಉಳಿಸಲು ಸ್ಥಳೀಯರು ಸಾಕಷ್ಟು ಶ್ರಮಿಸುತ್ತಿದ್ದಾರೆ.

ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆ ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಬೇಕು ಎನ್ನುವ ಸರ್ಕಾರಿ ಆದೇಶವಿದೆ. ಆದರೂ, ಸೌಕರ್ಯ ವಂಚಿತ, ನಕ್ಸಲ್ ಪೀಡಿತ ಪ್ರದೇಶದಲ್ಲಿರುವ ಏಕೈಕ ಶಾಲೆ ಎನ್ನುವ ನೆಲೆಯಲ್ಲಿ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ ಇಲಾಖೆ ಹಾಗೂ ಸ್ಥಳೀಯರು ಶಾಲೆ ಮುಚ್ಚದಂತೆ ನೋಡಿಕೊಂಡಿದ್ದಾರೆ. ಆದರೆ, ಸರ್ಕಾರಿ ಶಾಲೆಯಲ್ಲಿರುವ ಕಾಯಂ ಶಿಕ್ಷಕಿ ಪ್ರಸೂತಿ ರಜೆಯಲ್ಲಿ ಇರುವುದರಿಂದ ಶಿಕ್ಷಕರಿಲ್ಲದೆ ಶಾಲೆಯ ಸ್ಥಿತಿ ಕೇಳುವರೇ ಇಲ್ಲದಂತಾಗಿದೆ.

ಹಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1ರಿಂದ 5 ನೇ ತರಗತಿವರಿಗೆ ಇದೆ. 11 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಇದ್ದ ಶಿಕ್ಷಕಿ ರೆಜೆಯಲ್ಲಿ ಇರುವ ಕಾರಣಕ್ಕೆ ವಾರದಲ್ಲಿ ಎರಡು ದಿನ (ಶುಕ್ರವಾರ, ಶನಿವಾರ) ಅಲ್ಬಾಡಿ ಶಾಲೆಯ ಶಿಕ್ಷಕರೊಬ್ಬರನ್ನು ನಿಯೋಜನೆ ಮಾಡಲಾಗಿದೆ. ಉಳಿದ ದಿನಗಳಲ್ಲಿ ಶಾಲೆ ಮುಚ್ಚಬಾರದು ಎನ್ನುವ ನೆಲೆಯಲ್ಲಿ ಸರ್ಕಾರಿ ಆದೇಶವಿಲ್ಲದಿದ್ದರೂ ಸ್ಥಳೀಯರೆಲ್ಲ ಒಂದಾಗಿ ತಾತ್ಕಾಲಿಕವಾಗಿ ಶಿಕ್ಷಕಿ ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ. ಅವರಿಗೆ ಸ್ಥಳೀಯರು ವೇತನ ನೀಡಲು ನಿರ್ಧರಿಸಿರುವುದು ಶ್ಲಾಘನೀಯ.

ಹಂಜ ಶಾಲೆಗೆ ನೇಮಕಗೊಂಡ ಸರ್ಕಾರಿ ಶಿಕ್ಷಕಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮಹಿಳೆಯಾಗಿ ನಕ್ಸಲ್ ಬಾಧಿತ ಪ್ರದೇಶ ಸರ್ಕಾರಿ ಶಾಲೆಯಲ್ಲಿ ಎರಡು ವರ್ಷದಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಪ್ರದೇಶದಲ್ಲಿ ಉಳಿಯುವುದಕ್ಕೆ ಬಾಡಿಗೆ ಮನೆ ವ್ಯವಸ್ಥೆ ಇಲ್ಲದಿರುವುದರಿಂದ, ಮಗು ಸಣ್ಣದಾಗಿರುವುದರಿಂದ ಅವರು ಅನಿವಾರ್ಯವಾಗಿ ರಜೆ ವಿಸ್ತರಿಸುವ ಸಾಧ್ಯತೆಯಿದೆ. ಆದ್ದರಿಂದ ಅವರನ್ನು ಬೇರೆ ಶಾಲೆಗೆ ವರ್ಗಾಯಿಸಿ ಹಂಜ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಈ ಕುರಿತು ಇಲಾಖೆ ಸೂಕ್ತ ಕ್ರಮಕೈಗೊಂಡು ನಕ್ಸಲ್ ಬಾಧಿತ ಪ್ರದೇಶದ ಶಾಲೆಯ ಶಿಕ್ಷಕರ ಕೊರತೆ ನೀಗಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

ನಕ್ಸಲ್ ಪೀಡಿತ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕಿ ದೀರ್ಘಕಾಲದ ರಜೆಯಲ್ಲಿ ಇರುವುದರಿಂದ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಕಾಯಂ ಶಿಕ್ಷಕರನ್ನು ನೇಮಕ ಮಾಡಿ
– ದಯಾನಂದ ಪೂಜಾರಿ ಹಂಜ, ಗ್ರಾಮ ಪಂಚಾಯಿತಿ ಸದಸ್ಯ

ಸಂದೇಶ್ ಶೆಟ್ಟಿ ಆರ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT