ಆಟೊ ಜಪ್ತಿ ಮಾಫಿಯಾ; ಇಬ್ಬರ ಸೆರೆ

ಶನಿವಾರ, ಏಪ್ರಿಲ್ 20, 2019
31 °C

ಆಟೊ ಜಪ್ತಿ ಮಾಫಿಯಾ; ಇಬ್ಬರ ಸೆರೆ

Published:
Updated:

ಬೆಂಗಳೂರು: ಸಾಲ ವಸೂಲಿ ನೆಪದಲ್ಲಿ ಆಟೊಗಳನ್ನು ಜಪ್ತಿ ಮಾಡಿ, ಬಳಿಕ ಅವುಗಳನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟು ಹಣ ಸಂಪಾದಿಸುತ್ತಿದ್ದ ‘ಎಸ್‌.ಆರ್.ಕನ್ಸಲ್ಟೆನ್ಸಿ’ ಏಜೆನ್ಸಿಯ ನೌಕರರಿಬ್ಬರು ಶ್ರೀರಾಂಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬನಶಂಕರಿಯ ಡಿ.ರಾಜು ಹಾಗೂ ಬಸವೇಶ್ವರನಗರದ ಹೇಮಂತ್ ಎಂಬುವರನ್ನು ಬಂಧಿಸಿ, ₹ 13 ಲಕ್ಷ ಮೌಲ್ಯದ 12 ಆಟೊಗಳನ್ನು ಜಪ್ತಿ ಮಾಡಲಾಗಿದೆ. ಏಜೆನ್ಸಿ ಮಾಲೀಕ ರಮೇಶ್ ಅಲಿಯಾಸ್ ರಾಮು ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮಾಗಡಿ ರಸ್ತೆಯಲ್ಲಿ ಏಜೆನ್ಸಿ ಪ್ರಾರಂಭಿಸಿದ್ದ ರಾಮು, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಕಂತುಗಳನ್ನು (ಇಎಂಐ) ಕಟ್ಟದ ಚಾಲಕರ ಆಟೊಗಳನ್ನು ಜಪ್ತಿ ಮಾಡುವ ಗುತ್ತಿಗೆ ಪಡೆದಿದ್ದ. ತಮ್ಮ ಬಳಿ ಸಾಲ ಪಡೆದಿರುವ ಚಾಲಕರ ವಿವರಗಳನ್ನು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಿದ್ದ ರಾಮು, ಇಎಂಐ ಕಟ್ಟದವರ ಆಟೊಗಳನ್ನು ರಾತ್ರೋರಾತ್ರಿ ಜಪ್ತಿ ಮಾಡಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆ ವಾಹನಗಳನ್ನು ಕೆಲ ದಿನಗಳವರೆಗೆ ತನ್ನ ಸುಪರ್ದಿಯಲ್ಲೇ ಇಟ್ಟುಕೊಳ್ಳುತ್ತಿದ್ದ ಆತ, ಚಾಲಕರು ಸಂಪರ್ಕಿಸದೆ ಹೋದರೆ ಅವುಗಳನ್ನು ಬೇರೆಯವರಿಗೆ ಬಾಡಿಗೆ ಕೊಡುತ್ತಿದ್ದ. ಚಾಲಕರು ಬಂದರೆ, ಅವರ ಆಟೊಗಳನ್ನು ಮಾತ್ರ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಯವರ ವಶಕ್ಕೆ ಒಪ್ಪಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2018ರ ಡಿ.18ರ ರಾತ್ರಿ ರಾಮಚಂದ್ರಾ‍ಪುರ ರಸ್ತೆ ನಿವಾಸಿ ಅಫ್ಜಲ್ ಖಾನ್ ಎಂಬುವರ ಆಟೊವನ್ನು ಅವರ ಗಮನಕ್ಕೇ ಬಾರದೆ ಜಪ್ತಿ ಮಾಡಿದ್ದ ಆರೋಪಿಗಳು, ಅದನ್ನು ಬಾಡಿಗೆ ಬಿಟ್ಟಿದ್ದರು. ತಮ್ಮ ಆಟೊ ಕಳವಾಗಿರುವ ಬಗ್ಗೆ ಅಫ್ಜಲ್ ಶ್ರೀರಾಂಪುರ ಠಾಣೆಗೆ ದೂರು ಕೊಟ್ಟಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು, ಏಜೆನ್ಸಿಯ ಇಬ್ಬರು ನೌಕರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಬಹಿರಂಗವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !