‘ಅನಂತ’ ಅನುಪಸ್ಥಿತಿಯ ಲಾಭಕ್ಕೆ ‘ಕೈ’?

ಗುರುವಾರ , ಏಪ್ರಿಲ್ 18, 2019
30 °C
20 ವರ್ಷಗಳ ಬಳಿಕ ‘ದಕ್ಷಿಣ’ಕ್ಕೆ ಬಿ.ಕೆ. ಹರಿಪ್ರಸಾದ್‌

‘ಅನಂತ’ ಅನುಪಸ್ಥಿತಿಯ ಲಾಭಕ್ಕೆ ‘ಕೈ’?

Published:
Updated:
Prajavani

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ‘ಸೂಕ್ತ’ ಅಭ್ಯರ್ಥಿಗಾಗಿ ತಲಾಶೆಯಲ್ಲಿದ್ದ ಕಾಂಗ್ರೆಸ್‌, ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರಿಗೆ ಕೊನೆಕ್ಷಣದಲ್ಲಿ ಟಿಕೆಟ್‌ ನೀಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ.

ಬೆಂಗಳೂರು ಕೇಂದ್ರ ಅಥವಾ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಹರಿಪ್ರಸಾದ್‌ ಬಯಸಿದ್ದರು. ಆದರೆ, ಪಕ್ಷ ಅವರನ್ನು 20 ವರ್ಷಗಳ ಬಳಿಕ ಮತ್ತೆ ‘ದಕ್ಷಿಣ’ ಕ್ಷೇತ್ರದಿಂದ ಕಣಕ್ಕೆ ಇಳಿಸಿ, ಅದೃಷ್ಟ ಪರೀಕ್ಷೆಗೆ ಒಡ್ಡಿದೆ.

ಸುಶಿಕ್ಷಿತ ಮತದಾರರು ಹೆಚ್ಚಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಈ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದ ಅನಂತಕುಮಾರ್ ಅನುಪಸ್ಥಿತಿ ಕಮಲ ಪಕ್ಷವನ್ನು ಕಾಡುತ್ತಿದೆ. ಅದರ ಲಾಭ ಪಡೆಯುವ ಕಾರ್ಯತಂತ್ರದ ಭಾಗವಾಗಿ ಹರಿಪ್ರಸಾದ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ ಎಂದೇ ವಿಶ್ಲೇಷಿಸಲಾಗಿದೆ.

1996ರಲ್ಲಿ ಬಿಜೆಪಿಯಿಂದ ಇಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಅನಂತಕುಮಾರ್ ನಿರಂತರ ಗೆಲ್ಲುವ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದ ಮೇಲೆ ಬಿಗಿಹಿಡಿತ ಹೊಂದಿದ್ದರು. 1999ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಅನಂತಕುಮಾರ್‌ ವಿರುದ್ಧ ಅವರು 65 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.

ಕಳೆದ ನವೆಂಬರ್‌ನಲ್ಲಿ ಅನಂತಕುಮಾರ್‌ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ ಎನ್ನುವ ಪ್ರಶ್ನೆ ಮೂಡಿತ್ತು. ಅವರ ಪತ್ನಿ ತೇಜಸ್ವಿನಿ ಅವರಿಗೆ ಬಿಜೆಪಿ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಆದರೆ, ಅಧಿಕೃತವಾಗಿ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ.

ತನ್ನ ಪಾಲಿಗೆ ಬಂದಿರುವ 20 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಶನಿವಾರ ರಾತ್ರಿ ಕಾಂಗ್ರೆಸ್‌ ಬಿಡುಗಡೆ ಮಾಡಿತ್ತು. ಆದರೆ, ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ಕ್ಷೇತ್ರಗಳಿಗೆ ಹೆಸರನ್ನು ಘೋಷಿಸಿರಲಿಲ್ಲ. ಬೆಂಗಳೂರು ದಕ್ಷಿಣದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿದ್ದಾರೆ ಎನ್ನುವ ವದಂತಿ ಹಬ್ಬಿರುವ ಕಾರಣ ಕಾದುನೋಡುವ ತಂತ್ರಕ್ಕೆ ಕಾಂಗ್ರೆಸ್ ಮೊರೆ ಹೋಗಿತ್ತು. ಆದರೆ, ಭಾನುವಾರ ಸಂಜೆ ಹರಿಪ್ರಸಾದ್‌ ಹೆಸರಿಗೆ ಹಸಿರುನಿಶಾನೆ ತೋರಿಸಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !