ಹೆಸರು ದುರ್ಬಳಕೆ: ಠಾಣೆ ಮೆಟ್ಟಿಲೇರಿದ ಶಾಸಕ ಸಂಗಮೇಶ್ವರ್

ಭಾನುವಾರ, ಮಾರ್ಚ್ 24, 2019
33 °C

ಹೆಸರು ದುರ್ಬಳಕೆ: ಠಾಣೆ ಮೆಟ್ಟಿಲೇರಿದ ಶಾಸಕ ಸಂಗಮೇಶ್ವರ್

Published:
Updated:
Prajavani

ಬೆಂಗಳೂರು: ‘ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ನನ್ನ ಹೆಸರಿನಲ್ಲಿ ಕರೆ ಮಾಡುತ್ತಿರುವ ಅಪರಿಚಿತ, ತನ್ನ ಕೆಲಸ ಮಾಡಿಕೊಡುವಂತೆ ಬೇಡಿಕೆ ಇಡುತ್ತಿದ್ದಾನೆ. ಆ ಮೂಲಕ ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದಾನೆ’ ಎಂದು ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ.

‘ಸಂಗಮೇಶ್ವರ್ ಅವರ ದೂರು ಆಧರಿಸಿ ಅಪರಿಚಿತ ವ್ಯಕ್ತಿ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆತ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಮಾ. 5ರಂದು ಸಂಜೆ 6.15ರ ಸುಮಾರಿಗೆ ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಮ್ ಅವರಿಗೆ ಕರೆ ಮಾಡಿದ್ದ ಅಪರಿಚಿತ, ‘ನಾನು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಮಾತನಾಡುತ್ತಿರುವುದು. ನನ್ನದೊಂದು ಕೆಲಸವಿದ್ದು, ಅದನ್ನು ಬೇಗನೇ ಮಾಡಿಕೊಡಿ’ ಎಂದು ಬೇಡಿಕೆ ಇಟ್ಟಿದ್ದ’ ಎಂದು ತಿಳಿಸಿದರು.

‘ಆ ಕರೆ ಬಗ್ಗೆ ತಿಳಿಯುತ್ತಿದ್ದಂತೆ ಸಂಗಮೇಶ್ವರ್ ಅವರಿಗೆ ಆಶ್ಚರ್ಯವಾಗಿತ್ತು. ಹೆಚ್ಚಿನ ಮಾಹಿತಿ ಕಲೆಹಾಕಿದಾಗ ಯಾರೋ ಅಪರಿಚಿತ ವ್ಯಕ್ತಿ, ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡಿದ್ದು ಗೊತ್ತಾಯಿತು. ನಂತರವೇ ಅವರು ಆರೋಪಿಯ ಮೊಬೈಲ್ ನಂಬರ್‌ ಸಹಿತ ಠಾಣೆಗೆ ದೂರು ನೀಡಿದ್ದಾರೆ’ ಎಂದು ತಿಳಿಸಿದರು. 

ಹಲವರಿಗೆ ಕರೆ: ‘ನಾನು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್’ ಎಂದು ಹೇಳಿಕೊಂಡು ಹಲವು ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾನೆ. ಆ ಬಗ್ಗೆಯೂ ಸಂಗಮೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಯ ಕೃತ್ಯದ ಬಗ್ಗೆ ಒಬ್ಬೊಬ್ಬರೇ ಸಂಗಮೇಶ್ ಅವರಿಗೆ ತಿಳಿಸುತ್ತಿದ್ದಾರೆ. ಪ್ರತಿಯೊಬ್ಬರಿಂದಲೂ ಹೇಳಿಕೆ ಪಡೆಯಲಾಗುತ್ತಿದೆ’ ಎಂದು ಅವರು ತಿಳಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !