ಕುತ್ತಿಗೆ ಬಿಗಿದು ಮಾಂಗಲ್ಯ ಕೀಳಲೆತ್ನಿಸಿದ!

7

ಕುತ್ತಿಗೆ ಬಿಗಿದು ಮಾಂಗಲ್ಯ ಕೀಳಲೆತ್ನಿಸಿದ!

Published:
Updated:

ಬೆಂಗಳೂರು: ಟವೆಲ್‌ನಿಂದ ಮಹಿಳೆಯ ಕುತ್ತಿಗೆ ಬಿಗಿದು ಚಿನ್ನದ ಸರ ದೋಚಲೆತ್ನಿಸಿದ ಮೊಘಲಪ್ಪ ಎನ್.ಮಡಿವಾಳ (30) ಎಂಬಾತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ, ನಂತರ ಆತನನ್ನು ಬನಶಂಕರಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕಲಬುರ್ಗಿಯ ಮೊಘಲಪ್ಪ, ಒಂದೂವರೆ ವರ್ಷದಿಂದ ಕುಮಾರಸ್ವಾಮಿ ಲೇಔಟ್‌ನ ಬೇಂದ್ರೆನಗರದಲ್ಲಿ ನೆಲೆಸಿದ್ದಾನೆ. ಮನೆ ಹತ್ತಿರವೇ ಇಸ್ತ್ರೀ ಅಂಗಡಿ ಇಟ್ಟುಕೊಂಡಿದ್ದ ಈತ, ಬಾಡಿಗೆ ಮನೆ ಹುಡುಕುವ ಸೋಗಿನಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ತ್ಯಾಗರಾಜನಗರದ ಬೈರಪ್ಪನಗರಕ್ಕೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮನೆ ಮುಂದೆ ನಿಂತಿದ್ದ ಸೀನಾ ಎಂಬ ಮಹಿಳೆಯ ಬಳಿ ತೆರಳಿದ ಮೊಘಲಪ್ಪ, ‘ನಾನು ಹಣ್ಣಿನ ವ್ಯಾಪಾರಿ. ಬಾಡಿಗೆ ಮನೆ ಬೇಕಿತ್ತು’ ಎಂದಿದ್ದ. ತಮ್ಮ ಮನೆಯೇ ಖಾಲಿ ಇದ್ದುದರಿಂದ, ಅದನ್ನು ತೋರಿಸುವುದಾಗಿ ಅವರು ಆತನನ್ನು ಮೊದಲ ಮಹಡಿಗೆ ಕರೆದುಕೊಂಡು ಹೋಗಿದ್ದರು.

ಸೀನಾ ಬಾಗಿಲು ತೆಗೆಯುತ್ತಿದ್ದಂತೆಯೇ ಅವರನ್ನು ತಳ್ಳಿಕೊಂಡು ಒಳನುಗ್ಗಿದ್ದ ಆರೋಪಿ, ಕುತ್ತಿಗೆಗೆ ಟವೆಲ್‌ ಸುತ್ತಿ ಮಾಂಗಲ್ಯ ಸರ ಕೀಳಲು ಯತ್ನಿಸಿದ್ದಾನೆ. ತಪ್ಪಿಸಿಕೊಂಡು ಹೊರಗೆ ಓಡಿಬಂದ ಸೀನಾ, ನೆರವಿಗಾಗಿ ಕೂಗಿಕೊಂಡಿದ್ದಾರೆ. ಚೀರಾಟ ಕೇಳಿ ಸ್ಥಳಕ್ಕೆ ಬಂದ ನೆರೆಹೊರೆಯವರು, ಮೊಘಲಪ್ಪನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಹೊಯ್ಸಳ ಪೊಲೀಸರು ಬಂದು ಆತನನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಮನೆ ಬಾಡಿಗೆ ಕಟ್ಟಿರಲಿಲ್ಲ

‘ಸ್ನೇಹಿತರ ಬಳಿ ₹ 75 ಸಾವಿರ ಸಾಲ ಪಡೆದಿದ್ದೆ. ಹಣ ಮರಳಿಸುವಂತೆ ಅವರು ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದರು. ಈ ತಿಂಗಳು ಮನೆ ಬಾಡಿಗೆಯನ್ನೂ ಕಟ್ಟಲು ಆಗಿರಲಿಲ್ಲ. ಹೀಗಾಗಿ, ದಿಕ್ಕು ತೋಚದಂತಾಗಿತ್ತು. ಒಂದೇ ಒಂದು ಬಾರಿ ಚಿನ್ನದ ಸರ ದೋಚಿಬಿಡೋಣ ಎಂದು ನಿರ್ಧರಿಸಿ ಇಲ್ಲಿಗೆ ಬಂದಿದ್ದೆ’ ಎಂದು ಮೊಘಲಪ್ಪ ಹೇಳಿಕೆ ಕೊಟ್ಟಿದ್ದಾನೆ. ಆತನ ಪೂರ್ವಾಪರ ಪರಿಶೀಲಿಸಲಾಗಿದ್ದು, ಹಿಂದೆ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !