ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್: ಮಾಹಿತಿ ಕೇಳಿದ ಹೈಕೋರ್ಟ್‌

Last Updated 12 ಸೆಪ್ಟೆಂಬರ್ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಸಕ ಡಿ.ಕೆ. ಶಿವಕುಮಾರ್ ವಿಚಾರಣೆ ಖಂಡಿಸಿ ಇದೇ 11ರಂದು ಬೆಂಗಳೂರು ನಗರದಲ್ಲಿ ನಡೆದ ಪ್ರತಿಭಟನೆ ಮತ್ತು ರಾಜ್ಯದ ವಿವಿಧೆಡೆ ನಡೆಸಲಾದ ಬಂದ್‌ಗಳಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಉಂಟಾದ ನಷ್ಟದ ಮಾಹಿತಿ ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.

ಮಹದಾಯಿ ನ್ಯಾಯಮಂಡಳಿ ತೀರ್ಪು ಖಂಡಿಸಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ 2018ರ ಫೆ. 4ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರು. ಈ ಬಂದ್ ಕಾನೂನು ಬಾಹಿರ ಎಂದು ಆಕ್ಷೇಪಿಸಿ ರಾಜಾಜಿನಗರದ, ‘ಶ್ರದ್ಧಾ ಪೋಷಕರ ಸಂಘ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಇತ್ತೀಚಿನ ದಿನಗಳಲ್ಲಿ ನಡೆದ ಬಂದ್‌ ವಿವರಗಳ ಪ್ರಾಥಮಿಕ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಬಂದ್ ಹಾಗೂ ಸಾರ್ವಜನಿಕರ ಸಭೆಗಳನ್ನು ನಿಯಂತ್ರಣ ಮಾಡುವುದಕ್ಕಾಗಿ ‘ಬೆಂಗಳೂರು ನಗರ ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳ (ಅನುಮತಿ ಹಾಗೂ ನಿಯಂತ್ರಣ) ಆದೇಶ -2008’ ಅನ್ನು ರೂಪಿಸಲಾಗಿದೆ. ಬೆಂಗಳೂರಿನಲ್ಲಿ ಇದೇ 11ರಂದು ನಡೆದ ಪ್ರತಿಭಟನೆ ಶಾಂತಿಯುತವಾಗಿತ್ತು’ ಎಂದು ತಿಳಿಸಿದರು.

ಆದನ್ನು ಆಕ್ಷೇಪಿಸಿದ ಅಮೃತೇಶ್, ‘2008ರ ಆದೇಶ ಕೇವಲ ಬೆಂಗಳೂರು ಮಹಾನಗರಕ್ಕೆ ಸೀಮಿತವಾಗಿದೆ. ಶಿವಕುಮಾರ್ ಅವರನ್ನು ಇ.ಡಿ. ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಮಂಡ್ಯ, ರಾಮನಗರ ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಬಂದ್ ಹಾಗೂ ಪ್ರತಿಭಟನೆ ನಡೆದಿವೆ. ಈ ವೇಳೆ ಮೂರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಜಖಂಗೊಳಿಸಲಾಗಿದ್ದು, ಬೊಕ್ಕಸಕ್ಕೆ ₹ 1.5 ಕೋಟಿ ನಷ್ಟವಾಗಿದೆ’ ಎಂದು ದೂರಿದರು.

‘ಈ ಸಂಬಂಧ ವಿವಿಧೆಡೆ ಏಳು ಎಫ್‌ಐಆರ್‌ ದಾಖಲಿಸಲಾಗಿದ್ದರೂ, ಬಂದ್‌ಗೆ ಕರೆ ನೀಡಿದ ರಾಜಕೀಯ ಪಕ್ಷದ ನಾಯಕರನ್ನು ಕೈಬಿಡಲಾಗಿದೆ. ಈ ವರದಿ ಕಣ್ಣೊರೆಸುವ ತಂತ್ರ’ ಎಂದು ದೂರಿದರು.

‘ಸುಪ್ರೀಂ’ ನಿರ್ದೇಶನದ ಪ್ರಕಾರ ನಷ್ಟವನ್ನು ಸಂಬಂಧಪಟ್ಟವರಿಂದ ವಸೂಲು ಮಾಡಲು ನಿವೃತ್ತ ನ್ಯಾಯಾಧೀಶರನ್ನು ಕ್ಲೇಮು ಕಮಿಷನರ್ ಆಗಿ ನೇಮಕ ಮಾಡುವ ಬಗ್ಗೆ ನ್ಯಾಯಪೀಠ ಇದೇ ವೇಳೆ ಇಂಗಿತ ವ್ಯಕ್ತಪಡಿಸಿದೆ. ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT