ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಮಹಾನಗರದಲ್ಲಿ ಕೊನೆಗೊಳ್ಳುವುದೇ ‘ಬಿ–ಖಾತಾ’ ಕ್ಯಾತೆ?

Last Updated 4 ಜೂನ್ 2019, 8:40 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ನಾಗಸಂದ್ರದಲ್ಲಿ ಕೆಲವು ವರ್ಷಗಳ ಹಿಂದೆ 20x30 ಅಡಿಯ ಜಾಗ ಖರೀದಿಸಿದ್ದೆ. ಮನೆಯ ಕಟ್ಟಡ ನಕ್ಷೆಗೆ ಬಿಬಿಎಂಪಿ ಅಧಿಕಾರಿಗಳೇ ಅನುಮೋದನೆ ನೀಡಿದ್ದರು. ಎ–ಖಾತಾ ಹೊಂದಿರುವವರು ಕಟ್ಟುವಷ್ಟೇ ಆಸ್ತಿ ತೆರಿಗೆಯನ್ನು ನಾನು ಕಟ್ಟುತ್ತೇನೆ. ನನ್ನದು ಬಿ– ಖಾತಾ ಎಂಬ ಕಾರಣಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳಾವೂ ಮನೆ ಕಟ್ಟಲು ಸಾಲ ನೀಡಲಿಲ್ಲ. ಇದು ಸರಿಯೇ’

ನಾಗಸಂದ್ರ ನಿವಾಸಿ ದಶರಥ್‌ ಅವರು ಎ–ಖಾತಾ ಮತ್ತು ಬಿ–ಖಾತಾ ತಾರತಮ್ಯವನ್ನು ಪ್ರಶ್ನೆ ಮಾಡುವುದು ಹೀಗೆ. ಇದು ಅವರೊಬ್ಬರ ಸಮಸ್ಯೆ ಅಲ್ಲ. ನಗರದಲ್ಲಿ ಬಿ–ಖಾತಾ ಹೊಂದಿರುವ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರನ್ನೂ ಇದೇ ಗೊಂದಲ ಕಾಡುತ್ತಿದೆ.

ಏನಿದು ಬಿ–ಖಾತಾ:

1976ರ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ ಪ್ರಕಾರ ಬಿಬಿಎಂಪಿಯು ತನ್ನ ವ್ಯಾಪ್ತಿಯ ಕಟ್ಟಡಗಳಿಗೆ ಹಾಗೂ ಖಾಲಿ ಜಾಗಗಳಿಗೆ ಅಥವಾ ಅವೆರಡಕ್ಕೂ ಆಸ್ತಿ ತೆರಿಗೆ ವಿಧಿಸಬಹುದು. ಈ ಕಾಯ್ದೆಯ ಸೆಕ್ಷನ್‌ 112 ಬಿ (4) ಪ್ರಕಾರ ಪಾಲಿಕೆ ಆಯುಕ್ತರು ಅಥವಾ ಅವರಿಂದ ನಿಯೋಜಿತವಾಗಿರುವ ಅಧಿಕಾರಿ ತೆರಿಗೆ ವಿವರಗಳಿರುವ ಪ್ರಮಾಣಪತ್ರವನ್ನು ಆಸ್ತಿ ಮಾಲೀಕರಿಗೆ ನೀಡಬಹುದು.

ಖಾತಾ ದಾಖಲೆಗಳ ನಿರ್ವಹಣೆ ಸಲುವಾಗಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು 2009ರಲ್ಲಿ ಹೊಸ ನಿಯಮಗಳನ್ನು ರಚಿಸಲಾಯಿತು. ಕಾಯ್ದೆಯ ಸೆಕ್ಷನ್‌ 108 ಎ ಪ್ರಕಾರ ಯಾವುದೇ ಉಲ್ಲಂಘನೆಗಳಿಲ್ಲದ ಆಸ್ತಿಯ ಮಾಲೀಕರಿಂದ ಅಥವಾ ಅದರ ಅನುಭವದಾರರಿಂದ ಸಂಗ್ರಹಿಸುವ ಆಸ್ತಿ ತೆರಿಗೆ ವಿವರಗಳನ್ನು ನಮೂನೆ ‘ಎ’ನಲ್ಲಿ ನಿರ್ವಹಿಸಲಾಗುತ್ತದೆ. ಅದನ್ನು ಆಡುಭಾಷೆಯಲ್ಲಿ ‘ಎ–ಖಾತಾ’ ಎನ್ನುತ್ತಾರೆ.

ಕಟ್ಟಡ ಬೈಲಾ (ಉಪವಿಧಿ) ಉಲ್ಲಂಘಿಸಿ ನಿರ್ಮಿಸಿದ ಕಟ್ಟಡ, ಅನಧಿಕೃತ ಬಡಾವಣೆಯಲ್ಲಿ ನಿರ್ಮಿಸಿರುವ ಕಟ್ಟಡ, ಕಂದಾಯ ನಿವೇಶನದ ಕಟ್ಟಡ, ನಿರ್ಮಾಣ ಪೂರ್ಣಗೊಂಡ ಪ್ರಮಾಣಪತ್ರ (ಸಿ.ಸಿ) ಮತ್ತು ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆಯದ ಕಟ್ಟಡಗಳಿಂದಲೂ (ಸ್ಥಳೀಯ ಸಂಸ್ಥೆಗಳು ಅಥವಾ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳು ಹೊರತಾಗಿ) ತೆರಿಗೆ ವಸೂಲಿ ಮಾಡಲು ಈ ನಿಯಮಗಳು ಅವಕಾಶ ಕಲ್ಪಿಸುತ್ತವೆ. ಆದರೆ, ಇಂತಹ ಆಸ್ತಿಗಳಿಂದ ತೆರಿಗೆ ಸಂಗ್ರಹಿಸುವುದಕ್ಕೆ ಪ್ರತ್ಯೇಕ ನೋಂದಣಿಯನ್ನು ನಿರ್ವಹಿಸಲಾಗುತ್ತದೆ. ಅದನ್ನು ನಮೂನೆ ‘ಬಿ’ ಅಥವಾ ‘ಬಿ–ಖಾತಾ’ ಎನ್ನಲಾಗುತ್ತದೆ.

ಬಿಬಿಎಂಪಿಗೆ ಹೊಸತಾಗಿ ಸೇರ್ಪಡೆಯಾದ ನಗರಸಭೆಗಳು, ಪಂಚಾಯಿತಿಗಳನ್ನು ಒಳಗೊಂಡ ಪ್ರದೇಶಗಳಲ್ಲಿದ್ದ ಆಸ್ತಿಗಳ ತೆರಿಗೆ ವಿವರಗಳನ್ನು ನಮೂನೆ ‘ಬಿ’ಯಲ್ಲಿ ನಿರ್ವಹಿಸಲಾಗುತ್ತಿದೆ. ಈ ಹಿಂದೆ ಸ್ಥಳೀಯ ನಗರಾಡಳಿತ ಸಂಸ್ಥೆಗಳಲ್ಲಿ ನಮೂನೆ 19ರಲ್ಲಿ ಹಾಗೂ ಪಂಚಾಯಿತಿಗಳಲ್ಲಿ ನಮೂನೆ 9ರಲ್ಲಿ ನಿರ್ವಹಿಸಲಾಗುತ್ತಿದ್ದ ಆಸ್ತಿಗಳನ್ನು ‘ಎ–ಖಾತಾ’ ಎಂದು
ಪರಿಗಣಿಸಲಾಗುತ್ತಿದೆ.

ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಸ್ವತ್ತುಗಳು ಹಾಗೂ ಅನಧಿಕೃತ ಬಡಾವಣೆಗಳಲ್ಲಿರುವ ನಿವೇಶನಗಳು, ಭೂಪರಿವರ್ತನೆ ಆದೇಶದಲ್ಲಿ ವಿಸ್ತೀರ್ಣ ವಿಭಜನೆಯಾಗಿರುವ ಸ್ವತ್ತುಗಳು, ಸಿ.ಸಿ ಮತ್ತು ಒ.ಸಿ ಪಡೆಯದ ಕಟ್ಟಡಗಳು ಮತ್ತು ವಸತಿ ಸಮುಚ್ಚಯಗಳ ಮನೆಗಳಿಗೆ ಬಿ–ಖಾತಾ ನೀಡಲಾಗುತ್ತಿದೆ. ನಗರದ ಹೊರವಲಯದಲ್ಲೇ ಇಂತಹ ಆಸ್ತಿಗಳ ಸಂಖ್ಯೆ ಹೆಚ್ಚು ಇದೆ. ಅನೇಕ ಖಾಲಿ ನಿವೇಶನಗಳೂ ಇವುಗಳಲ್ಲಿ ಸೇರಿದ್ದು, ಅದರ ಮಾಲೀಕರ ವಿವರ ಸಂಗ್ರಹಿಸುವುದೂ ಪಾಲಿಕೆಗೆ ಸವಾಲಾಗಿ ಪರಿಣಮಿಸಿದೆ.

ಅನಧಿಕೃತ ಬಡಾವಣೆಗಳನ್ನು ನಿರ್ಮಿಸುವವರು ಅಲ್ಲಿನ ನಿವೇಶನಗಳನ್ನು ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿರುತ್ತಾರೆ. ಅಂತಹ ನಿವೇಶನ ಖರೀದಿಸುವ ಕೆಲವರು ಅಲ್ಲಿ ಕಟ್ಟಡವನ್ನೂ ನಿರ್ಮಿಸುತ್ತಾರೆ. ಅಲ್ಲಿಗೆ ರಸ್ತೆ, ಚರಂಡಿ ಬೀದಿದೀಪ ಮತ್ತಿತರ ಮೂಲಸೌಕರ್ಯಗಳನ್ನು ಪಾಲಿಕೆಯಿಂದ ಒದಗಿಸಲಾಗಿರುತ್ತದೆ. ಹಾಗಾಗಿ ಅವರಿಂದ ತೆರಿಗೆ ವಸೂಲಿ ಮಾಡುವುದು ತಪ್ಪಲ್ಲ ಎನ್ನುವುದು ಬಿಬಿಎಂಪಿ ವಾದ.

‘ಬಿ– ಖಾತಾ’ ಹೊಂದಿರುವ ಆಸ್ತಿ ಮಾಲೀಕರಿಂದ ತೆರಿಗೆ ಸಂಗ್ರಹಿಸಲಾಗುತ್ತಿದೆ ಎಂಬ ಕಾರಣಕ್ಕೆ ಈ ಸ್ವತ್ತುಗಳ ನಿಯಮ ಉಲ್ಲಂಘನೆಗಳು, ಅವುಗಳ ಮಾಲೀಕತ್ವ ಹಕ್ಕು, ಅಥವಾ ಕಾನೂನು ಸಂಬಂಧಿ ಅಂಶಗಳು ಸಕ್ರಮಗೊಳ್ಳುವುದಿಲ್ಲ. ಈ ಕಟ್ಟಡಗಳ ಉಲ್ಲಂಘನೆ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಅವಕಾಶ ಮುಕ್ತವಾಗಿರುತ್ತದೆ.

2013ರಲ್ಲಿ ಸಲ್ಲಿಕೆಯಾದ ರಿಟ್‌ ಅರ್ಜಿ (ಸಂಖ್ಯೆ 6734– 6751/ 2013) ವಿಲೇವಾರಿ ವೇಳೆ ಹೈಕೋರ್ಟ್‌ ‘ಬಿ –ಖಾತಾ’ದ ದಾಖಲಾತಿಗಳು ಕೆಎಂಸಿ ಕಾಯ್ದೆಯ ಕಲಂ ಎ ಅಡಿ ರೂಪಿಸಿದ ನಿಯಮ 11ಕ್ಕೆ ವ್ಯತಿರಿಕ್ತವಾಗಿವೆ ಹಾಗೂ ಅವು ತರ್ಕಬದ್ಧವಾಗಿಲ್ಲ ಎಂದು ಹೇಳಿತ್ತು. ಈ ಗೊಂದಲ ನಿವಾರಿಸುವಂತೆಯೂ ಆದೇಶ ಮಾಡಿತ್ತು. ಆ ಬಳಿಕ, ‘ಬಿ–ಖಾತಾ’ ಹೊಂದಿರುವ ಆಸ್ತಿಗಳಿಂದ ಸುಧಾರಣಾ ಶುಲ್ಕ ವಸೂಲಿ ಮಾಡಿ, ಅವುಗಳನ್ನು ‘ಎ– ಖಾತಾ’ವನ್ನಾಗಿ ಪರಿವರ್ತಿಸುವ ಬಗ್ಗೆ ಚರ್ಚೆ ಆರಂಭವಾಗಿತ್ತು. ಪಾಲಿಕೆ ಕೌನ್ಸಿಲ್‌ ಸಭೆಗಳಲ್ಲೂ ಈ ವಿಚಾರ ಅನೇಕ ಬಾರಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಅದನ್ನು ಕಾರ್ಯರೂಪಕ್ಕಿಳಿಸುವ ಗಂಭೀರ ಪ್ರಯತ್ನ ನಡೆದಿರಲಿಲ್ಲ.

2019–20ನೇ ಸಾಲಿನ ಬಿಬಿಎಂಪಿ ಬಜೆಟ್‌ ಕುರಿತು ಕೌನ್ಸಿಲ್‌ನಲ್ಲಿ ಚರ್ಚೆ ನಡೆದ ಬಳಿಕ ಬಜೆಟ್‌ ಗಾತ್ರವನ್ನು ಹೆಚ್ಚಿಸಲಾಯಿತು. ಆಗ ಪಾಲಿಕೆ ವರಮಾನ ಗಳಿಕೆಗೆ ಹೊಸ ದಾರಿಯಾಗಿ ಕಂಡಿದ್ದು ಬಿ–ಖಾತಾ ಹೊಂದಿರುವ ಆಸ್ತಿಗಳಿಗೆ ಸುಧಾರಣಾ ಶುಲ್ಕ ವಿಧಿಸಿ ಅವುಗಳ ಖಾತಾ ನೋಂದಣಿ ಮಾಡಿಸುವುದು. ಇದರಿಂದ ಸುಮಾರು ₹ 4 ಸಾವಿರ ಕೋಟಿ ಆದಾಯ ಗಳಿಸುವ ಉದ್ದೇಶ ಪಾಲಿಕೆಯದು.

ಕೆಎಂಸಿ ಕಾಯ್ದೆ ‍ಪ್ರಕಾರ ನಮೂನೆ ಎ (ಎ–ಖಾತಾ) ಅಥವಾ ನಮೂನೆ ಬಿಗಳಲ್ಲಿ (ಬಿ–ಖಾತಾ) ನಿರ್ವಹಿಸುತ್ತಿರುವವರು ಚರಾಸ್ತಿ ದಾಖಲೆಗಳೇ ಹೊರತು ಅವು ಹಕ್ಕು ನಿರೂಪಿಸುವ ದಾಖಲೆಗಳಲ್ಲ. ಅವು ಕೇವಲ ಆಸ್ತಿ ತೆರಿಗೆ ಸಂಗ್ರಹದ ವಿವರಗಳ ದಾಖಲೆಗಳು. ಹಾಗಾಗಿ ಬಿ ಖಾತಾಗಳಲ್ಲಿನ ಆಸ್ತಿಗಳಿಗೂ ಸುಧಾರಣಾ ವೆಚ್ಚ ಪಾವತಿಸಿಕೊಂಡು ಖಾತಾ ನೋಂದಣಿ ಮಾಡಿಸಿ ಅವುಗಳನ್ನು ಎ ನಮೂನೆಯಲ್ಲೇ ನೋಂದಣಿ ಮಾಡಿಸಬಹುದು ಎಂದು ಪಾಲಿಕೆ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಸರ್ಕಾರವು ಈ ಬಗ್ಗೆ ಅಡ್ವೊಕೇಟ್‌ ಜನರಲ್‌ ಅವರ ಸಲಹೆಯನ್ನೂ ಪಡೆದಿದ್ದು, ಅವರೂ ಪೂರಕ ಅಭಿಪ್ರಾಯ ನೀಡಿದ್ದಾರೆ. ಇನ್ನಾದರೂ ಬಿ–ಖಾತಾದಾರರು ಎ–ಖಾತಾ ಪಡೆಯುವ ಕನಸು ನನಸಾಗುತ್ತದೆಯೋ ಕಾದು ನೋಡಬೇಕಿದೆ.

ಯಾವೆಲ್ಲ ಆಸ್ತಿಗಳ ಖಾತಾ ನೋಂದಣಿ ಸಾಧ್ಯ

* ಭೂಪರಿವರ್ತನೆಯಾಗಿ ವಿಭಜನೆಗೊಳ್ಳದ ಏಕನಿವೇಶನ ವರ್ಗದ ಆಸ್ತಿ

* ಭೂಪರಿವರ್ತನೆಗೊಂಡು ವಿಭಜನೆಗೆ ಒಳಗಾಗಿದ್ದರೂ ವಿಭಜಿತ ಭಾಗಕ್ಕೆ ಸಂಬಂಧಿಸಿದ ಕಡತ ನಕ್ಷೆಗೆ ಬಿಡಿಎ ಅನುಮೋದನೆ ಪಡೆದ ಆಸ್ತಿ

* ಕೆಐಎಡಿಬಿ, ಕೆಎಸ್‌ಎಸ್ಐಡಿಸಿ, ಕೆಎಚ್‌ಬಿಗಳು ರಚಿಸಿರುವ ಕೈಗಾರಿಕಾ ಪ್ರದೇಶ, ವಸತಿ ಬಡಾವಣೆ ಹಾಗೂ ಪೌರ ಸೌಕರ್ಯ ಒದಗಿಸದ ಬಡಾವಣೆಗಳ ನಿವೇಶನಗಳು

* ಕೆಐಎಡಿಬಿ ವತಿಯಿಂದ ಏಕ ಘಟಕ ಕೈಗಾರಿಕಾ ಉದ್ಯಮಕ್ಕಾಗಿ ಭೂಸ್ವಾಧೀನ ಮಾಡಿರುವ ನಿವೇಶನಗಳು

* ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 94 (ಸಿ) ಅನ್ವಯ ಸಕ್ರಮಗೊಂಡ ಸ್ವತ್ತು

* ಬಿಡಿಎ ರಿ–ಕನ್ವೇ ಯೋಜನೆಗೆ (ಭೂಸ್ವಾಧೀನ ರದ್ದುಪಡಿಸಿ ಮಾಲೀಕರಿಗೆ ಹಿಂತಿರುಗಿಸಿದ ಜಾಗ) ಒಳಪಟ್ಟು ಮೂಲಸೌಕರ್ಯ ಒದಗಿಸದ ಪ್ರದೇಶಗಳಲ್ಲಿರುವ ಸ್ವತ್ತುಗಳು

ಯಾವೆಲ್ಲ ಸ್ವತ್ತುಗಳಿಗೆ ಬಿ– ಖಾತಾ?

* ಭೂಪರಿವರ್ತನೆಗೊಂಡು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ನಿವೇಶನಗಳು

* ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ, ಕೆಎಚ್‌ಬಿ ವತಿಯಿಂದ ನಿರ್ಮಿಸಲಾದ ಕೈಗಾರಿಕಾ, ವಸತಿ ಬಡಾವಣೆಗಳಲ್ಲಿ ಪೌರಸೌಲಭ್ಯ ಒದಗಿಸದೇ ಇರುವ ಬಡಾವಣೆಗಳ ನಿವೇಶನಗಳು

* ಕೆಐಎಡಿಬಿ ವತಿಯಿಂದ ಏಕ ಘಟಕ ಕೈಗಾರಿಕಾ ಉದ್ಯಮಕ್ಕಾಗಿ ಭೂಸ್ವಾಧೀನಪಡಿಸಿಕೊಂಡು ಪಾಲಿಕೆ ವತಿಯಿಂದ ಮೂಲಸೌಕರ್ಯ ಒದಗಿಸದ ನಿವೇಶನಗಳು

* ಕಂದಾಯ ನಿವೇಶನಗಳು

* ಕಂದಾಯ ನಿವೇಶನಗಳಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿರುವ ಸ್ವತ್ತುಗಳು

* ಖಾಸಗಿ ವಸತಿ ಮಹಾಮಂಡಳಿಗಳಿಂದ ಸಂಬಂಧಪಟ್ಟ ಪ್ರಾಧಿಕಾರದಿಂದ ಬಡಾವಣೆ ರಚಿಸಲು ಅನುಮೋದನೆ ಪಡೆದು ನಂತರ ಪ್ರಾಧಿಕಾರದಿಂದ ಬಿಡುಗಡೆಗೊಳ್ಳದ ನಿವೇಶನಗಳು

ಗುಟ್ಟಾಗಿ ನಡೆಯುತ್ತಿದೆ ಗೋಲ್‌ಮಾಲ್‌

ಬಿ ಖಾತಾ ಆಸ್ತಿಗಳನ್ನು ಎ –ಖಾತಾವನ್ನಾಗಿ ಪರಿವರ್ತಿಸಲು ಸದ್ಯಕ್ಕೆ ಅವಕಾಶ ಇಲ್ಲ. 2014ರ ಡಿಸೆಂಬರ್‌ನಲ್ಲಿ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದ ಪಾಲಿಕೆ ಆಯುಕ್ತರು ನಮೂನೆ ಬಿಯಲ್ಲಿರುವ ಆಸ್ತಿಗಳಿಗೆ ಎ–ಖಾತಾ ನೋಂದಣಿ ಮಾಡಬಾರದು ಎಂದು ಸ್ಪಷ್ಟವಾಗಿ ಸೂಚಿಸಿದ್ದರು. ಆದರೂ ಕೆಲವು ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ) ಹಣದಾಸೆಗೆ ಅಕ್ರಮವಾಗಿ ಬಿ–ಖಾತಾವನ್ನು ಎ–ಖಾತಾವನ್ನಾಗಿ ಪರಿವರ್ತಿಸುವ ದಂಧೆಯಲ್ಲಿ ತೊಡಗಿದ್ದರು. ಇತ್ತೀಚೆಗೆ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲೂ ಇಂತಹ ಒಂದು ಪ್ರಕರಣ ಬೆಳಕಿಗೆ ಬಂದು ಎಆರ್‌ಒ ಹಾಗೂ ಪ್ರಥಮ ದರ್ಜೆ ಸಹಾಯಕನನ್ನು ಅಮಾನತು ಮಾಡಲಾಗಿತ್ತು.

‘ಪ್ರತ್ಯೇಕ ಖಾತಾ–ಕಾನೂನುಬಾಹಿರ’

ಕೆಎಂಸಿ ಕಾಯ್ದೆಯ 108 ಎ ಸೆಕ್ಷನ್‌ ಅಡಿ ಪಾಲಿಕೆ ಆಸ್ತಿ ತೆರಿಗೆಯನ್ನು ನಿಗದಿಪಡಿಸಬಹುದು. ಯಾವುದೇ ಜಮೀನು ಅಥವಾ ಕಟ್ಟಡದ ತೆರಿಗೆ ವಿವರ ನಿಗದಿಪಡಿಸಿದ ಬಳಿಕ ಅದನ್ನು ಎ ನಮೂನೆಯಲ್ಲೇ (ಎ–ಖಾತಾ) ನಮೂದಿಸಬೇಕು. ಭೂಪರಿವರ್ತನೆ ಮಾಡದ ಜಮೀನಿನಲ್ಲಿ ಅಥವಾ ಅನಧಿಕೃತ ಬಡಾವಣೆಯಲ್ಲಿ ನಿರ್ಮಿಸಿದ ಕಟ್ಟಡಗಳ ತೆರಿಗೆ ವಿವರಗಳನ್ನೂ ನಮೂನೆ ‘ಎ’ನಲ್ಲೇ ನಮೂದಿಸಬೇಕೇ ವಿನಃ ನಮೂನೆ ‘ಬಿ’ನಲ್ಲಿ ಅಲ್ಲ. ಪಾಲಿಕೆಯು ಇದುವರೆಗೂ ಅನುಸರಿಸುತ್ತಿರುವ ವಿಧಾನವು ಸಮಂಜಸವೂ ಅಲ್ಲ ಕಾನೂನುಬದ್ಧವೂ ಅಲ್ಲ ಎಂದು ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರು ಸರ್ಕಾರಕ್ಕೆ ಅಭಿಪ್ರಾಯ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT