ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೇಂದ್ರ ವಿ.ವಿ: ಪುಸ್ತಕ ಕೊರತೆ

ಸಾರ್ವಜನಿಕ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಅಲೆದಾಟ
Last Updated 7 ಅಕ್ಟೋಬರ್ 2018, 20:28 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಕಲಾ ನಿಖಾಯಕ್ಕೆ ಸಂಬಂಧಿಸಿದ ಪುಸ್ತಕಗಳೇ ಇಲ್ಲ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಪಠ್ಯವಿಷಯ ಅಧ್ಯಯನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯಗಳ ಕಪಾಟುಗಳಲ್ಲಿ ಹುಡುಕುತ್ತಿದ್ದಾರೆ. ಜೆರಾಕ್ಸ್‌ ಮಾಡಿಸಿದ ನೋಟ್ಸ್‌ಗಳನ್ನು ಅವಲಂಬಿಸಿದ್ದಾರೆ.

ವಿಶ್ವವಿದ್ಯಾಲಯವು ಈ ವರ್ಷದಿಂದ 8 ವಿಭಾಗಗಳನ್ನು ಆರಂಭಿಸಿದೆ. ಆದರೆ, ಪೂರ್ವತಯಾರಿಯಾಗಿ ಈ ವಿಭಾಗಗಳ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳನ್ನು ಖರೀದಿಸಿಲ್ಲ. ತರಗತಿಗಳು ಆರಂಭವಾಗಿ ಒಂದು ತಿಂಗಳು ಕಳೆದರೂ, ಪಠ್ಯವಿಷಯಗಳ ಅಧ್ಯಯನಕ್ಕೆ ಅಗತ್ಯವಿರುವ ಹೊತ್ತಗೆಗಳಿನ್ನೂ ವಿದ್ಯಾರ್ಥಿಗಳ ಕೈಸೇರಿಲ್ಲ.

‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಪಠ್ಯ ಮತ್ತು ನಾನು ಆಯ್ದುಕೊಂಡಿರುವ ವಿಭಾಗದ ಪಠ್ಯದಲ್ಲಿ ಕೆಲವೊಂದು ಸಾಮ್ಯತೆ ಇದೆ. ಹಾಗಾಗಿ ಕೆಎಸ್‌ಒಯು ಪಠ್ಯಪುಸ್ತಕಗಳ ಪುಟಗಳನ್ನು ಜೆರಾಕ್ಸ್‌ ಮಾಡಿಸಿಕೊಂಡು ಓದುತ್ತಿದ್ದೇನೆ’ ಎಂದು ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವು ವಿಷಯಗಳಿಗೆ ಸಂಬಂಧಿಸಿದ ಟಿಪ್ಪಣಿಗಳನ್ನು ಪ್ರಾಧ್ಯಾಪಕರೇ ಒದಗಿಸುತ್ತಾರೆ. ನಮ್ಮ ವಿಶ್ವವಿದ್ಯಾಲಯದ ಪಠ್ಯಕ್ರಮವು ಬೇರೆ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕಿಂತ ಭಿನ್ನವಾಗಿದೆ. ಹಾಗಾಗಿ ಬೇರೆ ವಿಶ್ವವಿದ್ಯಾಲಯಗಳ ಪುಸ್ತಕಗಳನ್ನು ಬಳಸುವುದಕ್ಕೂ ಸಾಧ್ಯವಾಗುತ್ತಿಲ್ಲ’ ಎಂದು ಅವರು ಅಸಹಾಯಕತೆ ತೋಡಿಕೊಂಡರು.

‘ಪ್ರಾಧ್ಯಾಪಕರು ಪಾಠ ಪ್ರವಚನ ಮಾಡುವಾಗ ಬರೆದುಕೊಂಡ ಟಿಪ್ಪಣಿಯನ್ನಷ್ಟೇ ಸದ್ಯ ಓದುತ್ತಿದ್ದೇನೆ. ಹೆಚ್ಚಿನ ವಿಷಯ ಸಂಗ್ರಹಣೆಗಾಗಿ ಜಯನಗರದಲ್ಲಿನ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ನೇಹಿತರೊಂದಿಗೆ ಆಗಾಗ ಹೋಗಿಬರುತ್ತೇನೆ. ಅಲ್ಲಿಯೂ ಎಲ್ಲ ವಿಷಯಗಳ ಪುಸ್ತಕಗಳು ಸಿಗುವುದಿಲ್ಲ’ ಎಂದು ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ತಿಳಿಸಿದರು.

ರಾಜ್ಯಶಾಸ್ತ್ರ ವಿಭಾಗದ ಪಠ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಯಾರಾದರೂ ವಿದ್ಯಾರ್ಥಿ ಅವುಗಳನ್ನು ಖರೀದಿಸಿದರೆ, ಇನ್ನುಳಿದ ವಿದ್ಯಾರ್ಥಿಗಳು ಅದರ ಪುಟಗಳನ್ನು ಜೆರಾಕ್ಸ್‌ ಮಾಡಿಸಿಕೊಂಡು ಓದುತ್ತಿದ್ದಾರೆ.

‘ಗೂಗಲ್‌ನಲ್ಲೂ ತುಂಬಾ ನೋಟ್ಸ್‌ ಸಿಗುತ್ತವೆ. ಆದರೆ, ಅವುಗಳಲ್ಲಿ ಬಹಳಷ್ಟು ಇಂಗ್ಲಿಷ್‌ನಲ್ಲಿ ಇರುತ್ತವೆ. ಕನ್ನಡ ಮಾಧ್ಯಮ ವಿದ್ಯಾರ್ಥಿ
ಗಳಿಗೆ ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೊಸದಾಗಿ ಪಠ್ಯ ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿದರೆ ಹೆಚ್ಚು ಅನುಕೂಲ ಆಗಲಿದೆ’ ಎಂದು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯೊಬ್ಬರು ಹೇಳಿದರು.

ಹೊಸ ಗ್ರಂಥಾಲಯ, ಹೊಸ ಪುಸ್ತಕ ಬರಲಿವೆ: ‘ಸದ್ಯ ಅಧ್ಯಾಪಕರೇ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿ ಒದಗಿಸುತ್ತಿದ್ದಾರೆ. ಒಂದು ವಾರದಲ್ಲಿ ಭೌತಶಾಸ್ತ್ರ ಬ್ಲಾಕ್‌ನ ನವೀಕರಣ ಕೆಲಸ ಪೂರ್ಣಗೊಳ್ಳಲಿದೆ. ಅಲ್ಲೊಂದು ಸುಸಜ್ಜಿತ ಗ್ರಂಥಾಲಯ ನಿರ್ಮಿಸುತ್ತೇವೆ. ಪ್ರತಿ ವಿಭಾಗಕ್ಕೂ ತುರ್ತಾಗಿ ಅಗತ್ಯವಿರುವ ಪುಸ್ತಕಗಳು ಅಲ್ಲಿ ಸಿಗುವಂತೆ ನೋಡಿಕೊಳ್ಳುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಜಾಫೆಟ್‌ ತಿಳಿಸಿದರು.

ಅಕಾಡೆಮಿ ಗ್ರಂಥಾಲಯ ಬಳಕೆ

ವಿಶ್ವವಿದ್ಯಾಲಯದ ಆವರಣದಲ್ಲಿಯೇ ಸಾಹಿತ್ಯ ಅಕಾಡೆಮಿಯ ಗ್ರಂಥಾಲಯವಿದೆ. ಕನ್ನಡ ಮತ್ತು ಇಂಗ್ಲಿಷ್‌ ವಿಭಾಗಗಳ ಪಠ್ಯಗಳಿಗೆ ಸಂಬಂಧಿಸಿದ ಕೆಲವು ಪುಸ್ತಕಗಳು ಇಲ್ಲಿ ಸಿಗುತ್ತಿರುವುದರಿಂದ ವಿದ್ಯಾರ್ಥಿಗಳು ಅಕಾಡೆಮಿ ಗ್ರಂಥಾಲಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಗೆದ್ದಲು ಹಿಡಿದ ಪುಸ್ತಕಗಳು

ವಿಶ್ವವಿದ್ಯಾಲಯದ ನೆಲ ಮಹಡಿಯಲ್ಲಿನ ಪುಸ್ತಕಗಳನ್ನು ಮಾತ್ರ ಒಪ್ಪವಾಗಿ ಜೋಡಿಸಿ, ಕಾಲಕಾಲಕ್ಕೆ ದೂಳು ಹೊಡೆಯುತ್ತಾರೆ. ಆದರೆ, ಒಂದನೇ ಮತ್ತು ಎರಡನೇ ಮಹಡಿಗಳಲ್ಲಿ ಇರುವ ಹತ್ತಾರು ವರ್ಷಗಳಷ್ಟು ಹಳೆಯ ಪುಸ್ತಕಗಳನ್ನು ಕೇಳುವವರೇ ಇಲ್ಲ. ಇಲ್ಲಿರುವ ವಿಜ್ಞಾನ, ಗಣಿತ ಮತ್ತು ವಾಣಿಜ್ಯ ವಿಷಯದ ಕುರಿತ ಸಾವಿರಾರು ಪುಸ್ತಕಗಳ ಮೇಲೆ ದೂಳು ಇದೆ. ಕೆಲವೊಂದು ಪುಸ್ತಕಗಳು ಗೆದ್ದಲು ಹಿಡಿದು ಹಾಳಾಗುತ್ತಿವೆ.

‘ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ, ಗ್ರಂಥಾಲಯ ಸಿಬ್ಬಂದಿ ಕಚೇರಿ ಸಮಯದಲ್ಲಿ ಹರಟೆ ಹೊಡೆಯುತ್ತ, ಮೊಬೈಲ್‌ಗಳಲ್ಲಿ ಗೇಮ್‌ ಆಡುತ್ತಾ ಕುಳಿತಿರುತ್ತಾರೆ’ ಎಂದು ವಿದ್ಯಾರ್ಥಿಯೊಬ್ಬರು ದೂರಿದರು.

ಗ್ರಂಥಾಲಯ ಕಟ್ಟಡದ ಎರಡನೆ ಮಹಡಿಯ ಚಾವಣಿಗೆ ಮೆತ್ತಿದ ಸಿಮೆಂಟ್‌ ಕೂಡ ಪಕಳೆ ಪಕಳೆಯಾಗಿ ಅಲ್ಲಲ್ಲಿ ಉದುರಿದೆ.

ಕಲಾ ನಿಖಾಯ: ವಿದ್ಯಾರ್ಥಿಗಳ ಸಂಖ್ಯೆ

ಇಂಗ್ಲಿಷ್‌–44

ಸಮಾಜ ಕಾರ್ಯ– 42

ರಾಜ್ಯಶಾಸ್ತ್ರ–31 ‌

ಕನ್ನಡ–23

ಸಮಾಜಶಾಸ್ತ್ರ–16

ಇತಿಹಾಸ–16

ಅರ್ಥಶಾಸ್ತ್ರ–10

ತತ್ವಶಾಸ್ತ್ರ –8

'ಹೊಸ ಗ್ರಂಥಾಲಯ, ಹೊಸ ಪುಸ್ತಕ ಬರಲಿವೆ’

‘ಸದ್ಯ ಅಧ್ಯಾಪಕರೇ ವಿದ್ಯಾರ್ಥಿಗಳಿಗೆ ಅಧ್ಯಯನ ಸಾಮಗ್ರಿ ಒದಗಿಸುತ್ತಿದ್ದಾರೆ. ಒಂದು ವಾರದಲ್ಲಿ ಭೌತಶಾಸ್ತ್ರ ಬ್ಲಾಕ್‌ನ ನವೀಕರಣ ಕೆಲಸ ಪೂರ್ಣಗೊಳ್ಳಲಿದೆ. ಅಲ್ಲೊಂದು ಸುಸಜ್ಜಿತ ಗ್ರಂಥಾಲಯ ನಿರ್ಮಿಸುತ್ತೇವೆ. ಪ್ರತಿ ವಿಭಾಗಕ್ಕೂ ತುರ್ತಾಗಿ ಅಗತ್ಯವಿರುವ ಪುಸ್ತಕಗಳು ಅಲ್ಲಿ ಸಿಗುವಂತೆ ನೋಡಿಕೊಳ್ಳುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಜಾಫೆಟ್‌ ತಿಳಿಸಿದರು.

* ಆದಷ್ಟು ಬೇಗ ಪುಸ್ತಕಗಳು ಗ್ರಂಥಾಲಯಕ್ಕೆ ಬಂದರೆ, ಮೊದಲ ಸೆಮಿಸ್ಟರ್‌ ಪರೀಕ್ಷೆಯ ತಯಾರಿಗೆ ಅನುಕೂಲ ಆಗಲಿದೆ.
-ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT