ಬುಧವಾರ, ನವೆಂಬರ್ 20, 2019
21 °C
ತಾತಗುಣಿ ಎಸ್ಟೇಟ್‌ನಲ್ಲಿ ಚಿತ್ರನಗರಿ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಪರಿಸರವಾದಿಗಳ ತೀವ್ರ ಆಕ್ಷೇಪ

ರೋರಿಚ್‌: ವನ್ಯಜೀವಿಗಳ ಆವಾಸಸ್ಥಾನಕ್ಕೆ ಕುತ್ತು ತರಬೇಡಿ

Published:
Updated:
Prajavani

ಬೆಂಗಳೂರು: ‌ಕನಕಪುರ ರಸ್ತೆಯಲ್ಲಿನ ತಾತಗುಣಿ ಬಳಿ ಇರುವ ರೋರಿಚ್‌ ಮತ್ತು ದೇವಿಕಾರಾಣಿ ಎಸ್ಟೇಟ್‌ ವನ್ಯಜೀವಿಗಳ ಆವಾಸಸ್ಥಾನ. ಈ ಸುಂದರ  ತಾಣದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಪ್ರಸ್ತಾವಕ್ಕೆ ಪರಿಸರವಾದಿಗಳು ಹಾಗೂ ವನ್ಯಜೀವಿ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೈಸ್‌ ರಸ್ತೆ ದಾಟಿ ಮುಂದೆ ಹೋದ ಕೂಡಲೇ ಸಿಗುವ ಎಸ್ಟೇಟ್‌ನಲ್ಲಿ ಅಪರೂಪದ ಸಸ್ಯ ಸಂಕುಲವಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಗುಳ್ಳಳ್ಳಿಗುಡ್ಡ, ಯು.ಎಂ.ಕಾವಲು ಮೂಲಕ ಬಿ.ಎಂ. ಕಾವಲು ಅರಣ್ಯಕ್ಕೆ ಈ ಎಸ್ಟೇಟ್ ಕೊಂಡಿಯಂತಿದೆ.

ಅದೆಲ್ಲದಕ್ಕೂ ಮಿಗಿಲಾಗಿ ಬನ್ನೇರುಘಟ್ಟ ಮತ್ತು ಸಾವನದುರ್ಗ ನಡುವಿನ ಆನೆ ಕಾರಿಡಾರ್ ಸಹ ಈ ಅರಣ್ಯ ಪ್ರದೇಶದಲ್ಲಿ ಹಾದುಹೋಗುತ್ತದೆ. ನೀರು ನಾಯಿ, ಕಡವೆ, ಕಾಡುಕುರಿ, ಚಿರತೆಗಳು ಎಸ್ಟೇಟ್‌ನಲ್ಲಿ ಬೀಡು ಬಿಟ್ಟಿವೆ. ಇಲ್ಲಿರುವ ಕೆರೆಗಳು ಅಪರೂಪದ ಪಕ್ಷಿ ಸಂಕುಲಕ್ಕೂ ಆಶ್ರಯ ನೀಡಿವೆ.

ರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್‌ ಮಂಡಳಿಯ ಸ್ವಾಧೀನದಲ್ಲಿ 468.33 ಎಕರೆ ಜಾಗ ಇದೆ. ದಾಖಲೆಗಳ ಪ್ರಕಾರ ಅರಣ್ಯ ಇಲಾಖೆಯ ವಶದಲ್ಲಿ ಈ ಭೂಮಿ ಇಲ್ಲ. ಆದರೂ, ಅರಣ್ಯ ಇರುವ ಕಾರಣ ಅರಣ್ಯೇತರ ಚಟುವಟಿಕೆ ಕೈಗೊಳ್ಳಲು ಅರಣ್ಯ ಇಲಾಖೆಯ ಅನುಮತಿ ಪಡೆಯಲೇಬೇಕು. 1980ರ ಅರಣ್ಯ ಸಂರಕ್ಷಣೆ ಕಾಯ್ದೆ ಪ್ರಕಾರ ‌ಕೇಂದ್ರ ಪರಿಸರ ಸಚಿವಾಲಯದ ಅನುಮತಿಯೂ ಕಡ್ಡಾಯ. 1996ರ ಸುಪ್ರೀಂಕೋರ್ಟ್ ಆದೇಶದಂತೆಯೂ ಅರಣ್ಯೇತರ ಚಟುವಟಿಕೆಗೆ ಅವಕಾಶವಿಲ್ಲ ಎನ್ನುತ್ತಾರೆ ಪರಿಸರವಾದಿಗಳು.

ರೋರಿಚ್ ಎಸ್ಟೇಟ್‌ಗೆ ಬೇಲಿ ಹಾಕಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಜಾಗ ಸಂರಕ್ಷಣೆ ದೃಷ್ಟಿಯಿಂದ ಬೇಲಿ ಹಾಕಿಸಲಿ. ಆದರೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಂಪರ್ಕಿಸುವ ಭಾಗದಲ್ಲಿ ಬೇಲಿ ಹಾಕುವುದು ಬೇಡ. ಈ ಬೇಲಿ ವನ್ಯಜೀವಿಗಳ ಓಡಾಟಕ್ಕೆ ಅಡ್ಡಿಯಾಗಲಿದೆ ಎನ್ನುವುದು ಅವರ ಆತಂಕ.

‘ಚಿತ್ರನಗರಿ ಬೇಕು ಎಂಬುದು ನಿಜ. ಆದರೆ, ಅದಕ್ಕೆ ಬೇರೆ ಜಾಗಗಳನ್ನು ಸರ್ಕಾರ ಹುಡುಕಿಕೊಳ್ಳಬಹುದು. ನಗರಕ್ಕೆ ಹೊಂದಿಕೊಂಡಂತೆ ಅರಣ್ಯ ಪ್ರದೇಶಗಳು ಕಡಿಮೆ ಪ್ರಮಾಣದಲ್ಲಿವೆ. ಅವುಗಳನ್ನಾದರೂ ಉಳಿಸಿಕೊಳ್ಳಬೇಕು’ ಎನ್ನುತ್ತಾರೆ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಜಿ. ನೇಗಿನಹಾಳ್.

‘ಸಂರಕ್ಷಿತ ಅರಣ್ಯವಾಗಿ ಘೋಷಿಸಲಿ’

ರೋರಿಚ್ ಎಸ್ಟೇಟ್‌ನಲ್ಲಿರುವ ಕಾಡು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮತ್ತು ಬೆಂಗಳೂರು ನಗರದ ಕೆಲ ಭಾಗಗಳ ಮಧ್ಯ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಈ ಕಾಡು ಇಲ್ಲದಿದ್ದರೆ ಆನೆ, ಚಿರತೆಗಳಂತಹ ಕೆಲ ವನ್ಯಜೀವಿಗಳು ನಮ್ಮ ಮನೆಯ ಬಾಗಿಲಿಗೆ ಬರುತ್ತವೆ. ಆಗ ನಾವು ಸಂಘರ್ಷ ಹೆಚ್ಚಾಗಿದೆ ಎಂದು ಕೂಗಾಡುವುದು ಸರಿಯೇ?

ಪ್ರಾಣಿಗಳ ಆವಾಸಸ್ಥಾನವನ್ನು ಅಭಿವೃದ್ದಿಗಾಗಿ ಬಲಿ ಕೊಡುವುದು ಸರಿಯಲ್ಲ. ಅಭಿವೃದ್ಧಿಯನ್ನು ಇತರ ಜಾಗಗಳಲ್ಲಿ ಮಾಡಬಹುದು.

ರೋರಿಚ್ ಎಸ್ಟೇಟ್, ಬಿ.ಎಂ.ಕಾವಲು, ಗುಳ್ಳಳ್ಳಿಗುಡ್ಡ, ಯು.ಎಂ.ಕಾವಲು ಪ್ರದೇಶಗಳನ್ನು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವುದು ಸೂಕ್ತ. ಇದು ಈ ಜಾಗವನ್ನು ಉಳಿಸಿದ ರೋರಿಚ್ ಮತ್ತು ದೇವಿಕಾರಾಣಿಯವರಿಗೆ ಕೊಡುವ ಸೂಕ್ತ ಗೌರವ.

–ಸಂಜಯ್ ಗುಬ್ಬಿ, ವನ್ಯಜೀವಿ ವಿಜ್ಞಾನಿ

**
‘ರಷ್ಯಾ ರಾಯಭಾರ ಕಚೇರಿ ಒಪ್ಪಿಗೆ ಬೇಕು’

‘ರೋರಿಚ್ ಎಸ್ಟೇಟ್‌ ಅನ್ನು ಅನ್ಯ ಕಾರ್ಯಕ್ಕೆ ಬಳಸಬೇಕೆಂದರೆ ಅದಕ್ಕೆ ರಷ್ಯಾ ರಾಯಭಾರ ಕಚೇರಿಯ ಅನುಮತಿ ಬೇಕು’ ಎಂದು ಪರಿಸರವಾದಿ ಲಿಯೊ ಸಲ್ಡಾನ ಹೇಳಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಖ್ಯಾತ ಚಿತ್ರ ಕಲಾವಿದರಾಗಿದ್ದ ರೋರಿಚ್ ಅವರು ರಷ್ಯಾ ದೇಶದವರು. ಅವರ ಸ್ಮರಣಾರ್ಥ ಇರುವ ಜಾಗ ಇದೊಂದೇ. ಇದರ ಸಂರಕ್ಷಣೆಯನ್ನು ಭಾರತ ಮತ್ತು ರಷ್ಯಾದ ರಾಯಭಾರ ಕಚೇರಿಗಳೆರಡೂ ಸೇರಿ ಮಾಡಬೇಕು ಎಂದು 10 ವರ್ಷಗಳ ಹಿಂದೆಯೇ ಒಪ್ಪಂದ ಆಗಿದೆ. ಇದು ಸರ್ಕಾರಕ್ಕೆ ಗೊತ್ತಿದ್ದರೂ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕಿದೆ’ ಎಂದರು.

ಅಗತ್ಯ ಇಲ್ಲದಿದ್ದರೂ ಎಸ್ಟೇಟ್ ತುದಿಯವರೆಗೆ ಮೆಟ್ರೊ ಮಾರ್ಗ ಕೊಂಡೊಯ್ಯಲಾಗಿದೆ. ಅಶೋಕ್ ಖೇಣಿ ಅವರ ನೈಸ್ ರಸ್ತೆ, ಶ್ರೀಶ್ರೀ ರವಿಶಂಕರ್ ಗುರೂಜಿ ಆಶ್ರಮ, ಇಸ್ಕಾನ್ ಅವರಿಗೆ ಅನುಕೂಲ ಮಾಡಿಕೊಡಲು ಮೆಟ್ರೊ ಮಾರ್ಗ ನಿರ್ಮಿಸಲಾಗಿದೆ. ಈಗ ರೋರಿಚ್ ಎಸ್ಟೇಟ್ ಮೇಲೆ ಕಣ್ಣು ಹಾಕಲಾಗಿದೆ. ಚಿತ್ರನಗರಿ ನಿರ್ಮಾಣಕ್ಕೆ ಇವರೆಲ್ಲರೂ ಬಹಿರಂಗವಾಗಿ ಬೆಂಬಲಕ್ಕೆ ನಿಂತರೂ ಆಶ್ಚರ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)