ಉತ್ತರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ?

ಶುಕ್ರವಾರ, ಏಪ್ರಿಲ್ 26, 2019
34 °C

ಉತ್ತರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ?

Published:
Updated:

ಬೆಂಗಳೂರು: ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಬೆಂಗಳೂರು ‘ಉತ್ತರ’ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಮಂಗಳವಾರ (ಮಾರ್ಚ್‌ 26) ಕೊನೆಯ ದಿನ. ಆದರೆ, ಈ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಅಂತಿಮಗೊಳಿಸುವುದು ‘ಮೈತ್ರಿ‘ಕೂಟಕ್ಕೆ (ಕಾಂಗ್ರೆಸ್‌–ಜೆಡಿಎಸ್‌) ದೊಡ್ಡ ಸವಾಲಾಗಿದೆ.

ತನ್ನ ಪಾಲಿನ ಈ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂದು ತೀರ್ಮಾನಿಸಲು ಜೆಡಿಎಸ್‌ ನಾಯಕರಿಗೆ ಇನ್ನೂ ಸಾಧ್ಯವಾಗಿಲ್ಲ. ಒಕ್ಕಲಿಗರ ಪ್ರಾಬಲ್ಯ ಇರುವ ಇಲ್ಲಿ, ಹಾಲಿ ಸಂಸದ, ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

ಪಕ್ಷದಲ್ಲಿ ‘ಸೂಕ್ತ’ ಅಭ್ಯರ್ಥಿ ಇಲ್ಲದ ಕಾರಣಕ್ಕೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯೊಬ್ಬರನ್ನು ತಮ್ಮ ಪಕ್ಷದ ಚಿಹ್ನೆಯಡಿ ಕಣಕ್ಕಿಳಿಸಲು ದೇವೇಗೌಡರು ಗಂಭೀರ ಚಿಂತನೆ ನಡೆಸಿದ್ದರು.

ಉಡುಪಿ– ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಸಚಿವ ಕಾಂಗ್ರೆಸ್‌ನ ಪ್ರಮೋದ್‌ ಮಧ್ವರಾಜ್‌ ಅವರನ್ನು ಕಣಕ್ಕಿಳಿಸಿದಂತೆ ಇಲ್ಲೂ ‘ರಾಜಕೀಯ ಹೊಂದಾಣಿಕೆ’ ಮಾಡಿ
ಕೊಳ್ಳುವುದು ಅವರ ಉದ್ದೇಶವಾಗಿತ್ತು.

ಸಚಿವ ಕೃಷ್ಣ ಬೈರೇಗೌಡ ಅವರ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದ ದೇವೇಗೌಡ ತಮ್ಮ ‘ರಾಜಕೀಯ ಹೊಂದಾಣಿಕೆ’ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಆದರೆ, ಕೃಷ್ಣ ಬೈರೇಗೌಡ ಕಣಕ್ಕಿಳಿಯಲು ಸ್ಪಷ್ಟವಾಗಿ ನಿರಾಕರಿಸಿದ್ದರು. ಅಲ್ಲದೆ, ಕಾಂಗ್ರೆಸ್‌ನ ಯಾರೂ ದೇವೇಗೌಡ ಯೋಚನೆಗೆ ಸಹಮತ ವ್ಯಕ್ತಪಡಿಸುತ್ತಿಲ್ಲ ಎಂದು ಹೇಳಲಾಗಿದೆ. ಹೀಗಾಗಿ, ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ಎಂ. ನಾರಾಯಣಸ್ವಾಮಿ, ಬಿ.ಎಲ್‌. ಶಂಕರ್‌ ಹೆಸರೂ ಚಲಾವಣೆಯಲ್ಲಿದೆ. ಆದರೆ,  ಇದೀಗ ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್‌ ಗೌಡ ಅವರ ಹೆಸರು ಮುಂಚೂಣಿಗೆ ಬಂದಿದೆ ಎಂದು ಗೊತ್ತಾಗಿದೆ. ರಾಜೀವ್‌ ಗೌಡ ಜೊತೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಈ ಬಗ್ಗೆ  ಮಾತುಕತೆ ನಡೆಸಿದ್ದಾರೆ. ಗೆಲ್ಲುವ ಅವಕಾಶ ಇರುವ ಬಗ್ಗೆಯೂ ಹೇಳಿದ್ದಾರೆ ಎಂದು ಗೊತ್ತಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮತಿಸಿದರೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದರೂ ಅಚ್ಚರಿ ಇಲ್ಲ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಜೆಡಿಎಸ್‌ ವರಿಷ್ಠ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೊ, ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡುತ್ತಾರೊ ಎಂಬ ಗೊಂದಲ ಇತ್ತು. ಅತ್ಯಂತ ಸುರಕ್ಷಿತ ಎಂಬ ಕಾರಣಕ್ಕೆ ತುಮಕೂರು ಕ್ಷೇತ್ರವನ್ನು ದೇವೇಗೌಡರು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ, ‘ಉತ್ತರ’ಕ್ಕೆ ಯಾರು ಎಂಬ ಪ್ರಶ್ನೆ ಎದುರಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !