ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ ಆಸೆ ತೋರಿಸಿ ಕೊಲೆ; ಆರೋಪಿಗಳ ಬಂಧನ

ರಾಜ್ಯ ಸಿಐಡಿ, ಪಂಜಾಬ್‌ ಪೊಲೀಸರ ಜಂಟಿ ಕಾರ್ಯಾಚರಣೆ
Last Updated 17 ನವೆಂಬರ್ 2018, 19:00 IST
ಅಕ್ಷರ ಗಾತ್ರ

ಬೆಂಗಳೂರು: ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಪಂಜಾಬ್‌ನ ಸುರೇಂದ್ರಪಾಲ್ ಸಿಂಗ್ (35) ಎಂಬುವರನ್ನು ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ್ದ ಮೂವರು ಟ್ರಾವೆಲ್‌ ಏಜೆಂಟರನ್ನು ರಾಜ್ಯ ಸಿಐಡಿ ಹಾಗೂ ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್‌ನ ಕಲ್ಯಾಣಪುರದ ಸುರೇಂದ್ರಪಾಲ್ ಹಾಗೂ ಅವರ ಸ್ನೇಹಿತರು, ಉದ್ಯೋಗ ಅರಸಿ ಕೆನಡಾಗೆ ಹೋಗಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದು ಅವರನ್ನು ಸಂಪರ್ಕಿಸಿದ್ದ ಟ್ರಾವೆಲ್‌ ಏಜೆಂಟರು, ‘ಯಾವುದೇ ದಾಖಲೆ ಇಲ್ಲದೇ ನಿಮ್ಮನ್ನು ಕೆನಡಾಗೆ ಕರೆದುಕೊಂಡು ಹೋಗುತ್ತೇವೆ. ನಮ್ಮ ಮೇಲೆ ಅನುಮಾನವಿದ್ದರೆ, ಕೆನಡಾ ತಲುಪಿದ ನಂತರವೇ ತಲಾ ₹20 ಲಕ್ಷ ಕೊಡಿ’ ಎಂದು ಹೇಳಿದ್ದರು ಎಂಬುದಾಗಿ ಸಿಐಡಿ ಮೂಲಗಳು ತಿಳಿಸಿವೆ.

ಅದಕ್ಕೆ ಒಪ್ಪುತ್ತಿದ್ದಂತೆ ಸುರೇಂದ್ರಪಾಲ್ ಹಾಗೂ ಸ್ನೇಹಿತರನ್ನು ಡಿಸೆಂಬರ್ 3ರಂದು ವಿಮಾನದಲ್ಲಿ ಬೆಂಗಳೂರಿಗೆ ಕರೆತಂದಿದ್ದ ಆರೋಪಿಗಳು, ‘ಬೆಂಗಳೂರನ್ನೇ ಕೆನಡಾ’ ಎಂದು ಹೇಳಿದ್ದರು. ಬೆಂಗಳೂರಿನ ಪರಿಚಯವಿಲ್ಲದ ಸುರೇಂದ್ರ ಹಾಗೂ ಸ್ನೇಹಿತರು, ಅವರ ಮಾತನ್ನು ನಂಬಿದ್ದರು. ಪೋಷಕರಿಗೆ ಕರೆ ಮಾಡಿದ್ದ ಸುರೇಂದ್ರಪಾಲ್‌ರ ಸ್ನೇಹಿತರು, ‘ನಾವು ಕೆನಡಾಗೆ ಬಂದಿದ್ದೇವೆ. ಏಜೆಂಟರ್ ಬ್ಯಾಂಕ್‌ ಖಾತೆಗೆ ₹21 ಲಕ್ಷ ಜಮಾ ಮಾಡಿ’ ಎಂದಿದ್ದರು. ಅವರ ಮಾತು ನಿಜವಿರಬಹುದು ಎಂದು ಪೋಷಕರು ಹಣ ಹಾಕಿದ್ದರು.

ಆದರೆ, ಆರೋಪಿಗಳ ವರ್ತನೆಯಿಂದ ಅನುಮಾನಗೊಂಡಿದ್ದಸುರೇಂದ್ರಪಾಲ್, ‘ಪೋಷಕರಿಗೆ ಕರೆ ಮಾಡುವುದಿಲ್ಲ. ಹಣವನ್ನೂ ಕೊಡಿಸುವುದಿಲ್ಲ’ ಎಂದು ಜಗಳ ತೆಗೆದಿದ್ದರು. ಕೋಪಗೊಂಡ ಏಜೆಂಟರು, ಅವರನ್ನು ಕೊಂದು ರಾಮನಗರ ಬಳಿ ಶವ ಎಸೆದು ತಲೆಮರೆಸಿಕೊಂಡಿದ್ದರು ಎಂದು ಸಿಐಡಿ ಮೂಲಗಳು ಹೇಳಿವೆ.

ಎರಡೂ ಕಡೆ ಪ್ರಕರಣ: ರಾಮನಗರದಲ್ಲಿ ಡಿಸೆಂಬರ್ 6ರಂದು ಶವ ಕಂಡಿದ್ದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದ್ದ ಪೊಲೀಸರು, ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಅತ್ತ, ಸುರೇಂದ್ರಪಾಲ್‌ ನಾಪತ್ತೆ ಬಗ್ಗೆ ಸಹೋದರ ಗೋಬಿಂದ್‌ಸಿಂಗ್‌ ಸಹ ಡಿಸೆಂಬರ್ 14ರಂದು ಪಂಜಾಬ್‌ ಪೊಲೀಸರಿಗೆ ದೂರು
ನೀಡಿದ್ದರು.

ಹಚ್ಚೆಯಿಂದ ಶವ ಗುರುತು: ಶವದ ಕೈ ಮೇಲೆ ‘ಸಿಖ್‌’ ಹೆಸರಿನ ಹಚ್ಚೆ ಗುರುತು ಇರುವುದನ್ನು ಗಮನಿಸಿದ್ದ ರಾಮನಗರ ಪೊಲೀಸರು, ಮೃತ ವ್ಯಕ್ತಿ ಪಂಜಾಬ್‌ ನಿವಾಸಿಯಾಗಿರಬಹುದು ಎಂದು ಅನುಮಾನಪಟ್ಟಿದ್ದರು. ಪಂಜಾಬ್‌ ಪೊಲೀಸರಿಗೂ ಫೋಟೊ ಕಳುಹಿಸಿಕೊಟ್ಟಿದ್ದರು.

ಅದನ್ನು ಗುರುತು ಹಿಡಿದ ಪಂಜಾಬ್‌ ಪೊಲೀಸರು, ರಾಜ್ಯಕ್ಕೆ ಬಂದು ಸಿಐಡಿ ಅಧಿಕಾರಿಗಳ ಸಹಾಯದಿಂದ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT