ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಾಂತರದಿಂದ ಯೋಗೇಶ್ವರ; ಚಿಕ್ಕಬಳ್ಳಾ‍ಪುರದಿಂದ ಬಚ್ಚೇಗೌಡ

Last Updated 18 ಮಾರ್ಚ್ 2019, 4:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಯಿತು.

ಗ್ರಾಮಾಂತರ ಕ್ಷೇತ್ರವನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ‍ಪ್ರಬಲ ಸ್ಪರ್ಧೆ ನೀಡಬೇಕಾದರೆ ಯೋಗೇಶ್ವರ ಅವರನ್ನೇ ಹುರಿಯಾಳುವನ್ನಾಗಿ ಮಾಡುವುದು ಸೂಕ್ತ. ಈ ಮೂಲಕ, ಡಿ.ಕೆ.ಶಿವಕುಮಾರ್ ಅವರ ಪ್ರಚಾರವನ್ನು ಕ್ಷೇತ್ರಕ್ಕೆ ಸೀಮಿತಗೊಳಿಸಬಹುದು ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಯೋಗೇಶ್ವರ ಸೋತಿದ್ದರು. ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಮೈತ್ರಿ ಸರ್ಕಾರವನ್ನು ಅತಂತ್ರಗೊಳಿಸುವ ‘ಆಪರೇಷನ್‌ ಕಮಲ’ ಕಾರ್ಯಾಚರಣೆಯಲ್ಲಿ ಅವರು ಮುಂಚೂಣಿಯಲ್ಲಿದ್ದರು. ‘ಕೇಂದ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ’ ಎಂದು ನಾಯಕರಿಗೆ ಮನವರಿಕೆ ಮಾಡಲು ಯತ್ನಿಸಿದ್ದರು. ಪ್ರಬಲ ಪೈಪೋಟಿ ನೀಡಬೇಕಾದರೆ ನೀವು ಸ್ಪರ್ಧೆ ಮಾಡಬೇಕು ಎಂದು ಯಡಿಯೂರಪ್ಪ ಹಾಗೂ ರಾಜ್ಯ ನಾಯಕರು ಸೂಚಿಸಿದ್ದರು. ‘ಚುನಾವಣಾ ವೆಚ್ಚ ಭರಿಸಿದರೆ ಮಾತ್ರ ಸ್ಪರ್ಧೆ ಮಾಡುತ್ತೇನೆ’ ಎಂದು ಯೋಗೇಶ್ವರ ಪ್ರತಿಕ್ರಿಯಿಸಿದ್ದರು. ಸಂಭಾವ್ಯರ ಪಟ್ಟಿಯಲ್ಲಿ ಅವರ ಜತೆಗೆ ಅಶ್ವತ್ಥನಾರಾಯಣ ಗೌಡ ಹೆಸರನ್ನು ಕಳುಹಿಸಲಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ನಾಲ್ಕರಲ್ಲಿ ಕಾಂಗ್ರೆಸ್‌, ಮೂರರಲ್ಲಿ ಜೆಡಿಎಸ್‌ ಹಾಗೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಳೆದ ಚುನಾವಣೆಯಲ್ಲಿ ಸುರೇಶ್ 2.31 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪ್ರಭಾಕರ ರೆಡ್ಡಿ ಶೇ 18 ಮತ ಗಳಿಸಿದ್ದರು.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿ.ಎನ್‌.ಬಚ್ಚೇಗೌಡ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಕಳೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಎಂ. ವೀರಪ್ಪ ಮೊಯಿಲಿ ಎದುರು 10 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್‌.ಡಿ.ಕುಮಾರಸ್ವಾಮಿ ಶೇ 27ರಷ್ಟು ಮತ ಪಡೆದಿದ್ದರು. ಮತ ವಿಭಜನೆಯಾಗಿ ವೀರಪ್ಪ ಮೊಯಲಿ ಅವರಿಗೆ ಅನುಕೂಲವಾಗಿತ್ತು ಎಂಬ ಮಾತು ಕೇಳಿ ಬಂದಿತ್ತು. ಮೈತ್ರಿಕೂಟದ ಒಪ್ಪಂದದ ಪ್ರಕಾರ, ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಮೈತ್ರಿಕೂಟ–ಬಿಜೆಪಿ ನಡುವೆ ನೇರ ಸ್ಪರ್ಧೆಗೆ ವೇದಿಕೆ ಸಜ್ಜಾಗಿದೆ. ಬಿಎಸ್‌ಪಿಯಿಂದ ಹಿರಿಯ ವಕೀಲ ಸಿ.ಎಸ್‌.ದ್ವಾರಕನಾಥ್‌, ಸಿಪಿಎಂನಿಂದ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಸ್ಪರ್ಧೆ ಮಾಡಲಿದ್ದಾರೆ.

ಬಚ್ಚೇಗೌಡರು ಪಕ್ಷದ ಅಭ್ಯರ್ಥಿ ಎಂದು ಯಡಿಯೂರಪ್ಪ ತಿಂಗಳ ಹಿಂದೆಯೇ ಘೋಷಿಸಿದ್ದು, ಬಚ್ಚೇಗೌಡರು ಬಿರುಸಿನ ‍ಪ್ರಚಾರ ಶುರು ಮಾಡಿದ್ದಾರೆ. ದೇವನಹಳ್ಳಿಯಲ್ಲಿ ಕಳೆದ ತಿಂಗಳು ನಡೆದ ಶಕ್ತಿ ಕೇಂದ್ರ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ನ ಐವರು, ಜೆಡಿಎಸ್‌ನ ಇಬ್ಬರು ಹಾಗೂ ಬಿಜೆಪಿಯ ಒಬ್ಬರು ಶಾಸಕರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT