ಈ ವರ್ಷದಿಂದಲೇ ಡಿಜಿಟಲ್ ಮೌಲ್ಯಮಾಪನ: ಕುಲಪತಿ ಕೆ.ಆರ್. ವೇಣುಗೋಪಾಲ ಹೇಳಿಕೆ

ಗುರುವಾರ , ಜೂಲೈ 18, 2019
29 °C
ಬೆಂಗಳೂರು ವಿಶ್ವವಿದ್ಯಾಲಯ

ಈ ವರ್ಷದಿಂದಲೇ ಡಿಜಿಟಲ್ ಮೌಲ್ಯಮಾಪನ: ಕುಲಪತಿ ಕೆ.ಆರ್. ವೇಣುಗೋಪಾಲ ಹೇಳಿಕೆ

Published:
Updated:
Prajavani

ಬೆಂಗಳೂರು: ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನ ಈ ವರ್ಷದಿಂದಲೇ ಆರಂಭವಾಗಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ ತಿಳಿಸಿದರು.

‘ಮೊದಲನೇ ವರ್ಷದ ‍‍ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮಾತ್ರ ಡಿಜಿಟಲ್‌ ಮೌಲ್ಯಮಾಪನ ಮಾಡಲಾಗುತ್ತಿದೆ. ಉಳಿದ ತರಗತಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಮೂಲಿನಂತೆ ಈಗಾಗಲೇ ಪೂರ್ಣಗೊಂಡಿದೆ’ ಎಂದು ಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಪರೀಕ್ಷೆ ಮುಗಿದು 15 ದಿನಗಳಾಗಿದ್ದು, ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಗುರುವಾರದಿಂದಲೇ ಆರಂಭವಾಗಲಿದೆ. ಪ್ರಥಮ ಪದವಿಯಲ್ಲಿ 30 ಸಾವಿರ ವಿದ್ಯಾರ್ಥಿಗಳಿದ್ದು, 1.50 ಲಕ್ಷ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್‌ ಪ್ರಕ್ರಿಯೆ 10 ದಿನಗಳಲ್ಲಿ ಮುಗಿಯಲಿದೆ’ ಎಂದರು.

‘ಮೌಲ್ಯಮಾಪನಕ್ಕೆ 10 ಕೇಂದ್ರಗಳನ್ನು ತೆರೆಯಲಾಗುವುದು. ಎಲ್ಲಕಡೆ 50ರಿಂದ 100 ಕಂಪ್ಯೂಟರ್‌ ಅಳವಡಿಸಲಾಗುತ್ತಿದೆ. ಒಬ್ಬ ಮೌಲ್ಯಮಾಪಕರಿಗೆ ಎರಡು ಮಾನಿಟರ್‌ ಇರಲಿದ್ದು, ಒಂದರಲ್ಲಿ ಪಿಡಿಎಫ್‌ ಮಾದರಿಯ ಉತ್ತರ ಪತ್ರಿಕೆ, ಇನ್ನೊಂದರಲ್ಲಿ ಪ್ರಶ್ನೆ ಸಂಖ್ಯೆ ಮುಂದೆ ಅಂಕಗಳನ್ನು ನಮೂದಿಸಲು ಅವಕಾಶ ಇದೆ’ ಎಂದರು.

‘ಈ ಹಿಂದಿನಂತೆ ಒಬ್ಬರು ದಿನಕ್ಕೆ 36 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ. ವಿದ್ಯಾರ್ಥಿಯ ನೋಂದಣಿ ಸಂಖ್ಯೆ ಒಳಗೊಂಡ ಮೊದಲ ಪುಟವನ್ನು ಬ್ಲರ್ ಮಾಡುವುದರಿಂದ ಉತ್ತರ ಪತ್ರಿಕೆ ಯಾರದ್ದು ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಅಕ್ರಮಕ್ಕೆ ಅವಕಾಶವೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೌಲ್ಯಮಾಪನ ಮುಗಿದ ನಂತರ ಅಂಕಗಳನ್ನು ಕ್ರೋಡೀಕರಿಸಿ ಫಲಿತಾಂಶ ಪ್ರಕಟಿಸಲು ಹೆಚ್ಚು ಕಾಲಾವಕಾಶ ಹಿಡಿಯುತ್ತಿತ್ತು. ಈಗ ಮೌಲ್ಯಮಾಪನ ಮುಗಿದ ಎರಡೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಒಂದು ತಿಂಗಳು ಮೊದಲೇ ಫಲಿತಾಂಶ ಪ್ರಕಟವಾಗಲಿದೆ’ ಎಂದರು.

ತರಬೇತಿಯನ್ನೇ ನೀಡಿಲ್ಲ: ‘ಡಿಜಿಟಲ್ ಮೌಲ್ಯಮಾಪನ ಮಾಡುವ ಉಪನ್ಯಾಸಕರಿಗೆ ತರಬೇತಿ ನೀಡಿಲ್ಲ, ಅದರ ಅಗತ್ಯವೂ ಇಲ್ಲ’ ಎಂದು ಕುಲಪತಿ ಸ್ಪಷ್ಟಪಡಿಸಿದರು.

‘ಕಂಪ್ಯೂಟರ್‌ನ ಒಂದು ಪರದೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದಬೇಕು. ಇನ್ನೊಂದು ಪರದೆಯಲ್ಲಿ ಅಂಕ ನಮೂದಿಸಬೇಕು. ಇಷ್ಟು ಸುಲಭದ ಕೆಲಸಕ್ಕೆ ತರಬೇತಿ ಬೇಕಿಲ್ಲ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

‘ಮೌಲ್ಯಮಾಪನ ಆರಂಭವಾಗುವ ದಿನ ಐದು ನಿಮಿಷದ ತರಬೇತಿಯೇ ಸಾಕಾಗುತ್ತದೆ. ಆರಂಭದಲ್ಲಿ ಪ್ರತಿ ಐದು ಮೌಲ್ಯಮಾಪಕರಿಗೆ ಒಬ್ಬ ಕಂಪ್ಯೂಟರ್ ಆಪರೇಟರ್‌ಗಳು ‌ಇರಲಿದ್ದಾರೆ ಹೀಗಾಗಿ ತೊಂದರೆ ಆಗುವುದಿಲ್ಲ’
ಎಂದರು.

‘21 ವರ್ಷಗಳಿಂದ ಮೌಲ್ಯಮಾಪನ ಮಾಡುತ್ತಿದ್ದೇನೆ. ಹೊಸ ಪೀಳಿಗೆಯವರಿಗೆ ಇದು ಸುಲಭವಾಗಬಹುದು. ನಮ್ಮಂತವರು ಏಕಾಏಕಿ ಡಿಜಿಟಲ್‌ ಮೌಲ್ಯಮಾಪನಕ್ಕೆ ಒಗ್ಗುವುದು ಕಷ್ಟ’ ಎಂದು ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯಪಟ್ಟರು.

‘ಡಿಜಿಟಲ್ ಮೌಲ್ಯಮಾಪನದ ಬಗ್ಗೆ ನಮಗೇನೂ ಗೊತ್ತಿಲ್ಲ. ಈ ಪದ್ಧತಿ ಜಾರಿಗೆ ತರುವ ಮೊದಲು ನಮಗೆ ತರಬೇತಿಯನ್ನಾದರೂ ನೀಡಬೇಕಿತ್ತು’ ಎಂದು ಹೇಳಿದರು.

ಮೌಲ್ಯಮಾಪಕರ ಸಂಭಾವನೆ ಹೆಚ್ಚಳ: ‘ಮೌಲ್ಯಮಾಪಕರ ಸಂಭಾವನೆ ಹೆಚ್ಚಳಕ್ಕೆ ಚಿಂತಿಸಲಾಗಿದ್ದು, ಎಷ್ಟು ಎಂಬುದನ್ನು ಸೆನೆಟ್ ಸಭೆಯಲ್ಲಿ ನಿರ್ಧರಿಸಲಾಗುವುದು’ ಎಂದು ಕುಲಪತಿ ಹೇಳಿದರು.

‘ದಿನಕ್ಕೆ 36 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಉ‍ಪನ್ಯಾಸಕರಿಗೆ ₹750 ಸಂಭಾವನೆ ನೀಡಲಾಗುತ್ತಿದೆ. 12 ವರ್ಷಗಳಿಂದ ಹೆಚ್ಚಳವಾಗಿಲ್ಲ’ ಎಂದು ತಿಳಿಸಿದರು.

ಯೋಗ, ಅಧ್ಯಾತ್ಮ ಕಡ್ಡಾಯ

‘ಯೋಗ, ಅಧ್ಯಾತ್ಮ, ಪರಿಸರ ಸರಂಕ್ಷಣೆ, ತ್ಯಾಜ್ಯ ನಿರ್ವಹಣೆ, ಆಪತ್ತು ನಿರ್ವಹಣೆ ಕುರಿತು ತರಗತಿಗಳನ್ನು ನಡೆಸುವುದು ಕಡ್ಡಾಯಗೊಳಿಸಲಾಗಿದೆ’ ಎಂದು ಕುಲಪತಿ ತಿಳಿಸಿದರು.

‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 270 ಕಾಲೇಜುಗಳಿದ್ದು, ಎಲ್ಲಾ ಪ್ರಾಂಶುಪಾಲರ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ಭಗವಾನ್ ಬುದ್ಧ, ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೋಶಗಳನ್ನು ತೆರೆಯಬೇಕು ಎಂದೂ ತಿಳಿಸಲಾಗಿದೆ ಎಂದರು.

‘ಈ ವಿಷಯಗಳ ಬಗ್ಗೆ ವಾರಕ್ಕೆ ಒಂದು ಗಂಟೆಯ ತರಗತಿಯನ್ನಾದರೂ ನಡೆಸಬೇಕು. ಸ್ಥಳೀಯ ಪರಿಶೀಲನಾ ಸಮಿತಿ ಭೇಟಿ ನೀಡುವ ವೇಳೆಗೆ ಈ ಎಲ್ಲವೂ ಪ್ರಗತಿಯಲ್ಲಿ ಇರಬೇಕೆಂದು ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ಆನ್‌ಲೈನ್‌ನಲ್ಲೇ ಅಂಕಪಟ್ಟಿ

‘ಈ ವರ್ಷದಿಂದ ಬೆಂಗಳೂರು ವಿಶ್ವವಿದ್ಯಾಲಯದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲೇ ಪಡೆದುಕೊಳ್ಳಬಹುದು’ ಎಂದು ಕೆ.ಆರ್. ವೇಣುಗೋಪಾಲ ತಿಳಿಸಿದರು.

2018–19ನೇ ಸಾಲಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ‘ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ’(ಎನ್‌ಎಡಿ) ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ಅಲ್ಲಿ ಆಧಾರ್‌ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡರೆ ಪಾಸ್‌ವರ್ಡ್‌ ಲಭ್ಯವಾಗುತ್ತದೆ ಎಂದು ವಿವರಿಸಿದರು.

‘2009ರಿಂದ ಈಚೆಗಿನ ಎಲ್ಲಾ ವಿದ್ಯಾರ್ಥಿಗಳ ಅಂಕಪಟ್ಟಿಯನ್ನೂ ಮುಂದಿನ ದಿನಗಳಲ್ಲಿ ಅಪ್‌ಲೋಡ್ ಮಾಡಲಾಗುವುದು. ಅಂಕಪಟ್ಟಿಯಲ್ಲಿ ದೋಷ, ಕಳವು, ದೃಢೀಕರಣ ಸಮಸ್ಯೆಗಳನ್ನು ಇದರಿಂದ ತಡೆಯಬಹುದು. ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ವಿಶ್ವವಿದ್ಯಾಲಯಕ್ಕೆ ಅಲೆಯುವುದು ತಪ್ಪಲಿದೆ. ರಾಜ್ಯದಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿರುವ ಮೊದಲ ವಿಶ್ವವಿದ್ಯಾಲಯ ನಮ್ಮದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !