100 ಹಳ್ಳಿಗಳಲ್ಲಿ ನೀರಿನ ಹಾಹಾಕಾರದ ಭೀತಿ

ಬುಧವಾರ, ಮೇ 22, 2019
32 °C
ಬೆಂಗಳೂರು ನಗರ ಜಿಲ್ಲೆ: 20 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ

100 ಹಳ್ಳಿಗಳಲ್ಲಿ ನೀರಿನ ಹಾಹಾಕಾರದ ಭೀತಿ

Published:
Updated:

ಬೆಂಗಳೂರು: ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗದಿದ್ದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸುಮಾರು 100 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಭೀತಿ ಉಂಟಾಗಿದೆ.

ನಾಲ್ಕು ತಾಲ್ಲೂಕುಗಳ 96 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಜಿಲ್ಲಾ ಪಂಚಾಯಿತಿ ನಿರ್ವಹಿಸುತ್ತಿದೆ. ಆನೇಕಲ್‌ ತಾಲ್ಲೂಕಿನ 14 ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ 6‌‌ ಗ್ರಾಮಗಳಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಆನೇಕಲ್ ತಾಲ್ಲೂಕಿನಲ್ಲಿ ಒಟ್ಟು 699 ಹಳ್ಳಿಗಳಿವೆ. ಇವುಗಳಿಗೆ ಯಾವುದೇ ನದಿ ಅಥವಾ ಕೆರೆಗಳಿಂದ ನೀರಿನ ಮೂಲ ಇಲ್ಲ. ಹೀಗಾಗಿ ಕೊಳವೆ ಬಾವಿಗಳನ್ನೇ ಜನ ನಂಬಿಕೊಂಡಿದ್ದಾರೆ.

‘ಮಳೆ ಕೈಕೊಟ್ಟರೆ ಅಂತರ್ಜಲ ಕುಸಿದು ಕುಡಿಯುವ ನೀರಿಗೆ ಹಾಹಾಕಾರ ಸ್ಥಿತಿ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಕಳೆದ ವರ್ಷವೂ 16 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗಿತ್ತು’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದ ರೈತರ ಜಮೀನಿನಿಂದ ಟ್ಯಾಂಕರ್‌ಗಳ ಮಾಲೀಕರು ನೀರು ತಂದು ಹಳ್ಳಿಗಳಿಗೆ ಪೂರೈಸುತ್ತಾರೆ. ವಾರಕ್ಕೊಮ್ಮೆ ನೀರಿನ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ಹೇಳಿದರು.

ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಟ್ಯಾಂಕರ್‌ ಮಾಲೀಕರ ಬಿಲ್ ಬಾಕಿ ಉಳಿಸಿಕೊಳ್ಳದೆ ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಪಾವತಿಸಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಗಳವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಅವರು ವಿವರಿಸಿದರು.

683 ಶುದ್ಧ ಕುಡಿಯುವ ನೀರಿನ ಘಟಕ

ನಾಲ್ಕು ತಾಲ್ಲೂಕುಗಳ ವ್ಯಾಪ್ತಿಯಲ್ಲಿ 683 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, 10 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ.

ಮೂರು ಘಟಕಗಳ ಸ್ಥಳಾಂತರ ಕಾರ್ಯ ನಡೆಯುತ್ತಿದ್ದು, ಇನ್ನುಳಿದ ಘಟಕಗಳಲ್ಲಿ ರಿಪೇರಿ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.
**
ಟ್ಯಾಂಕರ್‌ನಲ್ಲಿ ನೀರು ಪಡೆಯುತ್ತಿರುವ ಹಳ್ಳಿಗಳು,ತಾಲ್ಲೂಕು; ಗ್ರಾಮಗಳು
ಬೆಂಗಳೂರು ಉತ್ತರ; ರಾಜಾನುಕುಂಟೆ, ಅಜ್ಜಿಗಾನಹಳ್ಳಿ, ಚಿಕ್ಕಬಾಣಾವಾರ, ಹೊಸಹಳ್ಳಿ, ಗಂಟಿಗಾನಹಳ್ಳಿ, ರಾಮಗೊಂಡನಹಳ್ಳಿ

ಆನೇಕಲ್; ಕೆಂಪುದೊಮ್ಮಸಂದ್ರ, ಸೋಲೂರು, ವಣಕನಹಳ್ಳಿ, ತೆಲಗರಹಳ್ಳಿ, ಚನ್ನೇನ ಅಗ್ರಹಾರ, ಗೆರಟಿಗನಬೆಲೆ, ಎಸ್.ತಿಮ್ಮಸಂದ್ರ, ಇಂಡ್ಲವಾಡಿ, ತಿಮ್ಮಸಂದ್ರ, ಸರ್ಜಾಪುರದ 1,2,3 ಮತ್ತು 7ನೇ ವಾರ್ಡ್, ಬ್ಯಾಗಡದೇನಹಳ್ಳಿ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !