‘ಕಸ ವಿಲೇವಾರಿಗೆ ಫ್ರಾನ್ಸ್ ತಂತ್ರಜ್ಞಾನ’

7
ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ದುರ್ವಾಸನೆ: ಶಾಶ್ವತ ಪರಿಹಾರದ ಭರವಸೆ

‘ಕಸ ವಿಲೇವಾರಿಗೆ ಫ್ರಾನ್ಸ್ ತಂತ್ರಜ್ಞಾನ’

Published:
Updated:
Deccan Herald

ಬೆಳಗಾವಿ: ಬೆಂಗಳೂರಿನಲ್ಲಿ ಕಸದಿಂದ ವಿದ್ಯುತ್‌ ಉತ್ಪಾದಿಸಲು ಫ್ರಾನ್ಸ್ ತಂತ್ರಜ್ಞಾನವನ್ನು ಬಳಸಿ, ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಭರವಸೆ ನೀಡಿದರು.

ಪ್ರಶ್ನೋತ್ತರ ಅವಧಿಯಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರು, ತಮ್ಮ ಕ್ಷೇತ್ರ ವ್ಯಾಪ್ತಿಯ ಕನ್ನಹಳ್ಳಿ, ಸೀಗೇಹಳ್ಳಿ,
ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಸುಬ್ಬರಾಯನಪಾಳ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳಿಂದ ದುರ್ವಾಸನೆ ಬರುತ್ತಿದೆ. ಅಧಿಕಾರಕ್ಕೆ ಬಂದರೆ ಅವುಗಳನ್ನು ಸ್ಥಳಾಂತರಿಸುವುದಾಗಿ ಕುಮಾರಸ್ವಾಮಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಪಾಲನೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯ ಎಸ್.ಆರ್. ವಿಶ್ವನಾಥ್, ಯಶವಂತಪುರ ಕ್ಷೇತ್ರದ ಪಕ್ಕದಲ್ಲೇ ಇರುವ ಯಲಹಂಕ ಕ್ಷೇತ್ರಕ್ಕೂ ತ್ಯಾಜ್ಯ ವಿಲೇವಾರಿ ಘಟಕಗಳ ದುರ್ವಾಸನೆ ಬರುತ್ತಿದೆ ಎಂದು ಹೇಳಿದರು. ಅದಕ್ಕೆ ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಮತ್ತು ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಧ್ವನಿಗೂಡಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು, ತಮ್ಮ ಕ್ಷೇತ್ರದಲ್ಲೂ ಇದೇ ಸಮಸ್ಯೆ ಇದೆ ಎಂದು ಹೇಳಿದಾಗ, ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರು, ‘ಇನ್ನು ಮುಂದೆ ಯಾವುದೋ ಒಂದು ಕ್ಷೇತ್ರಕ್ಕೆ ಮಾತ್ರ ಕಸವನ್ನು ಹಾಕಬೇಡಿ. ಎಲ್ಲ ಕ್ಷೇತ್ರಗಳಿಗೂ ಸಮನಾಗಿ ಹಂಚಿ ಬಿಡಿ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಚರ್ಚೆಗೆ ಉತ್ತರಿಸಿದ ಸಚಿವ ಜಿ. ಪರಮೇಶ್ವರ ಅವರು, ಕಸವನ್ನು ಒಂದು ಕಡೆ ದಾಸ್ತಾನು ಮಾಡುವ ಬದಲಾಗಿ ಅದನ್ನು ವಿದ್ಯುತ್‌ ಆಗಿ ಪರಿವರ್ತಿಸಲು ಒತ್ತು ನೀಡಲಾಗುವುದು. ಎಲ್ಲರ ಸಹಕಾರ ಸಿಕ್ಕರೆ ಅದನ್ನು ಜಾರಿಗೆ ತಂದು ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದರು.

ಕಸ ಗುತ್ತಿಗೆಯ ಅಕ್ರಮ: ಎಸಿಬಿ ತನಿಖೆಗೆ

ಬೆಳಗಾವಿ: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಜೆ.ಪಿ. ಉದ್ಯಾನ ವಾರ್ಡ್ ನಂ.17ರಲ್ಲಿ ಕಸದ ಗುತ್ತಿಗೆ ನಿರ್ವಹಣೆಯಲ್ಲಿ ನಡೆದಿರುವ ಅಕ್ರಮ ವಿರುದ್ಧ ಎಸಿಬಿ ತನಿಖೆ ನಡೆಸುತ್ತಿದ್ದು, ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಮುನಿರತ್ನ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಪರಮೇಶ್ವರ, ಗುತ್ತಿಗೆ ನಿರ್ವಹಣೆಯಲ್ಲಿ ಅಕ್ರಮ ನಡೆದಿರುವುದನ್ನು ಶಾಸಕರೇ ಪರಿಶೀಲನೆ ಮಾಡಿ ಬಯಲಿಗೆ ತಂದಿದ್ದಾರೆ. ಬಿಬಿಎಂಪಿ ಆಯುಕ್ತರು, ಜಂಟಿ ಆಯುಕ್ತರು ಪರಿಶೀಲನೆ ನಡೆಸಿ ಅವ್ಯವಹಾರವನ್ನು ಪತ್ತೆ ಹಚ್ಚಿದ್ದಾರೆ’ ಎಂದರು.

‘ಈ ಸಂಬಂಧ ಜಂಟಿ ಆಯುಕ್ತರು, ಸೂಪರಿಂಟೆಂಡಿಂಗ್‌ ಎಂಜಿನಿಯರ್‌, ಕಾರ್ಯಪಾಲಕ ಎಂಜಿನಿಯರ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಹಿರಿಯ ಆರೋಗ್ಯ ಇನ್‌ಸ್ಪೆಕ್ಟರ್‌ ಜವಾಬ್ದಾರರು ಎಂದು ಆಯುಕ್ತರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಗುತ್ತಿಗೆದಾರರಾದ ಓಂ ಎಸ್‍ಎಲ್‍ವಿ ಕನ್‍ಸ್ಟ್ರಕ್ಷನ್ ಮಾಲೀಕರಾದ ವೆಂಕಟೇಶ್ ವಿರುದ್ಧ ಯಶಂವತಪುರ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಿಚಾರಣೆಯನ್ನು ಹಸ್ತಾಂತರಿಸಲಾಗಿದೆ’ ಎಂದು ಹೇಳಿದರು.

‘ಬಿಬಿಎಂಪಿ ಸದಸ್ಯರ ಶಿಫಾರಸು ಆಧರಿಸಿ ತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಿರುವುದಾಗಿ ಸರ್ಕಾರ ಉತ್ತರಿಸಿದೆ. ಆದರೆ, ಶಿಫಾರಸು ಮಾಡಿದ ದಾಖಲೆಗಳಿಲ್ಲ ಎನ್ನಲಾಗುತ್ತಿದೆ. ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಬಿಬಿಎಂಪಿ ಸದಸ್ಯರ ವಿರುದ್ಧ ಕೆಎಂಸಿ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಅವಕಾಶವಿದೆ’ ಎಂದು ಮುನಿರತ್ನ ವಾದಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಪರಮೇಶ್ವರ, ‘ಕೆಎಂಸಿ ಕಾಯ್ದೆಯಲ್ಲಿ ಸದಸ್ಯರ ವಿರುದ್ಧ ಕ್ರಮ ಜರುಗಿಸಲು ಅವಕಾಶ ಇಲ್ಲ ಎಂದು ನಾನು ಹೇಳಿದ್ದೇನೆ. ಆದರೆ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅವಕಾಶ ಇದೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರನ್ನು ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ 310 ಗಣ್ಯರಿಗೆ ಭದ್ರತೆ

ಬೆಳಗಾವಿ: ರಾಜ್ಯದಲ್ಲಿ ಸಂಸದರು, ಶಾಸಕರು ಸೇರಿದಂತೆ ಒಟ್ಟು 310 ಗಣ್ಯ ವ್ಯಕ್ತಿಗಳಿಗೆ ಅಂಗರಕ್ಷಕರ ಭದ್ರತೆ ಒದಗಿಸಲಾಗಿದೆ.

ಶಾಸಕ ಗೂಳಿಹಟ್ಟಿ ಶೇಖರ್‌ ಕೇಳಿದ ಪ್ರಶ್ನೆಗೆ, ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಈ ಉತ್ತರ ನೀಡಿದ್ದಾರೆ.

ಅಂಗರಕ್ಷಕರ ಭದ್ರತೆ ಪುನರ್‌ ಪರಿಶೀಲನಾ ಸಮಿತಿ 2017ರ ನ.30ರಂದು ಕೈಗೊಂಡ ನಿರ್ಣಯದಂತೆ ಎಷ್ಟು ಉದ್ಯಮಿಗಳಿಗೆ, ಸ್ವಾಮೀಜಿಗಳಿಗೆ, ಗಣ್ಯ ವ್ಯಕ್ತಿಗಳಿಗೆ ಮತ್ತು ಇತರ ವ್ಯಕ್ತಿಗಳಿಗೆ ಈ ಸೌಲಭ್ಯ ಒದಗಿಸಲಾಗಿದೆ ಎಂಬ ಪ್ರಶ್ನೆಗೆ, ರಕ್ಷಣೆ ನೀಡಿದ ವ್ಯಕ್ತಿಗಳ ಭದ್ರತಾ ಹಿತದೃಷ್ಟಿಯಿಂದ ಈ ವಿಷಯದಲ್ಲಿ ಗೋಪ್ಯತೆ ಕಾಪಾಡಲಾಗಿದೆ ಎಂದೂ ಉತ್ತರದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !