ಸೋಮವಾರ, ಆಗಸ್ಟ್ 26, 2019
27 °C
2020ರ ಫೆಬ್ರುವರಿಯವರೆಗೆ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ನಿರಾತಂಕ

ಇನ್ನೇನು ಬೆಂಗಳೂರಿಗಿಲ್ಲ ನೀರಿನ ಚಿಂತೆ

Published:
Updated:

ಬೆಂಗಳೂರು: ಉತ್ತಮ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ನಗರದ ಜನರ ನೀರಿನ ಚಿಂತೆಯನ್ನು ದೂರ ಮಾಡಿವೆ. ಮುಂದಿನ ವರ್ಷದ ಜನವರಿ– ಫೆಬ್ರುವರಿಯವರೆಗೆ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಾರದು. 

ನಗರಕ್ಕೆ ನೀರು ಪೂರೈಸುವ ಜಲಾಶಯಗಳ ಪೈಕಿ, ಕೃಷ್ಣರಾಜ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹಾರಂಗಿ, ಕಬಿನಿ ಮತ್ತು ಹೇಮಾವತಿ ಜಲಾಶಯ ಬಹುತೇಕ ತುಂಬಿವೆ. ಅಲ್ಲದೆ, ಈ ಎಲ್ಲ ಜಲಾಶಯಗಳು ಕಳೆದ ವರ್ಷ ಆ.15ಕ್ಕೆ ಇದ್ದುದಕ್ಕಿಂತ ಹೆಚ್ಚು ಪ್ರಮಾಣದ ನೀರುದುಂಬಿಕೊಂಡು ಕಂಗೊಳಿಸುತ್ತಿವೆ.

ಮೊದಲೆರಡು ತಿಂಗಳಲ್ಲಿ (ಜೂನ್‌–ಜುಲೈ) ಮುಂಗಾರು ಕೈಕೊಟ್ಟ ಕಾರಣ, ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳ ನೀರು ಕನಿಷ್ಠ ಮಟ್ಟ ತಲುಪಿತ್ತು. ಹೀಗಾಗಿ, ಬೆಂಗಳೂರು ಈ ವರ್ಷ ತೀವ್ರ ನೀರಿನ ಕೊರತೆ ಎದುರಿಸುವ ಆತಂಕ ಎದುರಾಗಿತ್ತು. ಉತ್ತಮ ಮಳೆಯಾಗದಿದ್ದರೆ ಈ ಬಾರಿ ಮಹಾನಗರಕ್ಕೆ ನೀರು ಪೂರೈಕೆ ದೊಡ್ಡ ಸವಾಲಾಗಲಿದೆ ಎಂದು ಜಲಮಂಡಳಿಯ ಅಧಿಕಾರಿಗಳೂ ಹೇಳಿದ್ದರು. 

ಬೆಂಗಳೂರು ಕುಡಿಯುವ ನೀರಿಗೆ ಪ್ರಮುಖವಾಗಿ ಅವಲಂಬಿಸಿರುವುದು ಕೆಆರ್‌ಎಸ್‌ ಅನ್ನು. ಕಾವೇರಿ ಜಲಾನಯನ ಪ್ರದೇಶದಿಂದ ಮಹಾನಗರಕ್ಕೆ ದಿನಕ್ಕೆ 145 ಕೋಟಿ ಲೀಟರ್‌ ನೀರು ಪೂರೈಕೆಯಾಗುತ್ತದೆ. ಇತ್ತೀಚೆಗೆ, ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಪೈಕಿ 40 ಗ್ರಾಮಗಳಿಗೆ ಜಲಮಂಡಳಿಯು ನೀರು ಸರಬರಾಜು ಪ್ರಾರಂಭಿಸಿರುವುದರಿಂದ ಬೇಡಿಕೆ ಇನ್ನೂ ಹೆಚ್ಚಾಗಿತ್ತು. 

‘ಕೊಡಗು ಮತ್ತು ಮಲೆನಾಡಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಲಾಶಯಗಳು ಭರ್ತಿಯಾಗಿವೆ. ಕಾವೇರಿ ನದಿಯಿಂದ 1.5 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲಾಗುವುದು’ ಎಂದು ಮಂಡಳಿಯ ಅಧಿಕಾರಿಗಳು ಹೇಳುತ್ತಾರೆ. 

Post Comments (+)