ಕೆಐಎಎಲ್‌ನಲ್ಲಿ ಬಾಂಗ್ಲಾ ಪ್ರಜೆ ಸೆರೆ

ಶುಕ್ರವಾರ, ಮೇ 24, 2019
28 °C

ಕೆಐಎಎಲ್‌ನಲ್ಲಿ ಬಾಂಗ್ಲಾ ಪ್ರಜೆ ಸೆರೆ

Published:
Updated:

ಬೆಂಗಳೂರು: ಎಂಟು ವರ್ಷಗಳಿಂದ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಅಬ್ದುಲ್ ಹಲೀಂ ಅಲಿಯಾಸ್ ಮೊಹಮದ್ ಶೇಖ್ (47) ಎಂಬುವರನ್ನು ಕೆಐಎಎಲ್ ವಲಸೆ ವಿಭಾಗದ ಅಧಿಕಾರಿಗಳು ಹಿಡಿದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.

ಬಾಂಗ್ಲಾದೇಶದ ಲೋಹಗಂಜ್‌ನ ಹಲೀಂ, ಎಂಟು ವರ್ಷಗಳಿಂದ ಎಚ್‌ಎಸ್‌ಆರ್ ಲೇಔಟ್ ಸಮೀಪದ ಪುಟ್ಟರಾಜು ಬಡಾವಣೆಯಲ್ಲಿ ನೆಲೆಸಿದ್ದರು. ಏ.20ರಂದು ಅವರು ‘ಇಂಡಿಗೊ ಎ–1993’ ವಿಮಾನದಲ್ಲಿ ದುಬೈಗೆ ಹೊರಟಿದ್ದಾಗ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

‘ಹಲೀಂ ಅವರು ಇಮಿಗ್ರೇಷನ್ ಕ್ಲಿಯರೆನ್ಸ್‌ಗಾಗಿ ಪಾಸ್‌ಪೋರ್ಟ್ ಹಾಗೂ ಚುನಾವಣಾ ಗುರುತಿನ ಚೀಟಿಗಳನ್ನು ಕೊಟ್ಟರು. ಅವುಗಳನ್ನು ಪರಿಶೀಲಿಸುತ್ತಿದ್ದಾಗ ಆ ಪ್ರಕ್ರಿಯೆಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರ ಈ ನಡವಳಿಕೆಯಿಂದ ಸಂಶಯ ಬಂತು. ಕೊಠಡಿಗೆ ಕರೆದೊಯ್ದು ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಅಕ್ರಮ ಬಯಲಾಯಿತು’ ಎಂದು ವಲಸೆ ವಿಭಾಗದ ಅಧಿಕಾರಿ ಪಿ.ಜಯೇಶ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

‘ವ್ಯಾಪಾರದ ಸಲುವಾಗಿ 2004ರಲ್ಲಿ ಭಾರತಕ್ಕೆ ಬಂದಿದ್ದ ಹಲೀಂ, ಮೊದಲು ದೆಹಲಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಆ ನಂತರ ನಗರಕ್ಕೆ ಬಂದು ನೆಲೆಸಿದ್ದರು. ಇಲ್ಲಿ ಏಜೆಂಟ್‌ ಒಬ್ಬನ ಮೂಲಕ ಪಾಸ್‌ಪೋರ್ಟ್ ಮಾಡಿಸಿಕೊಂಡು, ಆಗಾಗ್ಗೆ ವಿದೇಶ ಪ್ರಯಾಣ ಮಾಡುತ್ತಿದ್ದರು. ಆ ಏಜೆಂಟ್ ಪತ್ತೆಗೆ ಬಲೆ ಬೀಸಿದ್ದೇವೆ’ ಎಂದು ಕೆಐಎಎಲ್ ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !