ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಪರಿಷ್ಕರಣೆಗೆ ಆಗ್ರಹ

ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಪ್ರತಿಭಟನೆ
Last Updated 18 ಜನವರಿ 2019, 11:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಿಂಚಣಿ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಪಿಂಚಣಿದಾರರ ಸಮನ್ವಯ ಸಮಿತಿ, ನಿವೃತ್ತರ ಸಂಘಟನೆ ಹಾಗೂ ಅಖಿಲ ಭಾರತ ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಸಂಘದ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸೌಲಭ್ಯದ ವಿಷಯ ಬಂದಾಗ ನಿವೃತ್ತ ಬ್ಯಾಂಕ್ ಉದ್ಯೋಗಿಗಳು ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಈ ವಿಷಯದಲ್ಲಿ ನ್ಯಾಯ ಪಡೆಯಲು ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಪ್ರಧಾನಿ ಹಾಗೂ ವಿತ್ತ ಸಚಿವರ ಗಮನ ಸೆಳೆಯಲಾಗಿದ್ದರೂ ಯಾವುದೇ ಪ್ರಯೋಜನಾ ಆಗಿಲ್ಲ. 30–35 ವರ್ಷಗಳ ಕಾಲ ಕೆಲಸ ಮಾಡಿದ ಉದ್ಯೋಗಿಗಳಿಗೆ ಇದರಿಂದ ನೋವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಮುಖಂಡ ಕಿಶೋರ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕ್‌ಗಳ ಪಾತ್ರ ಮಹತ್ವದ್ದು, ಅಂತಹ ಬ್ಯಾಂಕ್‌ಗಳಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು ಇಂದು ಬೀದಿಗೆ ಬರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. 10 ವರ್ಷಗಳ ಹಿಂದೆ ನಿವೃತ್ತನಾದ ಪ್ರಧಾನ ವ್ಯವಸ್ಥಾಪಕನ ಪಿಂಚಣಿ, ಈಗ ನಿವೃತ್ತಿ ಹೊಂದಿದ ಸಾಮಾನ್ಯ ನೌಕರನ ಪಿಂಚಣಿಗೆ ಸಮನಾಗಿದೆ. ಕೇಂದ್ರ ಸರ್ಕಾರಿ ಸೌಕರರ ವೇತನ ಮತ್ತು ಪಿಂಚಣಿ ಆಗಾಗ್ಗೆ ಪರಿಷ್ಕರಣೆಯಾಗುತ್ತದೆ. ಅದೇ ರೀತಿ ಬ್ಯಾಂಕ್ ನಿವೃತ್ತ ನೌಕರರ ಪಿಂಚಣಿಯನ್ನೂ ಪರಿಷ್ಕರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಭಾರತೀಯ ಬ್ಯಾಂಕ್ ಸಂಘಟನೆ ಹಾಗೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. 2000ದ ವರೆಗೆ ಬ್ಯಾಂಕ್ ನಿವೃತ್ತ ಉದ್ಯೋಗಿಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಯಾವಾಗ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ಬಂತೋ ಆಗಿನಿಂದ ಸಂಖ್ಯೆ ಗಣನೀಯವಾಗಿ ಏರಿಕೆಯಾಯಿತು. ಈಗ 9 ಲಕ್ಷ ಬ್ಯಾಂಕ್ ಉದ್ಯೋಗಿಗಳಿದ್ದರೆ, ನಿವೃತ್ತರ ಸಂಖ್ಯೆ 6 ಲಕ್ಷ. ಈ ಕುಟುಂಬಗಳ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು ಎಂದರು.

ರಾಷ್ಟ್ರೀಯ ವ್ಯಾಜ್ಯ ನೀತಿಗೆ ಸರ್ಕಾರ ಬದ್ಧವಾಗಿರಬೇಕು. ಗ್ರಾಚ್ಯುಟಿ ಮೊತ್ತದ ಮಿತಿಯನನ್ನು ₹20 ಲಕ್ಷಕ್ಕೆ ಏರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮುಖಂಡರಾದ ಝಳಕಿ, ಮಲ್ಲಿಕಾರ್ಜುನ ಇದ್ದರು. ಯೂನಿಯನ್ ಬ್ಯಾಂಕ್‌ನಿಂದ ತಹಶೀಲ್ದಾರ್ ಕಚೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT