ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿಲ್ಲದ ಉಗ್ರಾಣದಲ್ಲಿ ಭಾಷಾಂತರ ಕಚೇರಿ!

ಕನ್ನಡ ಕಟ್ಟುವವರ ದನಿ ಕೇಳುವವರಿಲ್ಲ: ಮೂಲಸೌಕರ್ಯಗಳಿಗಾಗಿ ಪರಿತಪಿಸುತ್ತಿದೆ ನಿರ್ದೇಶನಾಲಯ
Last Updated 25 ಮಾರ್ಚ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸರ್‌ ಎಂ.ವಿಶ್ವೇಶ್ವರಯ್ಯನವರ ಕಾಲದಲ್ಲಿ ನಿರ್ಮಾಣವಾಗಿರುವ ಪ್ರತಿಷ್ಠಿತ ಕಟ್ಟಡ ಅದು. ಕಟ್ಟಡದ ಒಂದು ಭಾಗದಲ್ಲಿ ಗಾಳಿಯೂ ಇಲ್ಲ, ಬೆಳಕೂ ಇಲ್ಲ. ಅಷ್ಟೇ ಏಕೆ, ಅಲ್ಲಿ ಕೆಲಸಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶೌಚಾಲಯವೂ ಇಲ್ಲ!

ಕನ್ನಡ ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಭಾಷಾಂತರ ನಿರ್ದೇಶನಾಲಯ,ಅಂತಹ ವಾತಾವರಣದಲ್ಲೇ ಕಾರ್ಯ ನಿರ್ವಹಿಸುತ್ತಿದೆ.

ಡಾ.ಅಂಬೇಡ್ಕರ್‌ ವೀದಿಯ ವಿಶ್ವೇಶ್ವರಯ್ಯ ಕೇಂದ್ರದ ಚಿಕ್ಕಗೋಪುರದ ಪೋಡಿಯಂ ಬ್ಲಾಕ್‌ನಲ್ಲಿದೆ ನಿರ್ದೇಶನಾಲಯದ ಮುಖ್ಯ ಕಚೇರಿ. ಅಂದಾಜು100 ಚದರ ಮೀಟರ್‌ ಪ್ರದೇಶದಲ್ಲಿ ಅದು ಪಸರಿಸಿದ್ದು,ವಿಶ್ವೇಶ್ವರಯ್ಯನವರ ಕಾಲದಲ್ಲಿ ಇದು ದಾಸ್ತಾನು ಕೇಂದ್ರವಾಗಿ ಬಳಕೆಯಾಗುತ್ತಿತ್ತು.

2011ರಲ್ಲಿ ರಾಜ್ಯ ಸರ್ಕಾರಭಾಷಾಂತರ ನಿರ್ದೇಶನಾಲಯಕ್ಕೆ ಇಲ್ಲಿ ಸ್ಥಳಾವಕಾಶ ನೀಡಿತು. ಆದರೆ, ಈ ಜಾಗ ತೀರ ಇಕ್ಕಟ್ಟಾಗಿದ್ದು,ಕಚೇರಿಯು (ಚಿಕ್ಕ ಗೋಪುರದಲ್ಲಿ ಮೂರು ಕಡೆ ಹಾಗೂ ಪೋಡಿಯಂ ಬ್ಲಾಕ್‌– ಮುಖ್ಯ ಕಚೇರಿ) ಒಟ್ಟು ನಾಲ್ಕು ಕಡೆ ಹರಿದು ಹಂಚಿ ಹೋಗಿದೆ.ಇಲ್ಲಿ, ನಿರ್ದೇಶಕರ ಕೊಠಡಿ (ಒಂದು ಕಿಟಕಿ) ಹೊರತುಪಡಿಸಿ ಬೇರೆಲ್ಲೂ ಕಿಟಕಿಗಳಿಲ್ಲ.

‘ಭಾಷಾಂತರ ನಿರ್ದೇಶನಾಲಯ,ಪಿಡಬ್ಲೂಡಿ ಅಧಿಕಾರಿಗಳು, ಸ್ವಚ್ಛತಾ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಪೋಡಿಯಂ ಬ್ಲಾಕ್‌ ಪ್ರವೇಶ ದ್ವಾರದ ಬಳಿಯ ಶೌಚಾಲಯವೇ ಗತಿ. ಕಚೇರಿಗಳ ಕೆಲಸಕ್ಕಾಗಿ ನಿತ್ಯ ಸಾವಿರಾರು ಮಂದಿ ಓಡಾಡುವ ಈ ಜಾಗದಲ್ಲಿ ಸ್ತ್ರೀ ಹಾಗೂ ಪುರುಷರಿಗೆ ಇರುವುದು ಒಂದೊಂದೇ ಶೌಚಾಲಯ. ಕೆಲವು ಬಾರಿ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ’ ಎಂದು ಕಚೇರಿ ಕೆಲಸಕ್ಕಾಗಿ ಆಗಾಗ ಬರುವ ಸಾರ್ವಜನಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಸ್ಯೆಗಳನ್ನು ಬಗೆಹರಿಸುವಂತೆ ಆರೇಳು ವರ್ಷಗಳಿಂದ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತಲೇ ಬಂದಿರುವ ಭಾಷಾಂತರ ನಿರ್ದೇಶನಾಲಯವು ಫೆಬ್ರುವರಿ 7ರಂದು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಕೆ.ದ್ವಾರಕಾನಾಥ್‌ ಬಾಬು ಅವರಿಗೆ ಪತ್ರ ಬರೆದಿದೆ.ಗ್ರೂಪ್‌ ‘ಎ’ ಹಾಗೂ ‘ಬಿ’ ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ ಹಾಗೂ ಸಭಾ ಕೊಠಡಿ ನೀಡಬೇಕು ಎಂದೂ ಒತ್ತಾಯಿಸಿದೆ.

ಭಾಷಾಂತರ ನಿರ್ದೇಶನಾಲಯದೊಂದಿಗೆ ರಾಜಾಭಾಷಾ (ವಿಧಾಯೀ) ಆಯೋಗವೂ ಕಾರ್ಯನಿರ್ವಹಿಸುತ್ತಿದ್ದು, ಭಾಷಾಂತರ, ಪರಿಷ್ಕರಣೆ, ತಾಳೆ ನೋಡುವುದು, ಬೆರಳಚ್ಚು ಕಾರ್ಯ, ಕರಡಚ್ಚು ಪರಿಶೀಲನೆ... ಇವೆಲ್ಲವೂ ಒಂದೇ ಕಡೆ ನಡೆಯಬೇಕು. ಎಲ್ಲ ಭಾಷಾಂತರಕಾರರು ಒಂದೇ ಕಡೆ ಕೆಲಸ ಮಾಡಬೇಕು. ಹಾಗಾಗಿ, ಶೀಘ್ರವೇ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ನಿರ್ದೇಶನಾಲಯ ಬೇಡಿಕೆ ಇಟ್ಟಿದೆ.

‘ಕಚೇರಿ ಇಲ್ಲಿಗೆ ಸ್ಥಳಾಂತರವಾಗುವ ಮುನ್ನ ಕಾವೇರಿ ಭವನದಲ್ಲಿತ್ತು. ಅಲ್ಲಿ ಮೂಲಸೌಕರ್ಯಗಳಿಗೆ ಎಳ್ಳಷ್ಟೂ ಕೊರತೆಗಳಿರಲಿಲ್ಲ. ಕೆಲವು ವರ್ಷಗಳ ನಂತರ ಕಚೇರಿಯನ್ನು ಎಂಎಸ್‌ ಬಿಲ್ಡಿಂಗ್‌ಗೆ ಸ್ಥಳಾಂತರಿಸಲಾಯಿತು. ಅಲ್ಲಿ, ಕಟ್ಟಡ ಅಷ್ಟೊಂದು ವಿಸ್ತಾರವಾಗಿರಲಿಲ್ಲ. ಆದರೂ ಹೇಗೋ ಕೆಲಸ ಮಾಡಿಕೊಂಡಿದ್ದೆವು. 2011ರಲ್ಲಿ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಈ ತನಕ ಮೂಲಸೌಕರ್ಯಗಳಿಗಾಗಿ ಅಧಿಕಾರಿಗಳನ್ನು ಗೋಗರೆಯುತ್ತಲೇ ಇದ್ದೇವೆ. ಆದರೆ, ಈ ತನಕ ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ನಿರ್ದೇಶನಾಲಯದ ಹಿರಿಯ ಸಿಬ್ಬಂದಿಯೊಬ್ಬರು ದೂರಿದರು.

‘ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಮೇಲಧಿಕಾರಿಗಳು ಮೀನ–ಮೇಷ ಎಣಿಸುತ್ತಿದ್ದಾರೆ. ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿರುವವರನ್ನೇ ಸರ್ಕಾರ ಕಡೆಗಣಿಸಿದರೆ ಹೇಗೆ’ ಎಂದು ಇನ್ನೊಬ್ಬ ಸಿಬ್ಬಂದಿ ಪ್ರಶ್ನಿಸಿದರು‌.

‘ಕಚೇರಿಯಲ್ಲಿ ಯಾವುದಾದರೂ ಸಭೆ, ಸಮಾರಂಭ ನಡೆಸಬೇಕೆಂದರೆ ಸೌಕರ್ಯಗಳಿಲ್ಲ. ಉತ್ತಮ ಗಾಳಿ ವ್ಯವಸ್ಥೆಯೂ ಇಲ್ಲ. ಫ್ಯಾನ್‌ಗಳಿದ್ದರೂ ಪ್ರಯೋಜನವಿಲ್ಲ. ಸದ್ಯ ಬೇಸಿಗೆ ಇರುವುದರಿಂದ ನಿತ್ಯ ಬಿಸಿಲ ಝಳದಲ್ಲೇ ಬೇಯುವಂತಾಗಿದೆ. ಬಾಯಾರಿದರೆ ನೀರಿಲ್ಲ, ಶೌಚಾಲಯವೂ ಇಲ್ಲ. ಒಟ್ಟಾರೆ ನೆಮ್ಮದಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಸಂಕಟ ಹೇಳಿಕೊಂಡರು.

* ಮೂಲಸೌಕರ್ಯ ಒದಗಿಸುವಂತೆ ಉಪಮುಖ್ಯಮಂತ್ರಿ ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ

- ಡಿ.ಸ್ಮಿತಾ, ಪ್ರಭಾರಿ ನಿರ್ದೇಶಕಿ, ಭಾಷಾಂತರ ನಿರ್ದೇಶನಾಲಯ

* ಸ್ಥಳಾವಕಾಶ ನೀಡಲು ಸದ್ಯ ಎಲ್ಲಿಯೂ ಜಾಗವಿಲ್ಲ. ಅವರು ಕೇಳಿದ ತಕ್ಷಣ ನೀಡಲು ಜಾಗ ಇರಬೇಕಲ್ಲ. ಸ್ಥಳಾವಕಾಶ ಇಲ್ಲ ಎಂದು ನಿರ್ದೇಶನಾಲಯಕ್ಕೆ ತಿಳಿಸಲಾಗಿದೆ

- ನಾಗರಾಜ್‌, ಡಿಪಿಆರ್‌ನ ಉಪ ಕಾರ್ಯದರ್ಶಿ (ಕಾರ್ಯನಿರ್ವಾಹಕ)

ಏನೀ ಅವ್ಯವಸ್ಥೆ!

*ವಿದ್ಯುತ್‌ ಕೈಕೊಟ್ಟರೆ ಬೆಳಕು, ಗಾಳಿಯಿಲ್ಲದೆ ಉಸಿರುಗಟ್ಟುವ ಸ್ಥಿತಿ

*ನಿರ್ದೇಶಕರ ಕಚೇರಿಯಲ್ಲಿ ಮಾತ್ರ ಏರ್‌ ಕೂಲರ್‌

*ಸೂಕ್ತ ಗ್ರಂಥಾಲಯ ವ್ಯವಸ್ಥೆ ಇಲ್ಲ

*ಗರ್ಭಿಣಿ, ಅಂಗವಿಕಲಕರ ನೆರವಿಗೆ ಲಿಫ್ಟ್‌ಗಳಿಲ್ಲ , ಇಲಿ, ಸೊಳ್ಳೆಗಳ ಕಾಟ

*ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ

‘ಹೊಸ ಸಿಬ್ಬಂದಿಗೂ ಕೂರಲು ಜಾಗವಿಲ್ಲ’

‘ನಿರ್ದೇಶನಾಲಯದಲ್ಲಿ ಖಾಲಿ ಇರುವ 32 ವಿವಿಧ ಹುದ್ದೆಗಳಿಗೆ ಭರ್ತಿ ಕಾರ್ಯ ನಡೆಯಬೇಕಿದೆ. ಚುನಾವಣೆ ಬಳಿಕವೇ ಈ ಪ್ರಕ್ರಿಯೆ ನಡೆಯಲಿದೆ. ಈ ಪೈಕಿ 17 ಜನ ಭಾಷಾಂತರಕಾರರನ್ನು ನೇಮಕ ಮಾಡಿಕೊಳ್ಳಬೇಕಿದೆ. ಹೊಸ ಸಿಬ್ಬಂದಿ ಬಂದರೆ ಅವರಿಗೆ ಕೂರಲು ಇಲ್ಲಿ ಸ್ಥಳಾವಕಾಶ ಇಲ್ಲದಂತಾಗಿದೆ’ ಎಂದು ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

‘ನಿರ್ದೇಶನಾಲಯ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ ಸೂಕ್ತ ಸ್ಥಳಾವಕಾಶ ಹಾಗೂ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT