ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎ’ ಖಾತೆ: ವಾರದೊಳಗೆ ಸುತ್ತೋಲೆ

ನಿವೇಶನ ದಾಖಲೆ ಗೊಂದಲಗಳಿಗೆ ತೆರೆ ಎಳೆದ ಬಿಬಿಎಂಪಿ ಆಯುಕ್ತ
Last Updated 22 ಫೆಬ್ರುವರಿ 2019, 20:11 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ನಿವೇಶನಗಳಿಗೆ ‘ಎ’ ಖಾತೆ ನೀಡುವ ಸಲುವಾಗಿ ಒಂದು ವಾರದೊಳಗೆ ಸುತ್ತೋಲೆ ಹೊರಡಿಸುವುದಾಗಿ ಬಿಬಿಎಂ‍ಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಹೇಳಿದರು.

ಬಿಬಿಎಂಪಿಯಲ್ಲಿ ಬಜೆಟ್‌ ಮೇಲಿನ ಚರ್ಚೆಯ ಮೂರನೇ ದಿನವಾದ ಶುಕ್ರವಾರ ಪಾಲಿಕೆ ಸದಸ್ಯ ಗುಣಶೇಖರ್‌ ಅವರ ಪ್ರಸ್ತಾಪಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.

ನಿವೇಶನ ದಾಖಲೆಗಳಲ್ಲಿ ‘ಬಿ’ ಖಾತೆಯನ್ನು ‘ಎ’ ಖಾತೆ ಮಾಡದ ಕಾರಣ ಆಸ್ತಿ ಮಾಲೀಕರಿಗೆ ಸಾಲ ಸೇರಿದಂತೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಕೆಲವು ಅಧಿಕಾರಿಗಳು ‘ಎ’ ಖಾತೆ ಎಂದು ದಾಖಲೆ ನಮೂದಿಸಲು ಲಂಚ ಪಡೆದಿರುವ ಉದಾಹರಣೆಗಳಿವೆ. ಇದು ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರಕ್ಕೆ ದಾರಿಯಾಗುತ್ತಿದೆ. ಮಾತ್ರವಲ್ಲ. ಪಾಲಿಕೆಗೂ ಇಂಥ ಆಸ್ತಿಗಳಿಂದ ತೆರಿಗೆ ಸಂಗ್ರಹವಾಗುತ್ತಿಲ್ಲ. ಆದಾಯ ಸಂಗ್ರಹಕ್ಕೂ ತೊಡಕಾಗುತ್ತಿದೆ’ ಎಂದು ಗುಣಶೇಖರ್ ಗಮನ ಸೆಳೆದರು.

‘ಒಂದು ನಿವೇಶನದ ದಾಖಲೆಯನ್ನು ಜೆರಾಕ್ಸ್‌ ಮಾಡಿ ಬೇರೆಲ್ಲೋ ಇರುವ ನಿವೇಶನಕ್ಕೆ ಖಾತೆ ಮಾಡಿದ ಪ್ರಕರಣಗಳೂ ನಡೆದಿವೆ’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ, ‘ಖಾತಾ ಬದಲಾವಣೆ ಸಂಬಂಧಿಸಿದ ತೊಡಕುಗಳು ಗಮನಕ್ಕೆ ಬಂದಿವೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದಿದ್ದೇನೆ. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸಿ ಖಾತಾ ಬದಲಾವಣೆಗೆ ಅವಕಾಶ ಕೊಡಬೇಕು ಎಂದು ಸೂಚಿಸಿದ್ದಾರೆ. ಹೀಗೆ ಇದಕ್ಕಿದ್ದ ಎಲ್ಲ ತೊಡಕುಗಳೂ ನಿವಾರಣೆಯಾಗಿವೆ. ಇನ್ನು ಒಂದು ವಾರದ ಒಳಗೆ ಈ ಸಂಬಂಧಿಸಿದ ಪ್ರಕಟಣೆ ಹೊರಡಿಸುವುದು’ ಎಂದು ಅವರು ತಿಳಿಸಿದರು.

ಆಯುಕ್ತರ ಮಾತನ್ನು ಸದಸ್ಯರು ಪಕ್ಷಬೇಧ ಮರೆತು ಸ್ವಾಗತಿಸಿದರು.

ಮಹಿಳಾ ಸದಸ್ಯರಿಗೆ ಹೆಚ್ಚು ಅನುದಾನ?
ಬಜೆಟ್‌ನಲ್ಲಿ ಮಹಿಳಾ ಸದಸ್ಯರ ವಾರ್ಡ್‌ಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ ಎಂದು ಗುಣಶೇಖರ್‌ ಹೇಳಿದಾಗ, ‘ಬಿಜೆಪಿ ಸದಸ್ಯರಾದ ವೀಣಾರಾವ್ ಹಾಗೂ ಮೀನಾಕುಮಾರಿ ಅವರು ಆಕ್ಷೇಪಿಸಿದರು. ಎಲ್ಲ ಅನುದಾನವನ್ನು ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರಿಗೆ ನೀಡಲಾಗಿದೆ. ನಮಗೆಲ್ಲಿ ಕೊಟ್ಟಿದ್ದೀರಿ’ ಎಂದು ಪ್ರಶ್ನಿಸಿದರು.

ಇದನ್ನು ಸಮರ್ಥಿಸಿದ ಪದ್ಮನಾಭ ರೆಡ್ಡಿ, ‘ಬಿಜೆಪಿ ಸದಸ್ಯರು ಹೇಳುವುದರಲ್ಲಿ ತಪ್ಪಿಲ್ಲ. 101 ಬಿಜೆಪಿ ಸದಸ್ಯರಿದ್ದರೂ ₹ 311.60 ಕೋಟಿ ಅನುದಾನ ನೀಡಲಾಗಿದೆ. 75 ಮಂದಿ ಕಾಂಗ್ರೆಸ್‌ ಸದಸ್ಯರಿಗೆ ₹ 794.95 ಕೋಟಿ, 15 ಮಂದಿ ಜೆಡಿಎಸ್ ಸದಸ್ಯರಿಗೆ ₹ 409.80 ಕೋಟಿ, ಆರು ಮಂದಿ ಪಕ್ಷೇತರ ಸದಸ್ಯರಿಗೆ ₹ 62 ಕೋಟಿ ಅನುದಾನ ನೀಡಲಾಗಿದೆ. ಕಾಂಗ್ರೆಸ್‌ನವರಿಗೆ ಹೆಚ್ಚು ಹಸಿವಿರಬೇಕು. ಬೇಕಾದರೆ ಎಲ್ಲ ಅನುದಾನವನ್ನು ಅವರೇ ತೆಗೆದುಕೊಳ್ಳಲಿ’ ಎಂದು ಕುಟುಕಿದರು.

ಗುಣಶೇಖರ್‌ ಪ್ರತಿಕ್ರಿಯಿಸಿ, ‘ಅಧಿಕಾರದಲ್ಲಿದ್ದ ಪಕ್ಷದವರು ಸ್ವಲ್ಪ ಹೆಚ್ಚು ಅನುದಾನ ಪಡೆಯುವುದು ಸಹಜ’ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಈ ಸಂದರ್ಭ ಉಭಯ ಪಕ್ಷಗಳ ನಡುವೆ ಕೊಂಚ ಬಿರುಸಿನ ವಾಗ್ವಾದ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT