ಎಆರ್‌ಒ, ಎಸ್‌ಡಿಎ ಅಮಾನತು
ಬೆಂಗಳೂರು: ಅನಧಿಕೃತವಾಗಿ ಖಾತಾ ಮಾಡಿಕೊಟ್ಟ ಹಾಗೂ ಸರ್ಕಾರದ ನಿಯಮಾವಳಿ ಉಲ್ಲಂಘನೆ ಮಾಡಿರುವ ಆರೋಪದ ಮೇರೆಗೆ ಉತ್ತರಹಳ್ಳಿಯ ಪ್ರಭಾರ ಸಹಾಯಕ ಕಂದಾಯ ಅಧಿಕಾರಿ ಪದ್ಮಾವತಿ ಹಾಗೂ ಅವರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮಧು ಅವರನ್ನು ಅಮಾನತು ಮಾಡಲಾಗಿದೆ.
ಉತ್ತರಹಳ್ಳಿ ಎಆರ್‌ಒ ಕಚೇರಿಯಲ್ಲಿ ನಿಯಮ ಉಲ್ಲಂಘಿಸಿ ಖಾತಾ ಮಾಡಿಕೊಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಪಾಲಿಕೆಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ಜಂಟಿ ಆಯುಕ್ತರ ನೇತೃತ್ವದ ತಂಡ ಎಆರ್‌ಒ ಕಚೇರಿಗೆ ಇತ್ತೀಚೆಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಮಧು ಅವರು ನಿರ್ವಹಿಸಿಕೊಂಡು ಬರುತ್ತಿದ್ದ ಖಾತಾ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.
ಮೂಲ ದಾಖಲೆ ಪರಿಶೀಲಿಸದೆಯೇ ಅನಧಿಕೃತವಾಗಿ ಖಾತಾ ದಾಖಲೆ ನೀಡಿರುವುದು ಹಾಗೂ ಸೂಕ್ತ ದಾಖಲೆಗಳಿಲ್ಲದಿದ್ದರೂ ಕೆಲವು ಖಾತೆ ಮಾಡಿಕೊಟ್ಟಿರುವುದು ತಪಾಸಣೆ ವೇಳೆ ಕಂಡು ಬಂದಿತ್ತು. ಪಾಲಿಕೆಯಿಂದ ಆದೇಶ ಇಲ್ಲದಿದ್ದರೂ ಬಿಡಿ ನಿವೇಶನಗಳಿಗೆ ಸುಧಾರಣಾ ವೆಚ್ಚ ಪಾವತಿಸಿಕೊಂಡಿರುವುದೂ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪದ್ಮಾವತಿ ಹಾಗೂ ಮಧು ಅವರನ್ನು ಅಮಾನತು ಮಾಡಿ ಪಾಲಿಕೆಯ ಉಪಾಯುಕ್ತರು (ಆಡಳಿತ) ಗುರುವಾರ ಆದೇಶ ಮಾಡಿದ್ದಾರೆ.
ಬರಹ ಇಷ್ಟವಾಯಿತೆ?
0
0
0
0
0
0 comments
View All