ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500ಕ್ಕೂ ಹೆಚ್ಚು ಮಂದಿಗೆ ಕೆಂಪೇಗೌಡ ಪ್ರಶಸ್ತಿ

Last Updated 1 ಸೆಪ್ಟೆಂಬರ್ 2018, 18:38 IST
ಅಕ್ಷರ ಗಾತ್ರ

ಬೆಂಗಳೂರು: ಸಭಾಂಗಣದ ಉಭಯ ಪಾರ್ಶ್ವಗಳ ವೇದಿಕೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತರು. ಮುಖ್ಯ ವೇದಿಕೆಯಲ್ಲಿ ಸಚಿವರು, ಮೇಯರ್‌, ಶಾಸಕರ ಉದ್ದುದ್ದ ಭಾಷಣ, ಕೊನೆಗೂ ಒಂದು ಬಾರಿ 25 ಜನರಂತೆ ಕೂರಿಸಿ ಪ್ರಶಸ್ತಿ ಪ್ರದಾನ...

–ಇದು ಬಿಬಿಎಂಪಿ ವತಿಯಿಂದ ಶನಿವಾರ ಪಾಲಿಕೆ ಕಚೇರಿ ಆವರಣದ ಗಾಜಿನ ಮನೆಯಲ್ಲಿ ನಡೆದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಣ.

‘ಕರೆಯದೇ ಬರಬೇಡಿ, ಯಾರದೋ ಪ್ರಶಸ್ತಿ ನೀವು ಪಡೆದುಕೊಳ್ಳಬೇಡಿ’ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ಅಸಹಾಯಕ ನಿರೂಪಕರು. ನನ್ನ ಹೆಸರಿದೆಯೇ ಇಲ್ಲವೇ ಎಂದು ಪರಿಶೀಲಿಸುವ, ಹೆಸರು ಸೇರಿಸಲು ಒತ್ತಡ ಹೇರುವ ಹಿತಾಸಕ್ತಿಗಳು. ಸಾಲು ಕುರ್ಚಿಗಳ ಮೇಲೆ ಬಂದು ಕುಳಿತವರೊಂದಿಷ್ಟು ಮಂದಿ, ಹಾರ ಪ್ರಮಾಣಪತ್ರ, ಶಾಲು ಪಡೆದು ರೈಟ್‌ ಹೇಳಿದರು. ಪುರಸ್ಕೃತರ ಬ್ಯಾಂಕ್‌ ಖಾತೆಗೆ ನಗದು ಜಮಾ ಮಾಡುವುದಾಗಿ ನಿರೂಪಕರು ಘೋಷಿಸಿದರು.

ಸಾಧಕರು ಯಾರು? ಅವರ ಸಾಧನೆಯೇನು? ಎಂಬ ಪರಿಚಯವೂ ಸ್ಪಷ್ಟವಾಗಲಿಲ್ಲ. ಅದಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಅವರ ಭಾಷಣವೂ ಪುಷ್ಟಿ ನೀಡಿತು. ಪ್ರಶಸ್ತಿ ಪ್ರದಾನಕ್ಕೆ ವೇದಿಕೆ ಸಿದ್ಧವಾಗುತ್ತಿದ್ದಂತೆಯೇ, ‘ಇರಪ್ಪಾ ನಮ್ಗೆ ಛಾನ್ಸ್‌ ಸಿಗೋದೇ ಅಪರೂಪ’ ಎಂದು ಹೇಳುತ್ತಲೇ ಮಾತು ದೀರ್ಘಗೊಳಿಸಿದರು.

‘ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ಪಡೆದಿದ್ದೀರಿ ಎಂದರೆ ನೀವೇನೋ ಸಾಧನೆ ಮಾಡಿದ್ದೀರಿ ಎಂದು ಅರ್ಥ. ಏನು ಮಾಡಿದ್ದೀರೋ ನನಗೆ ಗೊತ್ತಿಲ್ಲ. ಅಂತೂ ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೀರಿ. ಎರಡು ಬಾರಿ ಮುಂದಕ್ಕೆ ಹೋದ ಕಾರ್ಯಕ್ರಮವಿದು. ನೀವೆಲ್ಲಾ (ಪುರಸ್ಕೃತರು) ಹೊಸ ಬಟ್ಟೆ ಸಿದ್ಧಗೊಳಿಸಿ ಅಚ್ಚುಕಟ್ಟಾಗಿ ಧರಿಸಿ ಸ್ಮಾರ್ಟ್‌ ಆಗಿ ಬಂದಿದ್ದಿರಿ. ಆದರೆ, ಕಾರ್ಯಕ್ರಮ ಮುಂದಕ್ಕೆ ಹೋಯಿತು. ಮತ್ತೆ ಬಟ್ಟೆಗಳನ್ನೆಲ್ಲಾ ಜೋಡಿಸಿಕೊಂಡು ಸಿದ್ಧರಾಗಿ ಬಂದು ಪ್ರಶಸ್ತಿ ಸ್ವೀಕರಿಸುತ್ತಿದ್ದೀರಿ. ಕೊನೆಗೂ ಪ್ರಶಸ್ತಿ ಕೊಟ್ಟರಲ್ಲಾ ಸಾರ್ಥಕವಾಯಿತು ಎಂಬ ಭಾವ ನಿಮ್ಮಲ್ಲಿರಬಹುದು. ಇಷ್ಟು ಕಾಲ ಕಾಯಿಸಿ ಪ್ರಶಸ್ತಿ ಕೊಡುವಂತಾದದ್ದಕ್ಕೆ ಕ್ಷಮೆ ಯಾಚಿಸುತ್ತೇನೆ. ಈ ಪ್ರಶಸ್ತಿ ನಿಮಗೊಂದು ಪ್ರೋತ್ಸಾಹ ಇದ್ದಂತೆ’ ಎಂದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು, ‘ನಿಮ್ಮನ್ನೇ ಕೆಂಪೇಗೌಡರು ಎಂದು ಭಾವಿಸಿ ಪ್ರಶಸ್ತಿ ಕೊಡುತ್ತಿದ್ದೇವೆ’ ಎಂದು ಹೇಳಿದರು.

ಸಂಜೆ 6ರ ಸುಮಾರಿಗೆ ಆರಂಭವಾದ ಕಾರ್ಯಕ್ರಮ ರಾತ್ರಿ 10.30ರವರೆಗೂ ಮುಂದುವರಿಯಿತು. ಹಿರಿಯ ಪತ್ರಕರ್ತರ ಸಹಿತ ಹಲವರು ಪ್ರಶಸ್ತಿಯ ಸಹವಾಸವೇ ಬೇಡ ಎಂದುಕೊಂಡು ಮೌನವಾಗಿ ವಾಪಸಾದರು.

ಪ್ರಶಸ್ತಿ ತಿರಸ್ಕರಿಸಿದ ಕಪ್ಪಣ್ಣ

ಪ್ರಶಸ್ತಿಯನ್ನು ರಂಗಕರ್ಮಿ ಶ್ರೀನಿವಾಸ ಕಪ್ಪಣ್ಣ ತಿರಸ್ಕರಿಸಿದ್ದಾರೆ. ಕೆಂಪೇಗೌಡರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅವರ ಹೆಸರು ಉಳಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಕಾರ್ಯಕ್ರಮಕ್ಕೊಂದು ಯೋಜನೆಯೂ ಇರಲಿಲ್ಲ. ಕೊಡಗು, ಕೇರಳದಲ್ಲಿ ಸಂಕಟವಿರುವಾಗ ಇಷ್ಟೊಂದು ಅದ್ದೂರಿ ಸಮಾರಂಭ ಅಗತ್ಯವಿತ್ತೇ? ಸರಳವಾಗಿ ಮಾಡಬಹುದಿತ್ತಲ್ಲವೇ? 500 ಮಂದಿ ಪೈಕಿ ಕೊನೆಯ 100ರಿಂದ 150 ಮಂದಿಗೆ ಪ್ರಶಸ್ತಿಯೇ ಸಿಗಲಿಲ್ಲ. ಈ ಎಲ್ಲ ಅಧ್ವಾನಗಳ ಹಿನ್ನೆಲೆಯಲ್ಲಿ ಪ್ರಶ್ತಿಯನ್ನು ತಿರಸ್ಕರಿಸಿದ್ದೇನೆ ಎಂದು ಅವರು ಹೇಳಿದರು.

ಪೌರ ಕಾರ್ಮಿಕರಿಗಾಗಿ ವಿಶೇಷ ಆಸ್ಪತ್ರೆ

ಬಿಬಿಎಂಪಿ ಆಸ್ಪತ್ರೆಗಳ ಪೈಕಿ ಒಂದನ್ನು ಪೌರ ಕಾರ್ಮಿಕರ ಆರೋಗ್ಯ ಕಾಳಜಿಗಾಗಿ ವಿಶೇಷವಾಗಿ ನಿಗದಿಪಡಿಸಲಾಗುವುದು. ಕಾರ್ಮಿಕರಿಗೆ ನೆರವಾಗಲು ಕಸಗುಡಿಸುವ ಯಂತ್ರಗಳನ್ನು ತರಿಸಲಾಗುವುದು. ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ನಿವೇಶನಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಹಂಚಲಾಗುವುದು ಎಂದು ಡಾ.ಪರಮೇಶ್ವರ ಹೇಳಿದರು.

ಪೌರ ಕಾರ್ಮಿಕರ ಕಲ್ಯಾಣ ನಿಧಿಗೆ ನೆರವು

ಪ್ರಶಸ್ತಿ ಸ್ವೀಕರಿಸಿದ ನಟ ಸೃಜನ್‌ ಲೋಕೇಶ್‌ ಅವರು ತಾವು ಮತ್ತು ನಟ ದರ್ಶನ್‌ ಸೇರಿ ತಲಾ ₹ 50 ಸಾವಿರ ನಗದನ್ನು ಪೌರ ಕಾರ್ಮಿಕರ ಕಲ್ಯಾಣ ನಿಧಿಗೆ ನೀಡುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT