ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣಾ ಶುಲ್ಕ ಕಟ್ಟಿದರೆ ನಿವೇಶನಕ್ಕೆ ‘ಎ’ ಖಾತೆ

Last Updated 23 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕಂದಾಯ ಆಸ್ತಿಗಳಲ್ಲಿ ‘ಎ’ ಮತ್ತು ‘ಬಿ’ ಎಂಬ ವರ್ಗೀಕರಣ ಇಲ್ಲ. ಮುಂದೆ ಪಾಲಿಕೆ ವ್ಯಾಪ್ತಿಯೊಳಗಿರುವ ಯಾವುದೇ ಆಸ್ತಿಗೆ ಸುಧಾರಣಾ ಶುಲ್ಕ ಪಡೆದು ‘ಎ’ ಖಾತೆಯಾಗಿಯೇ ನೋಂದಣಿ ಮಾಡಲು ನಿಯಮ ರೂಪಿಸಲಾಗುತ್ತದೆ. ಇದುವರೆಗೆ ಅಕ್ರಮವಾಗಿ ಆಸ್ತಿ ನೋಂದಣಿ ಮಾಡಿದ್ದರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುತ್ತದೆ.

– ಇದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು ಶನಿವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ನೀಡಿದ ಸ್ಪಷ್ಟನೆ.

ಇದರ ಪ್ರಕಾರ, ಕಟ್ಟಡ ಅನುಮೋದನೆ ಪಡೆದಿರಲಿ ಇಲ್ಲದಿರಲಿ ಪಾಲಿಕೆಯೊಳಗಿರುವ ಎಲ್ಲ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರಬೇಕು. ಹಾಗಾಗಿ ಈ ಆಸ್ತಿಗಳನ್ನು ‘ಎ’ ಖಾತೆಯಾಗಿಯೇ ದಾಖಲಿಸಲು ನಿಯಮ ರೂಪಿಸಿ ಸರ್ಕಾರದ ಅನುಮೋದನೆ ಪಡೆಯಲಾಗುತ್ತದೆ ಎಂದು ಅವರು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 3 ಲಕ್ಷ ‘ಬಿ’ ಖಾತೆಯಲ್ಲಿ ಗುರುತಿಸಿಕೊಂಡ ಆಸ್ತಿಗಳಿವೆ. ಅವುಗಳ ಮೌಲ್ಯಮಾಪನ ಮಾಡಬೇಕು. ಅದರ ಪ್ರಕಾರ ತೆರಿಗೆ ವಿಧಿಸಬೇಕು. ಆ ಪ್ರಕ್ರಿಯೆ ಇನ್ನಷ್ಟೇ ಆಗಬೇಕಿದೆ ಎಂದು ಅವರು ವಿವರಿಸಿದರು.

ಏನಿದು ‘ಎ’, ‘ಬಿ’ ಖಾತೆ ?:ತೆರಿಗೆ ಮೌಲ್ಯಮಾಪನ ಆಗಿರುವ, ಕಾನೂನುಬದ್ಧವಾಗಿರುವ ಎಲ್ಲ ಆಸ್ತಿಗಳನ್ನು ‘ಎ’ ಖಾತೆಯಾಗಿ ನೋಂದಾಯಿಸುವುದು. ಇದರಲ್ಲಿ ಮಾಲೀಕರ ಹೆಸರು ನಮೂದಾಗಿರುತ್ತದೆ. ಕಟ್ಟಡ ಪರವಾನಗಿ, ಬ್ಯಾಂಕ್‌ ಸಾಲ ಪಡೆಯಲು ‘ಎ’ ಖಾತೆ ಇದ್ದರೆ ಮಾತ್ರ ಮಾನ್ಯತೆ ಇರುತ್ತದೆ. ತೆರಿಗೆ ಕಟ್ಟಿದ್ದರೂ ಯೋಜನಾ ಅನುಮೋದನೆ ಪಡೆಯದೆ ಕಟ್ಟಡ ನಿರ್ಮಾಣ ಮಾಡಿರುವುದು, ನಿಯಮ ಉಲ್ಲಂಘನೆ ಮಾಡಿರುವುದು, ದಾಖಲೆಗಳಲ್ಲಿ ಲೋಪ ಇರುವುದು ಇತ್ಯಾದಿ ಕಾರಣಗಳಿಂದ ಆಸ್ತಿಗಳನ್ನು ‘ಬಿ’ ಖಾತೆ ಎಂದು ಗುರುತಿಸುವುದೂ ನಡೆದಿತ್ತು.

‘ಇನ್ನು ಮುಂದೆ ಹಾಗಿರುವುದಿಲ್ಲ.ಪಾಲಿಕೆ ವ್ಯಾಪ್ತಿಯಲ್ಲಿರುವ ಯಾವುದೇ ಆಸ್ತಿಗಳಿಗೆ ಸಂಬಂಧಿಸಿದಂತೆ ಸುಧಾರಣಾ ಶುಲ್ಕ ಪಡೆದು ಅವುಗಳನ್ನು ‘ಎ’ ಖಾತೆಯಾಗಿ ನೋಂದಾಯಿಸಲಾಗುತ್ತದೆ. ಇದಕ್ಕಾಗಿ ಈ ವಾರದ ಒಳಗೆ ನಿಯಮ ರೂಪಿಸಿ ಸುತ್ತೋಲೆ ಹೊರಡಿಸುತ್ತೇವೆ. ಹಾಗೆಂದು ಅಕ್ರಮ ಸಕ್ರಮಕ್ಕೂ ಈ ರೀತಿ ಖಾತೆ ದಾಖಲೆ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಆಯುಕ್ತರು ಹೇಳಿದರು.

ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆದೇ ಈ ನಿರ್ಧಾರಕ್ಕೆ ಬಂದಿದ್ದೇವೆ. ಅವರು ಹೇಳುವ ಪ್ರಕಾರ ಆಸ್ತಿ ಖಾತೆಗಳಲ್ಲಿ ‘ಎ’ ಮತ್ತು ‘ಬಿ’ ಎಂಬ ವರ್ಗೀಕರಣವೇ ಸರಿಯಲ್ಲ ಎಂದರು.

**

ಗದ್ದಲದ ನಡುವೆ ಆಯವ್ಯಯ ಅನುಮೋದನೆ

ಆದಾಯ ಸಂಗ್ರಹ ಹೆಚ್ಚಳದ ಗುರಿ, ಆಡಳಿತ ಸುಧಾರಣೆಯ ಕ್ರಮಗಳ ಕುರಿತ ಚಿತ್ರಣವನ್ನು ಬಿಬಿಎಂಪಿ ಬಜೆಟ್‌ ಮೇಲಿನ ಚರ್ಚಾ ಸಭೆಯ ಕೊನೆಯ ದಿನವಾದ ಶನಿವಾರ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ನೀಡಿದರು.

ಇದೇನಿದ್ದರೂ ಬೋಗಸ್‌ ಬಜೆಟ್‌, ಇದನ್ನು ವಾಪಸ್‌ ಕಳಿಸಿ ಎಂದು ಸಭೆಯ ಕೊನೆಯಲ್ಲಿಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಆಡಳಿತ ಪಕ್ಷದವರು ಆಯವ್ಯಯವನ್ನುಅನುಮೋದಿಸಿದರು.

ಮೂರು ದಿನಗಳಿಂದ ನಡೆದ ಚರ್ಚೆಯಲ್ಲಿ ಸದಸ್ಯರ ಪ್ರಶ್ನೆ, ಸಂದೇಹ, ಗೊಂದಲಗಳಿಗೆ ಆಯುಕ್ತರು ಪ್ರತಿಕ್ರಿಯೆ ನೀಡಿದರು.

ತೆರಿಗೆ ಪಾವತಿಸದಿದ್ದರೆ ಆಸ್ತಿ ಜಪ್ತಿ: ‘ಪಾಲಿಕೆಗೆ ₹ 824 ಕೋಟಿ ತೆರಿಗೆ ಬಾಕಿಯಿದೆ. ತೆರಿಗೆ ಬಾಕಿಯಿರಿಸಿದ 1,512 ಮಂದಿಯ ಆಸ್ತಿ ಜಪ್ತಿಗೆ ವಾರಂಟ್‌ ಹೊರಡಿಸಿದ್ದೇವೆ. ಹೀಗಾದಾಗ ₹ 150 ಕೋಟಿ ತೆರಿಗೆ ಸಂಗ್ರಹವಾಗಿದೆ. ಬಿಬಿಎಂಪಿಯಲ್ಲಿ ನೋಂದಣಿಯಾಗುವ ದಾಖಲೆಗಳ ಮುದ್ರಾಂಕ ಶುಲ್ಕದಲ್ಲಿ ಶೇ 2ರಷ್ಟನ್ನು ಪಾಲಿಕೆಗೆ ಕೊಡಬೇಕು ಎಂದೂ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ರಕ್ಷಣಾ ಇಲಾಖೆಯವರು ಪಾಲಿಕೆಯ ಸೌಲಭ್ಯ ಬಳಸುತ್ತಿದ್ದಾರೆ. ಹೀಗಾಗಿ ಅವರು ಶೇ 25ರಷ್ಟು ಸೇವಾ ಶುಲ್ಕ ಪಾವತಿಸಬೇಕು. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಆದೇಶವೇ ಇದೆ’ ಎಂದರು.

ಸುಲಿಗೆ ಶಾಲೆಗಳಿಗೂ ಆಸ್ತಿ ತೆರಿಗೆ:‘ಸರ್ಕಾರಿ, ಅನುದಾನಿತ ಹೊರತುಪಡಿಸಿ ದುಬಾರಿ ಡೊನೇಷನ್‌ ಪಡೆಯುವ ಶಾಲೆಗಳಿಗೆ ಇನ್ನುಮುಂದೆ ಆಸ್ತಿ ತೆರಿಗೆ ಕಟ್ಟುವಂತೆ ನಿಯಮ ರೂಪಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಅದು ಶೀಘ್ರವೇ ಅನುಮೋದನೆಗೊಳ್ಳಲಿದೆ. ಇದುವರೆಗೆ ಅವರು ಶೇ 25ರಷ್ಟು ಸೇವಾ ಶುಲ್ಕ ಮಾತ್ರ ಕಟ್ಟುತ್ತಿದ್ದರು. ಇನ್ನು ಮುಂದೆ ಅವರೂ ತೆರಿಗೆ ವ್ಯಾಪ್ತಿಗೆ ಒಳಪಡಲಿದ್ದಾರೆ’ ಎಂದು ಆಯುಕ್ತರು ಹೇಳಿದರು.

ಬೀದಿ ದೀಪ; ವಿದ್ಯುತ್‌ ಉಳಿತಾಯದ ಕ್ರಮ: ಪಾಲಿಕೆ ವ್ಯಾಪ್ತಿಯಲ್ಲಿ 4.85 ಲಕ್ಷ ಬೀದಿ ದೀಪಗಳಿವೆ. ಸದ್ಯ ತಿಂಗಳಿಗೆ ₹ 20 ಕೋಟಿ ವಿದ್ಯುತ್‌ ಬಿಲ್‌ ಬರುತ್ತದೆ. ಇದನ್ನು ಉಳಿಸುವ ದೃಷ್ಟಿಯಿಂದ ಎಲ್ಲ ಕಡೆ ಎಲ್‌ಇಡಿ ದೀಪ ಅಳವಡಿಸಲಾಗುವುದು. ಪ್ರತಿ ರಸ್ತೆಗೆ ಎಷ್ಟು ಪ್ರಮಾಣದ ಬೆಳಕು ಬೇಕು ಎಂಬುದನ್ನು ಭಾರತೀಯ ಮಾನದಂಡದ ಪ್ರಕಾರ ಅಳೆಯಲಾಗಿದೆ. ಈ ನಿರ್ದಿಷ್ಟ ಮಾನದಂಡಕ್ಕಿಂತ ಹೆಚ್ಚು ಪ್ರಮಾಣದ ಬೆಳಕು ನೀಡುವದೀಪಗಳನ್ನೇ ಅಳವಡಿಸಲಾಗುವುದುಎಂದರು.

ದೀಪಗಳನ್ನು ತಾವೇ ಅಳವಡಿಸಿ ನಿರ್ವಹಿಸಲು ಮೂರು ಕಂಪನಿಗಳು ಮುಂದೆ ಬಂದಿವೆ. ಅವುಗಳ ಪೈಕಿ ಒಂದು ಕಂಪನಿ ಶೇ 85ರಷ್ಟು ಶಕ್ತಿ ಉಳಿತಾಯ ಮಾಡುವುದಾಗಿ ಘೋಷಿಸಿದೆ. ಇದುಯಶಸ್ವಿಯಾದಲ್ಲಿ ವಿದ್ಯುತ್‌ ಬಿಲ್‌ ₹ 3 ಕೋಟಿಗೆಇಳಿಯಲಿದೆ. ಉಳಿದ ನಿರ್ವಹಣಾ ವೆಚ್ಚ, ಉಳಿತಾಯದ ಮೊತ್ತವನ್ನು ಲೆಕ್ಕ ಹಾಕಿ ಕಂಪನಿಗೆ ಪಾವತಿಸಲಾಗುವುದು. ಇದರಲ್ಲಿ ಬಿಬಿಎಂಪಿಯಿಂದ ಯಾವುದೇ ಹೂಡಿಕೆ ಇರುವುದಿಲ್ಲ. ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುವ, ದೀಪದಲ್ಲಿಕ್ಯಾಮೆರಾ ಅಳವಡಿಸುವ ವ್ಯವಸ್ಥೆಯೂ ಇರಲಿದೆ ಎಂದು ಆಯುಕ್ತ ಮಂಜುನಾಥ ಪ್ರಸಾದ್‌ ವಿವರಿಸಿದರು.

ಡಯಾಲಿಸೀಸ್‌ ಕೇಂದ್ರಗಳ ಬಳಕೆ, ಮೊಬೈಲ್‌ ಟವರ್‌ ಅಳವಡಿಕೆಗೆ ₹ 1 ಲಕ್ಷ ಶುಲ್ಕ ವಸೂಲು, ನಾಯಿ ಹಾವಳಿ ನಿಯಂತ್ರಣದ ಕುರಿತು ಆಯುಕ್ತರು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT