ಬಜೆಟ್‌ ಹಾದಿ ತಪ್ಪುತ್ತಿರುವುದೆಲ್ಲಿ?

ಮಂಗಳವಾರ, ಮಾರ್ಚ್ 26, 2019
22 °C
ಈಗಿನ ಬಜೆಟ್‌ ಅನುಷ್ಠಾನ ಅಸಾಧ್ಯ: ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಆಯುಕ್ತರ ಪತ್ರ

ಬಜೆಟ್‌ ಹಾದಿ ತಪ್ಪುತ್ತಿರುವುದೆಲ್ಲಿ?

Published:
Updated:
Prajavani

ಬೆಂಗಳೂರು: ಪಾಲಿಕೆ ಅನುಮೋದನೆ ನೀಡಿದಷ್ಟು ಗಾತ್ರದ ಬಜೆಟ್‌ ಬಜೆಟ್‌ ಅನುಷ್ಠಾನ ಸಾಧ್ಯವೇ ಇಲ್ಲ ಎಂದು ನಗರಾಭಿವೃದ್ಧೀ ಇಲಾಖೆ ಹೆಚ್ಚುವರಿ ಆಯುಕ್ತರಿಗೆ ಪತ್ರ ಬರೆದಿರುವ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್‌, ಅದಕ್ಕೆ ಕಾರಣಗಳನ್ನೂ ವಿವರಿಸಿದ್ದಾರೆ.

2019–20ನೇ ಸಾಲಿನಲ್ಲಿ ₹8987.73 ಕೋಟಿ ಆದಾಯ ನಿರೀಕ್ಷಿಸಿ ಬಜೆಟ್‌ ಮಂಡಿಸಬಹುದು ಎಂದು ಪಾಲಿಕೆ ಅಧಿಕಾರಿಗಳು ಶಿಫಾರಸು ಮಾಡಿದ್ದರು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಅವರು ಫೆ.18ರಂದು ₹10,691. 82 ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದರು.

2017–18ನೇ ಸಾಲಿನ ನೈಜ ಲೆಕ್ಕಾಚಾರಗಳಿಗೆ ಹೋಲಿಸಿದರೆ 2019–20ನೇ ಸಾಲಿನ ಬಜೆಟ್‌ ಗಾತ್ರವು
ಶೇ 173.61ರಷ್ಟು ಹೆಚ್ಚು ಇದೆ. 2017–18ನೇ ಸಾಲಿನ ಅಂದಾಜು ಲೆಕ್ಕಾಚಾರಗಳಿಗೆ ಹೋಲಿಸಿದರೂ ಬಜೆಟ್‌ ಗಾತ್ರ ಶೇ 148.09ರಷ್ಟು ಹೆಚ್ಚು ಇದೆ. ಇದನ್ನು ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ಆಯುಕ್ತರು ಸ್ಪಷ್ಟವಾಗಿ ಹೇಳಿದ್ದಾರೆ.

ಬಜೆಟ್‌ ಕುರಿತು ಬಳಿಕ ನಡೆದ ಚರ್ಚೆ ವೇಳೆ ಸದಸ್ಯರಿಂದ ಮತ್ತಷ್ಟು ಕಾಮಗಾರಿಗಳಿಗೆ ಬೇಡಿಕೆ ಬಂದಿದ್ದರಿಂದ ₹12,957.79 ಆದಾಯ ನಿರೀಕ್ಷಿಸಿ ಬಜೆಟ್‌ ಗಾತ್ರವನ್ನು ₹12,961.82  ಕೋಟಿಗೆ ಹೆಚ್ಚಿಸಲಾಗಿತ್ತು. ಇದಕ್ಕೆ ಕೌನ್ಸಿಲ್ ಸಭೆ ಅನುಮೋದನೆ ನೀಡಿತ್ತು. ಈ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ಇನ್ನಷ್ಟೇ ಅನುಮೋದನೆ ನೀಡಬೇಕಿದೆ.

ಪ್ರತಿ ವರ್ಷವೂ ವಾಸ್ತವಕ್ಕಿಂತ ಹೆಚ್ಚು ಆದಾಯ ನಿರೀಕ್ಷೆ ಮಾಡಿ ಬಜೆಟ್‌ ಮಂಡಿಸುತ್ತಿರುವುದರಿಂದ ಏನೆಲ್ಲ ಪ್ರತಿಕೂಲ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಆಯುಕ್ತರು ಎಳೆ ಎಳೆಯಾಗಿ ವಿವರಿಸಿದ್ದಾರೆ. ಪಾಲಿಕೆಯ ಆರ್ಥಿಕ ಹೊರೆಗಳೇನು, 2019–20ನೇ ಸಾಲಿನಲ್ಲಿ ಎಷ್ಟು ಸಾಲ ಮರುಪಾವತಿ ಮಾಡಬೇಕಾಗುತ್ತದೆ ಎಂಬುದನ್ನು ಪತ್ರದಲ್ಲಿ ಅಂಕಿ ಅಂಶಗಳ ಸಹಿತ ಉಲ್ಲೇಖಿಸಿದ್ದಾರೆ.  ಆ ಪ್ರಕಾರ ಪಾಲಿಕೆಯು ಗುತ್ತಿಗೆದಾರಿಗೆ ₹ 12,842 ಕೊಟಿ ಪಾವತಿ ಮಾಡಬೇಕಾಗುತ್ತದೆ, ಅಲ್ಲದೇ ₹ 703.34 ಕೋಟಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ.

2008 ರಿಂದ 2019ರವರೆಗೆ ತೆರಿಗೆ ಮತ್ತು ತೆರಿಗೆಯೇತರ ಮೂಲಗಳಿಂದ ಎಷ್ಟು ವರಮಾನ ಗಳಿಸಿದೆ ಎಂಬ ಲೆಕ್ಕವನ್ನು ಉಲ್ಲೇಖಿಸಿದ್ದಾರೆ. 2011ರಿಂದ 2019ರವರೆಗೆ ಆಯವ್ಯಯದಲ್ಲಿ ನಿರೀಕ್ಷೆ ಮಾಡಿದ ಆದಾಯ ಎಷ್ಟು ಹಾಗೂ ವಾಸ್ತವದಲ್ಲಿ ಸಂಗ್ರಹವಾಗಿದ್ದೆಷ್ಟು, ಇವುಗಳಲ್ಲಿ ಪಾಲಿಕೆಯ ಸ್ವಂತ ಆದಾಯವೆಷ್ಟು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪಾಲು ಎಷ್ಟು ಎಂದು ವಿವರಿಸಿರುವ ಆಯುಕ್ತರು ಆಯಾ ವರ್ಷಗಳಲ್ಲಿ ಗುರಿ ಸಾಧನೆ ಎಷ್ಟಾಗಿದೆ ಎಂಬುದನ್ನೂ ತುಲನೆ ಮಾಡಿದ್ದಾರೆ.

ಬಜೆಟ್‌ ಗಾತ್ರವನ್ನು ₹9 ಸಾವಿರ ಕೋಟಿಗೆ ಮಿತಿಗೊಳಿಸಿದರೆ, ಅದು 2018–19ನೇ ಸಾಲಿನ ವಾಸ್ತವ ಲೆಕ್ಕಾಚಾರಕ್ಕಿಂತ ಶೇ 22.92ರಷ್ಟು ಹೆಚ್ಚಾಗುತ್ತದೆ. ಒಂದು ವೇಳೆ ನಿರೀಕ್ಷೆಗಿಂತ ಹೆಚ್ಚು ಆದಾಯ ಸಂಗ್ರಹವಾದಲ್ಲಿ ಹೆಚ್ಚಳವಾದರೆ ಪೂರಕ ಬಜೆಟ್‌ ಮಂಡಿಸಿ ಅದಕ್ಕೆ ಅನುಮೋದನೆ ಕೋರಲು ಅವಕಾಶ ಇದೆ ಎಂದೂ ಸಲಹೆ ನೀಡಿದ್ದಾರೆ.  ಈ ನಡುವೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಬರೆದಿರುವ ಪತ್ರದಿಂದಾಗಿ ಪಾಲಿಕೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ನಿರ್ಧಾರಕ್ಕೆ ಹಿನ್ನಡೆಯಾದಂತಾಗಿದೆ. ಆದರೆ ನಗರಾಭಿವೃದ್ಧಿ ಇಲಾಖೆಯು ಆಯುಕ್ತರ ಪತ್ರಕ್ಕೆ ಮಹತ್ವ ನೀಡುತ್ತದೆಯೋ ಅಥವಾ ಕೌನ್ಸಿಲ್‌ ಸಭೆಯ ನಿರ್ಧಾರಕ್ಕೆ ಮಣೆ ಹಾಕುತ್ತದೆಯೋ
ಕಾದುನೋಡಬೇಕಾಗಿದೆ.

‘ಗಾತ್ರ ಕಡಿಮೆ ಮಾಡದಂತೆ ಕೋರುತ್ತೇವೆ’

‘ನಾನು ಮಂಡಿಸಿದ ಬಜೆಟ್‌ನಲ್ಲಿ ಅವಾಸ್ತವಿಕ ಅಂಶಗಳಿಲ್ಲ. ಹಾಗಾಗಿ ₹12,961. 82 ಕೋಟಿ ಗಾತ್ರದ ಬಜೆಟ್‌ಗೆ ಅನುಮೋದನೆ ಕೊಡುವಂತೆ ಸರ್ಕಾರವನ್ನು ಕೋರುತ್ತೇವೆ. ಶಾಸಕರು ಹಾಗೂ ಮೇಯರ್‌ ಗಂಗಾಂಬಿಕೆ ಅವರ ಮೂಲಕವೂ ಒತ್ತಡ ಹೇರುತ್ತೇವೆ’ ಎಂದು  ಎಸ್‌.ಪಿ.ಹೇಮಲತಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬಿ–ಖಾತಾಗಳನ್ನು ಎ–ಖಾತಾಗಳನ್ನಾಗಿ ಪರಿವರ್ತಿಸುವುದರಿಂದ ಬರುವ ಆದಾಯವನ್ನು ಬಜೆಟ್‌ ಮಂಡಿಸುವಾಗ ನಿರೀಕ್ಷಿಸಿರಲಿಲ್ಲ. ಬಳಿಕ ಬಜೆಟ್‌ನಲ್ಲಿ ಈ ಅಂಶ ಸೇರ್ಪಡೆ ಮಾಡಿದ್ದೇವೆ. ಇದರಿಂದ ಪಾಲಿಕೆಗೆ ಒಂದೇ ವರ್ಷದಲ್ಲಿ ₹4 ಸಾವಿರ ಕೋಟಿ ಆದಾಯ ಬರಲಿದೆ. ಹಾಗಾಗಿ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನ ಕಷ್ಟವೇನಲ್ಲ’ ಎಂದು ಅಭಿಪ್ರಾಯಪಟ್ಟರು.

ಬಜೆಟ್‌ ಗಾತ್ರ ಕುಗ್ಗಿಸಲು ಪತ್ರ

ಪಾಲಿಕೆ ಕೌನ್ಸಿಲ್‌ ಸಭೆ 2019–20ನೇ ಸಾಲಿಗೆ ₹12,958 ಕೋಟಿ ಗಾತ್ರದ ಬಜೆಟ್‌ಗೆ ಒಪ್ಪಿಗೆ ನೀಡಿದ ಬೆನ್ನಲ್ಲೇ, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಬಜೆಟ್‌ ಗಾತ್ರವನ್ನು ₹9 ಸಾವಿರ ಕೋಟಿಗೆ ಮಿತಗೊಳಿಸಿ ಅನುಮೋದನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

ಬಜೆಟ್‌ನಲ್ಲಿ ನಿರೀಕ್ಷಿಸಿದಷ್ಟು ಆದಾಯ ಬರದಿದ್ದರೂ ವೆಚ್ಚಗಳಿಗೆ ಒದಗಿಸಿದಷ್ಟು ಅನುದಾನಕ್ಕೆ ಅನುಗುಣವಾಗಿ ಜಾಬ್‌ ಸಂಖ್ಯೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಇದರಿಂದಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗಳ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪಾಲಿಕೆಯ ಆರ್ಥಿಕ ಹೊರೆ ಹೆಚ್ಚುತ್ತಿರುವುದರಿಂದ ಹಣಕಾಸು ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !