ಹೇಗೆ ನಡೆದಿದೆ ಚುನಾವಣಾ ತಯಾರಿ?

ಶುಕ್ರವಾರ, ಏಪ್ರಿಲ್ 26, 2019
35 °C
ಕರ್ತವ್ಯಕ್ಕೆ ಲಕ್ಷ ಸಿಬ್ಬಂದಿ ನೇಮಕ

ಹೇಗೆ ನಡೆದಿದೆ ಚುನಾವಣಾ ತಯಾರಿ?

Published:
Updated:
Prajavani

ಬಿಬಿಎಂಪಿ ಆಯುಕ್ತ ಹಾಗೂ ಐಎಎಸ್‌ ಅಧಿಕಾರಿ ಎನ್‌. ಮಂಜುನಾಥ್‌ ಪ್ರಸಾದ್‌ ಈಗ ಜಿಲ್ಲಾ ಚುನಾವಣಾ ಆಧಿಕಾರಿ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಅಂದಾಜು ಒಂದು ಲಕ್ಷ ಸಿಬ್ಬಂದಿಯ ಮುಂದಾಳತ್ವ ವಹಿಸಿದ್ದಾರೆ. ಇದಕ್ಕೂ ಮೊದಲು 20 ಚುನಾವಣೆಗಳನ್ನು ನಿಭಾಯಿಸಿರುವ ಅನುಭವ ಹೊಂದಿದ್ದಾರೆ. ರಿಟರ್ನಿಂಗ್‌ ಆಫಿಸರ್‌, ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಚುನಾವಣಾ ಆಯೋಗದ ವೀಕ್ಷಕರಾಗಿ ಕೆಲಸ ಮಾಡಿದ್ದಾರೆ. ಪ್ರಸಕ್ತ ಚುನಾವಣೆಯ ಹೊಣೆ ಮತ್ತು ಕಾರ್ಯವೈಖರಿಯ ಬಗ್ಗೆ ಅವರು ‘ಮೆಟ್ರೊ’ ಜತೆ ಮಾತನಾಡಿದ್ದಾರೆ.

ನಿಮ್ಮ ಮುಂದಿರುವ ಸವಾಲುಗಳೇನು? 

ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಸೇರಿದಂತೆ ಸುಮಾರು ಒಂದು ಲಕ್ಷ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಆ ತಂಡದ ನಾಯಕನಾಗಿ ಚುನಾವಣಾ ಆಯೋ‌ಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ನನ್ನ ಆದ್ಯ ಕರ್ತವ್ಯ. ಚುನಾವಣಾ ಆಯೋಗದ ನೀತಿ, ನಿಯಮಗಳ ಬಗ್ಗೆ ನಮ್ಮ ಸಿಬ್ಬಂದಿಗೆ ಸಂಪೂರ್ಣ ಮಾಹಿತಿ ಇರುವುದರಿಂದ ಎಲ್ಲ ಕೆಲಸಗಳು ನಮ್ಮ ಯೋಜನೆಯಂತೆ ಅಚ್ಚುಕಟ್ಟಾಗಿ ನಡೆಯಲಿವೆ. 

ನೀವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ಅನುಷ್ಠಾನಗೊಳಿಸುವಾಗ ಒತ್ತಡಕ್ಕೆ ಸಿಲುಕಿದ್ದೀರಾ?

ಚುನಾವಣೆ ಸಮಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ. ಎಲ್ಲ ಸಿಬ್ಬಂದಿಗೂ ಸಮರ್ಪಕ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ನಮ್ಮ ಸಿಬ್ಬಂದಿಯಿಂದ ಯಾವುದೇ ಪ್ರಮಾದವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರತಿ ಹಂತದಲ್ಲೂ ಯೋಚಿಸಿ, ಯೋಜಿಸಿ ಹೆಜ್ಜೆ ಇಡಲಾಗುತ್ತಿದೆ. 

ಈ ಮೊದಲು ಚುನಾವಣಾ ಕಾರ್ಯಗಳಲ್ಲಿ ನೀವು ಎದುರಿಸಿದ ಸವಾಲು ಮತ್ತು ಅನುಭವಗಳು ಏನು?

ಈ ಹಿಂದೆ ಮತಗಟ್ಟೆಗಳ ಬಳಿ ಹಿಂಸಾಚಾರ ಮತ್ತು ಮತಪೆಟ್ಟಿಗೆ ವಶದಂತಹ ಪ್ರಕರಣಗಳು ನಡೆಯುತ್ತಿದ್ದವು. ಈಗ ಅದೆಲ್ಲ ಅಸಾಧ್ಯ. 1999ರಲ್ಲಿ ಪಶ್ಚಿಮ ಬಂಗಾಳದ ಕಾಂತಿ ಲೋಕಸಭಾ ಕ್ಷೇತ್ರದ ರಿಟರ್ನಿಂಗ್ ಆಫಿಸರ್‌ ಆಗಿದ್ದಾಗ ನಡೆದ ಘಟನೆ ಇನ್ನೂ ನೆನಪಿನಲ್ಲಿದೆ. ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಲಿ ಸಂಸದರು, ಸೇನ್‌ಗುಪ್ತಾ ಎಂಬ ಹಿರಿಯ ಐಎಎಸ್‌ ಅಧಿಕಾರಿಯನ್ನು ಕಣಕ್ಕಿಳಿಸಿದ್ದರು.ವಿಶ್ವಬ್ಯಾಂಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿಯ ಪತ್ನಿ ಭಾರಿ ವ್ಯವಸ್ಥಿತವಾಗಿ ಪ್ರಚಾರ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಚುನಾವಣೆಗೂ ಹತ್ತು ದಿನ ಮೊದಲು ನನ್ನ ಬಳಿ ಬಂದ ಸೇನ್‌ಗುಪ್ತಾ ಅವರ ಪತ್ನಿ, ಕೆಲವು ಮತಗಟ್ಟೆಗಳಲ್ಲಿ ಮತದಾರರನ್ನು ತಡೆಯುವ ಮತ್ತು ಬೆದರಿಕೆ ಒಡ್ಡುವ ಸಾಧ್ಯತೆ ಇದೆ ಎಂದು ದೂರು ನೀಡಿದರು. 

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಪಶ್ಚಿಮ ಬಂಗಾಳ ಪೊಲೀಸರು ಮತ್ತು ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತೆ ಮನವಿ ಮಾಡಿದರು. ಅದರಂತೆ ಭಾರಿ ಭದ್ರತೆ ಕಲ್ಪಿಸಲಾಯಿತು. ಮತದಾರರು ನಿರ್ಭಿಡೆಯಿಂದ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಸೇನ್‌ಗುಪ್ತಾ ಅವರು 12 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. 

ದಾವಣಗೆರೆಯಲ್ಲಿ ರಿಟರ್ನಿಂಗ್‌ ಆಫಿಸರ್‌ ಆಗಿದ್ದಾಗ ನಡೆದ ಘಟನೆಯೂ ಇನ್ನೂ ಕುತೂಹಲಕಾರಿಯಾಗಿದೆ. ಮತಎಣಿಕೆ ಕಾರ್ಯ ಪೂರ್ಣಗೊಳ್ಳುವ ಮೊದಲೇ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ತಮ್ಮನ್ನು ಜಯಶಾಲಿ ಎಂದು ಘೋಷಿಸಿ ಪ್ರಮಾಣಪತ್ರ ನೀಡುವಂತೆ ಪಟ್ಟು ಹಿಡಿದರು.ಫಲಿತಾಂಶ ಘೋಷಿಸುವ ಮೊದಲೇ ಅಭ್ಯರ್ಥಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಮಾಧ್ಯಮ ಪ್ರತಿನಿಧಿಗಳು ಫಲಿತಾಂಶಕ್ಕಾಗಿ ಬೆನ್ನು ಬಿದ್ದಿದ್ದರು. ಎಲ್ಲ ಕಡೆಯಿಂದಲೂ ಸಾಕಷ್ಟು ಒತ್ತಡ. ಆಗ ನಿಜವಾಗಿಯೂ ನಾನು ಭಾರಿ ಒತ್ತಡಕ್ಕೆ ಸಿಲುಕಿದ್ದೆ. ಫಲಿತಾಂಶ ಪ್ರಕಟಿಸಿದ್ದರೆ ಕೆಲಸ ಕಳೆದುಕೊಳ್ಳಬೇಕಾಗಿತ್ತು. 

ರಾಜಕಾರಣಿಗಳು ಚುನಾವಣಾ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಾರೆಯೇ?

ಸಾಮಾನ್ಯ ದಿನಗಳಲ್ಲಿ ಅಧಿಕಾರಿಗಳು ಯಾರ ವಿರುದ್ಧವಾದರೂ ಶಿಸ್ತುಕ್ರಮ ಕೈಗೊಳ್ಳಲು ಮುಂದಾದರೆ ರಾಜಕೀಯ ಒತ್ತಡಗಳು ಬರುವುದು ಸಹಜ. ಯಾರನ್ನಾದರೂ ಅಮಾನತು ಮಾಡಿದರೆ ದೂರವಾಣಿ ಕರೆಗಳು ಬರಲು ಆರಂಭಿಸುತ್ತವೆ. ಚುನಾವಣೆಯ ಸಂದರ್ಭದಲ್ಲಿ ಆಯೋಗದ ನಿರ್ದೇಶನ, ನೀತಿ, ನಿಯಮಾವಳಿಗಳ ಪ್ರಕಾರ ಕೆಲಸ ಮಾಡುವುದರಿಂದ ಅಧಿಕಾರಿಗಳು ಮುಕ್ತವಾಗಿ ಅಧಿಕಾರ ಚಲಾಯಿಸಬಹುದು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಜರುಗಿಸಬಹುದು. ನಮ್ಮ ಕೈಗಳನ್ನು ಯಾರೂ ಕಟ್ಟಿ ಹಾಕಿರುವುದಿಲ್ಲ. 

ಚುನಾವಣಾ ವೇಳೆ ನಿಮಗೆ ದೊರೆಯುವ ಹೆಚ್ಚುವರಿ ಅಧಿಕಾರಗಳೇನು? 

ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ, ಸಂಹಿತೆ ಜಾರಿಯಾಗುತ್ತದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಚುನಾವಣಾ ಅಧಿಕಾರಿಗಳು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಅಕ್ರಮಗಳು ನಡೆಯದಂತೆ ತಡೆಯಬೇಕಾಗುತ್ತದೆ. ಚುನಾವಣಾ ಕತ್ಯವ್ಯ ನಿರ್ವಹಿಸಲು ಸಿಬ್ಬಂದಿಯ ನಿಯೋಜನೆ, ಅಧಿಕಾರಿಗಳ ತಂಡಗಳ ರಚನೆ ಮಾಡಬೇಕಾಗುತ್ತದೆ. ಚುನಾವಣಾ ಕಾರ್ಯಕ್ಕೆ ಅಗತ್ಯವಾದ ವಾಹನ, ಸ್ಥಳವನ್ನು ಪಡೆಯಬೇಕಾಗುತ್ತದೆ. ಚುನಾವಣಾ ಕಾರ್ಯಕ್ಕೆ ಸೂಕ್ತ ಎನಿಸಿದರೆ ಯಾರ ಮನೆಯನ್ನಾದರೂ ವಶಕ್ಕೆ ಪಡೆಯುವ ಅಧಿಕಾರ ಇರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತೆರಿಗೆ ಇಲಾಖೆ ಸಿಬ್ಬಂದಿ ಸಹಾಯದಿಂದ ಯಾರ ಮನೆಯನ್ನಾದರೂ ಶೋಧಿಸಬಹುದು. ಸರಿಯಾದ ಲೆಕ್ಕ ಇಲ್ಲದೆ ಸಂಗ್ರಹಿಸಿದ ಮತ್ತು ಸಾಗಿಸುವ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. 

ಮತದಾರರ ಜಾಗೃತಿಗೆ ಏನೆಲ್ಲಾ ಕಾರ್ಯಕ್ರಮ ಹಾಕಿಕೊಂಡಿದ್ದೀರಿ?

ಮತದಾರರಲ್ಲಿ ಜಾಗೃತಿ ಮೂಡಿಸಲು ರೇಡಿಯೊ, ಟಿ.ವಿ.ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಶಿಕ್ಷಣ ಸಂಸ್ಥೆ ಮತ್ತು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ  ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !