ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂ.1 ಕಾರ್ಪೊರೇಟರ್‌ ಯಾರಾಗಲಿದ್ದಾರೆ?

Last Updated 10 ಜುಲೈ 2019, 15:35 IST
ಅಕ್ಷರ ಗಾತ್ರ

‘ಇ ದು ನನ್ನ ವಾರ್ಡ್‌, ಇಲ್ಲಿನ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದವನೇ ನಂಬರ್ ಒನ್ ಕಾರ್ಪೊರೇಟರ್’. ಹಾಗೆಂದು ಜನರೇ ಹೇಳಬೇಕು. ಅವರ ಶಿಫಾರಸ್ಸೇ ಪ್ರಶಸ್ತಿಯ ಮಾನದಂಡ.

ಬಹುಶಃ ರಾಜ್ಯದಲ್ಲೇ ಮೊದಲ ಪ್ರಯತ್ನವಿದು. ವಾರ್ಡ್‌ ಸಭೆಗಳನ್ನು ಗರಿಷ್ಠ ಪ್ರಮಾಣದಲ್ಲಿ ನಡೆಸಿದ, ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾದ, ಸದಾ ಕೈಗೆಟಕುವ ಬಿಬಿಎಂಪಿ ಸದಸ್ಯರನ್ನು ಜನರೇ ಆಯ್ಕೆ ಮಾಡಿ ಶಿಫಾರಸು ಮಾಡುತ್ತಾರೆ. ಅವರಿಗೆ ಜುಲೈ 14ರಂದು ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ನಂಬರ್ ಒನ್ ಕಾರ್ಪೊರೇಟರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ‘ಸಿಟಿಜನ್ ಫಾರ್ ಬೆಂಗಳೂರು’ ಸಂಘಟನೆ ಇಂಥದ್ದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.

ಹಲವು ನಾಗರಿಕ ಹೋರಾಟಗಳ ಮೂಲಕವೇ ಗುರುತಿಸಿಕೊಂಡ ಸಿಟಿಜನ್ ಫಾರ್ ಬೆಂಗಳೂರು, ಕಳೆದ ಅಕ್ಟೋಬರ್‌ನಲ್ಲಿ ವಾರ್ಡ್‌ ಸಮಿತಿ ಸಭೆಗಳನ್ನು ನಡೆಸಬೇಕು ಎಂದು ಬಿಬಿಎಂಪಿಗೆ ಒತ್ತಾಯ ಮಾಡಿತು. ಅದುವರೆಗೆ ಜನಸಾಮಾನ್ಯರಿಗೆ ಇಂಥದ್ದೊಂದು ಸಮಿತಿಯ ಬಗ್ಗೆ ಅರಿವೇ ಇರಲಿಲ್ಲ. ಹೀಗೆ ಮನವಿ ಸಲ್ಲಿಸಿದಂದೇ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ವಾರ್ಡ್‌ ಸಮಿತಿ ಸಭೆಗಳನ್ನು ಪ್ರತಿ ತಿಂಗಳ ಮೊದಲ ಶನಿವಾರ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚನೆ ಹೊರಡಿಸಿದರು. ಅಂದು ನಿಧಾನಗತಿಯಲ್ಲಿ ಆರಂಭವಾದ ಈ ಸಭೆಗಳ ಸಂಖ್ಯೆ ಇಂದು 500ಕ್ಕೂ ಹೆಚ್ಚಾಗಿದೆ.

ಎಂಟು ತಿಂಗಳ ನಿರಂತರ ಅಭಿಯಾನಕ್ಕೆ ಕೊನೆಗೂ ನಿರೀಕ್ಷಿತ ಫಲಿತಾಂಶ ಸಿಕ್ಕಿದೆ ಎಂದು ದೀರ್ಘ ನಿಟ್ಟುಸಿರು ಬಿಟ್ಟರು ಸಿಟಿಜನ್ ಪೋರಂನ ಶಿಲ್ಪಾ.

ಅದು ಸುಲಭವಾಗಿರಲಿಲ್ಲ...

ಪಾಲಿಕೆ ಸದಸ್ಯರಿಗೆ ನಿಮ್ಮ ವಾರ್ಡ್‌ನಲ್ಲಿ ಯಾವಾಗ ಸಭೆ ಮಾಡುತ್ತೀರಿ ಎಂದು ಕೇಳಿದಾಗ, ಅದನ್ನು ಕೇಳಲು ನೀವ್ಯಾರು? ನಮಗೆ ಬೇಕಾದಾಗ ಮಾಡುತ್ತೇವೆ ಎಂದು ಉಡಾಫೆಯ ಉತ್ತರ ಕೊಟ್ಟವರಿದ್ದರು. ಅವಮಾನಿಸಿದವರೂ ಇದ್ದಾರೆ. ಅವೆಲ್ಲವನ್ನೂ ಮೀರಿ ನಮ್ಮ ಅಭಿಯಾನ ಮುಂದುವರಿಯಿತು. ಬೇರೆ ಬೇರೆ ನಾಗರಿಕ ಸಂಘಟನೆಗಳೂ ಅಭಿಯಾನವನ್ನು ಬೆಂಬಲಿಸಿದವು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮುಂದುವರಿಸಿದೆವು. ಹೀಗೆ ಜನಬೆಂಬಲ ಬೆಳೆಯಿತು ಎಂದು ಹೋರಾಟದ ಹಾದಿಯನ್ನು ನೆನಪಿಸಿದರು ಅವರು.

ವಾರ್ಡ್‌ ಸಭೆ ಮಾಡಿ ಸುಮ್ಮನಿರಲಿಲ್ಲ. ಜನ ನಿರೀಕ್ಷಿಸಿದ ಸಣ್ಣ ಕೆಲಸಗಳಾದಾಗಲೂ ಅದನ್ನು ಪ್ರಶಂಸೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿದ್ದೆವು. ಕೆಲಸ ಆಗದಿದ್ದರೂ ಅದೇ ಮಾಧ್ಯಮಗಳಲ್ಲಿ ವರದಿ ಬರುತ್ತಿತ್ತು. ಹೀಗಾದಾಗ ಪಾಲಿಕೆ ಸದಸ್ಯರೂ ಎಚ್ಚರದಿಂದ ಇದ್ದರು.

14ರಂದು ಪುರಭವನಕ್ಕೆ ಬನ್ನಿ

ಇಷ್ಟೆಲ್ಲಾ ಆದ ಮೇಲೆ ಕೆಲಸ ಮಾಡಿದ ಸದಸ್ಯರನ್ನು ಗೌರವಿಸಬೇಕು. ಅದಕ್ಕಾಗಿ ನಾವು ನಂಬರ್ ಒನ್ ಕಾರ್ಪೊರೇಟರ್ ಪ್ರಶಸ್ತಿ ಇಟ್ಟಿದ್ದೇವೆ. ಯಾರಿಗೆ ಪ್ರಶಸ್ತಿ? ಎಷ್ಟು ಜನ ಇದ್ದಾರೆ ಎಂಬುದಕ್ಕೆ ನೀವು ಜುಲೈ 14ರಂದು ಬೆಳಿಗ್ಗೆ 10.30ಕ್ಕೆ ಪುರಭವನಕ್ಕೆ ಬನ್ನಿ ಎಂದು ಕುತೂಹಲವನ್ನು ಉಳಿಸಿದರು ಶಿಲ್ಪಾ. ಪ್ರಶಸ್ತಿ ಪುರಸ್ಕೃತರಿಗೆ ಇದೊಂದು ಉತ್ತೇಜನವಾಗಬೇಕು. ಸಿಗದಿದ್ದವರಿಗೆ ಪ್ರೇರಣೆ ಸಿಗಬೇಕು ಎಂಬುದೇ ಈ ಕಾರ್ಯಕ್ರಮದ ಉದ್ದೇಶ ಎಂದರು.

ಪ್ರಶಸ್ತಿ ಆಯ್ಕೆಗೂ ರೇಟಿಂಗ್!

ಉತ್ತಮ ಕಾರ್ಪೊರೇಟರ್‌ ಆಯ್ಕೆಗೆಸಿಟಿಜನ್ ಫಾರ್ ಬೆಂಗಳೂರು ಸಂಘಟನೆ ರೇಟಿಂಗ್‌ ವ್ಯವಸ್ಥೆ ಮಾಡಿದೆ.
ಪಾಲಿಕೆಯ ಪ್ರತಿ ಸದಸ್ಯನ ಕಾರ್ಯಕ್ಷಮತೆ ಹೇಗಿದೆ ಎಂಬುದನ್ನು ಜನರೇ ತೀರ್ಮಾನಿಸಲಿದ್ದಾರೆ. ಸಿಎಫ್ಬಿ ವೆಬ್‌ಸೈಟ್‌ನಲ್ಲಿ 198 ವಾರ್ಡ್‌ ಕಾರ್ಪೊರೇಟ್‌ಗಳ ಕಾರ್ಯದಕ್ಷತೆಗೆ ಸಂಬಂಧಿಸಿದಂತೆ ರೇಟಿಂಗ್ ಮಾಡಬೇಕು. ಇದುವರೆಗೆ ಸುಮಾರು ಏಳು ಸಾವಿರಕ್ಕೂ ಅಧಿಕ ಜನರು ರೇಟಿಂಗ್ ಕೊಟ್ಟಿದ್ದಾರೆ.

ಪ್ರತಿಕ್ರಿಯೆಗಳು ಮುಂದುವರಿಯುತ್ತಲೇ ಇವೆ. ಈ ಮಾಹಿತಿಯನ್ನು ಆಧರಿಸಿ ಸದಸ್ಯರಿಗೆ ಶ್ರೇಯಾಂಕ ನೀಡುತ್ತೇವೆ. ಒಟ್ಟಿನಲ್ಲಿ ವಾರ್ಡ್‌ ಸಮಿತಿ ಸಭೆ, ವೆಬ್‌ಸೈಟ್‌ನ ರೇಟಿಂಗ್ ಇವೆಲ್ಲವನ್ನೂ ಆಧರಿಸಿ ಸದಸ್ಯರನ್ನು ನಂಬರ್ ಒನ್ ಕಾರ್ಪೊರೇಟರ್ ಎಂದು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಶಿಲ್ಪಾ ಮಾಹಿತಿ ನೀಡಿದರು.

ದಂಡ ಕಟ್ಟುತ್ತಿದ್ದವರು ಸಭೆ ಮಾಡಿದರು...

ವಾರ್ಡ್‌ ಸಮಿತಿ ಸಭೆಗಳನ್ನು ಮಾಡಬೇಕು. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂದು 2016–17ರಲ್ಲೇ ಹೈಕೋರ್ಟ್‌ ಆದೇಶ ನೀಡಿತ್ತು. ಆದರೆ, ಬಹುತೇಕ ಸದಸ್ಯರು ದಂಡ ಕಟ್ಟುತ್ತಿದ್ದರೇ ವಿನಃ ಸಭೆ ಮಾಡುತ್ತಿರಲಿಲ್ಲ. ನಿರಂತರ ಜಾಗೃತಿ ಮತ್ತು ಜನರ ಒತ್ತಾಯದ ಪರಿಣಾಮ ಇಂದು ಸಭೆಗಳು ನಡೆಯುತ್ತಿವೆ. ಸಭೆಯ ನಿರ್ಣಯಗಳು ಬಿಬಿಎಂಪಿ ವೆಬ್ ಸೈಟ್‌ನಲ್ಲಿ ಪ್ರಕಟವಾಗುತ್ತಿವೆ. ಯಾವುದೇ ಸಮಸ್ಯೆ ಅದರ ತೀವ್ರತೆಯ ಆಧಾರದಲ್ಲಿ ಮುಂದಿನ ವಾರ್ಡ್‌ ಸಮಿತಿ ಸಭೆಯೊಳಗೆ ಬಗೆಹರಿದಿರಬೇಕು. ಅಂಥ ಫಾಲೋಅಪ್ ವ್ಯವಸ್ಥೆ ಬಂದಿದೆ.

ಹೇಗಿರುತ್ತದೆ ವಾರ್ಡ್‌ ಸಭೆ?

ವಾರ್ಡ್‌ ಸಮಿತಿಯಲ್ಲಿ 11 ಸದಸ್ಯರಿರಬೇಕು. ಬಿಬಿಎಂಪಿ ಸದಸ್ಯ ಸಮಿತಿಯ ಅಧ್ಯಕ್ಷ. ಮೂವರು ಮಹಿಳೆಯರು, ಇಬ್ಬರು ಪರಿಶಿಷ್ಟ ಜಾತಿ, ಪಂಗಡದ ಸದಸ್ಯರು, ಇಬ್ಬರು ಸಾಮಾನ್ಯ ವರ್ಗದ ಸದಸ್ಯರು, ಇಬ್ಬರು ನಿವಾಸಿ ಕಲ್ಯಾಣ ಸಂಘಗಳ ಪ್ರತಿನಿಧಿಗಳು, ಒಬ್ಬ ಕಾರ್ಯದರ್ಶಿ (ವಾರ್ಡ್‌ ವ್ಯಾಪ್ತಿಯ ಅಧಿಕಾರಿ/ಕಾರ್ಯಪಾಲಕ ಎಂಜಿನಿಯರ್) ಇರುತ್ತಾರೆ. ಸಭೆಯಲ್ಲಿ ಸಾರ್ವಜನಿಕರು ಭಾಗವಹಿಸಬಹುದು. ತಮ್ಮ ಸಮಸ್ಯೆಗಳನ್ನು ಸದಸ್ಯರ ಮೂಲಕ ಸಲ್ಲಿಸಿ ಚರ್ಚೆಗೆ ಇಡಬಹುದು. ಎಲ್ಲ ಇಲಾಖೆಗಳ ಅಧಿಕಾರಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಬೇಕು.

ಏನಿದು ಸಿಎಫ್ ಬಿ?

ಸಿಟಿಜನ್ ಫಾರ್ ಬೆಂಗಳೂರು ಒಂದು ತಳಮಟ್ಟದ ನಾಗರಿಕ ಸಂಘಟನೆ. ಸಾರ್ವಜನಿಕ ರಾಜಕೀಯ ಕ್ಷೇತ್ರದಲ್ಲಿ ಜನಪರ ಕೆಲಸಗಳಿಗಾಗಿ ಒತ್ತಡ ಹೇರುವ ತಂಡ. ಬೆಂಗಳೂರು ಉದ್ಯಾನ ನಗರವಾಗಿ ವೈಭವವನ್ನು ಮರುಗಳಿಸಬೇಕು, ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನ ಸಿಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸ್ವಯಂ ಸೇವಕರಿಂದಲೇ ನಿರ್ವಹಿಸಲ್ಪಡುವ ಕಾರ್ಯಪಡೆ. ಹಾಗೆಂದು ಇದು ಸರ್ಕಾರೇತರ ಸಂಘಟನೆಯೂ ಅಲ್ಲ. ಹಣಕಾಸು ವ್ಯವಹಾರಗಳೂ ಇಲ್ಲಿಲ್ಲ.

ಹೋರಾಟದ ಯಶೋಗಾಥೆ

2016– ಸ್ಟೀಲ್ ಫ್ಲೈ ಓವರ್ ಬೇಡ– ಮಾನವ ಸರಪಳಿ: ಕೊನೆಗೂ ಆ ಯೋಜನೆ ರದ್ದಾಯಿತು.
2016 ಡಿಸೆಂಬರ್: ನಗರಕ್ಕೆ ಬೇಕು ಚುಕುಬುಕು– ಉಪನಗರ ರೈಲು ಯೋಜನೆಗೆ ಒತ್ತಾಯ; ಅನುಷ್ಠಾನ ಪ್ರಗತಿಯಲ್ಲಿದೆ.
2017: ಮರ ಕಡಿಯಬೇಡಿ
2017: ನಮ್ಮ ಸಮಿತಿ ನಮಗಾಗಿ (ಇನ್ನೂ ಮುಂದುವರಿದಿದೆ)
2017: ಮಾದರಿ ವಿಧಾನಸಭೆ ಕುರಿತು ಜನಜಾಗೃತಿ, ಬಸ್ ಭಾಗ್ಯ ಬೇಕು. ಹೆಚ್ಚು ಬಸ್ ಗಳಿಗೆ ಒತ್ತಾಯ
2017 ಜುಲೈ: ಹೊಸ ವಲಯಗಳು ಬೇಡ– ಹೋರಾಟ
2017 ಅಕ್ಟೋಬರ್: ಬೇಕು ಬೇಡ ಸಂತೆ
2018 ಫೆಬ್ರುವರಿ: ಸ್ಕೈ ವಾಕ್ ಬೇಡ; ಫುಟ್ಪಾತ್ ಬೇಕು ಹೋರಾಟ
2018 ಮೇ: ನಮ್ಮ ಮತ, ನಮ್ಮ ಹಿತ– ಅಣಕು ಮತದಾನ
2018 ಜೂನ್: ಪೌರಕಾರ್ಮಿಕರಿಗೆ ವೇತನಕ್ಕಾಗಿ ಹೋರಾಟ
2018 ಆಗಸ್ಟ್: ಮೊದಲು ಟ್ರೈನ್ ಬೇಕು– ಉಪನಗರ ರೈಲಿಗಾಗಿ ಹೋರಾಟ
2019 ಮಾರ್ಚ್‌: ಎಲಿವೇಟೆಡ್ ಕಾರಿಡಾರ್: ಟೆಂಡರ್‌ ರದ್ದು ಮಾಡಿ ಹೋರಾಟ
2019 ಜುಲೈ: ನಂಬರ್ ಒನ್ ಕಾರ್ಪೊರೇಟರ್ ಪುರಸ್ಕಾರ.

ಮಾನದಂಡಗಳೇನು?

ಕಾರ್ಪೊರೇಟರ್‌ ಜನಪರ ಕೆಲಸಗಳನ್ನು ಮುಂದಿಟ್ಟು ರೇಟಿಂಗ್ ಕೊಡಲು ಸಂಸ್ಥೆ ಕೋರಿದೆ. ಅದಕ್ಕಾಗಿ ಸಂಸ್ಥೆ ಕೆಲವು ಮಾನದಂಡ ನಿಗದಿ ಮಾಡಿದೆ.

l ವಾರ್ಡ್‌ ಸ್ವಚ್ಛತೆ, l ಬೀದಿ ದೀಪ ನಿರ್ವಹಣೆ

lಜನರ ಅಳಲಿಗೆ ಸ್ಪಂದಿಸುವ ರೀತಿ lಕುಡಿಯುವ ನೀರು ಸೌಲಭ್ಯ

lರಸ್ತೆ ಗುಂಡಿ ಮುಚ್ಚುವುದು lಉದ್ಯಾನ ನಿರ್ವಹಣೆ

lಸಾರಿಗೆ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT